ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ: ಅಗತ್ಯ ಭೂಮಿ ನೀಡಲು ಡಿಸಿಗೆ ಮನವಿ
ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಅಗತ್ಯ ಭೂಮಿ ನೀಡಲು ಮನವಿ| ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ| ಈಗಾಗಲೇ 5 ರೈಲು ನಿಲ್ದಾಣಗಳ ನಿರ್ಮಾಣಗೊಂಡು, 33 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು ಅಂದಾಜು 580 ಕೋಟಿ ರು.ಗಳಷ್ಟು ವೆಚ್ಚವಾಗಿದೆ|
ಬಾಗಲಕೋಟೆ(ಜ.30): ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಇವರಿಗೆ ಬುಧವಾರ ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಖಜ್ಜಿಡೋಣಿಯಿಂದ ಕುಡಚಿವರೆಗೆ ಅಗತ್ಯವಿರುವ ಪೂರ್ಣ ಪ್ರಮಾಣದ ಭೂಮಿ ಒದಗಿಸಲು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ಧೀನ ಖಾಜಿ ಮಾತನಾಡಿ, ರೈಲ್ವೆ ಅಧಿಕಾರಿಗಳು ವೈಜ್ಞಾನಿಕವಾಗಿ ಖಜ್ಜಿಡೋಣಿಯಿಂದ ಅಗತ್ಯ ಭೂಮಿಯನ್ನು ಒದಗಿಸಿದರೆ ಕಾಮಗಾರಿಗೆ ಅನುಕೂಲ ಆಗುತ್ತದೆ ಎಂದು ಹೇಳುತ್ತಿದ್ದು ಜಿಲ್ಲಾಡಳಿತ ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ ಮತ್ತು ಕುಡಚಿ ಭಾಗದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದು, ಇದು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ದೂರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೈಲ್ವೆ ಅಧಿಕಾರಿಗಳು ಹೇಳಿದಂತೆ ಈಗಾಗಲೇ ನಿರ್ಮಾಣಗೊಂಡಿರುವ ಖಜ್ಜಿಡೋಣಿಯಿಂದ ಮುಂದಿನ ರೈಲು ಮಾರ್ಗ ಕಾಮಗಾರಿಗಾಗಿ ಭೂಮಿ ಒದಗಿಸಿದಲ್ಲಿ ಕಾಮಗಾರಿ ಪ್ರಾರಂಭಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ಅವರು ಹೇಳಿದಂತೆ ಖಜ್ಜಿಡೋಣಿಯಿಂದ ಜಿಲ್ಲಾಡಳಿತವು ಈ ಕೂಡಲೆ ಭೂಮಿಯನ್ನು ಒದಗಿಸಿ ರೈಲ್ವೆ ಕಾಮಗಾರಿ ಪ್ರಾರಂಭಕ್ಕೆ ಅನುವು ಮಾಡಬೇಕು. ಅದರಂತೆ ಈಗಾಗಲೇ 5 ರೈಲು ನಿಲ್ದಾಣಗಳ ನಿರ್ಮಾಣಗೊಂಡು, 33 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು ಅಂದಾಜು 580 ಕೋಟಿ ರು.ಗಳಷ್ಟು ವೆಚ್ಚವಾಗಿದೆ ಎಂದರು.
ಕಾಮಗಾರಿ ವಿಳಂಬದಿಂದ ಆದ ವೆಚ್ಚ ಹಾಳಾಗುತ್ತಿದ್ದು, ಸಾರ್ವಜನಿಕರ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಆಗುತ್ತಿದೆ. ಈಗಾಗಲೇ ನಿರ್ಮಾಣಗೊಂಡಿರುವ ನಿಲ್ದಾಣಗಳ ಕಟ್ಟಡಗಳು ಅನೈತಿಕ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ರೈಲ್ವೆ ಇಲಾಖೆಯ ಸಮನ್ವಯ ಕೊರತೆಯಿಂದ ಈ ಯೋಜನೆಯು ವಿಳಂಬ ಆಗುತ್ತಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ಇನ್ನು ಹೆಚ್ಚಿಗೆ ವಿಳಂಬ ಮಾಡದೆ ಕುಡಚಿ-ಬಾಗಲಕೋಟೆ ರೈಲು ಮಾರ್ಗವನ್ನು ಶೀಘ್ರವೇ ಪೂರ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಹೋರಾಟ ಸಮಿತಿಯವರು ಸಲ್ಲಿಸಿದ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಶೀಘ್ರವೇ ಸಂಬಂಧಪಟ್ಟರೈಲು ಅಧಿಕಾರಿಗಳಿಗೂ ಹಾಗೂ ತಮ್ಮ ಅಧಿಕಾರಿಗಳಿಗೂ ಈ ಕುರಿತು ಶೀಘ್ರವೇ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಐ.ಎ.ಎಸ್. ಅಧಿಕಾರಿ ಗರಿಮಾ ಪವಾರ ಇವರು ಉಪಸ್ಥಿತರಿದ್ದರು.ನಿಯೋಗದಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ.ಎ. ದಂಡಿಯಾ, ಎನ್.ಬಿ. ಗಸ್ತಿ ವಕೀಲರು ಜಮಖಂಡಿ, ನಜೀರ್ ಕಂಗನೊಳ್ಳಿ ಜಮಖಂಡಿ, ಮೈನುದ್ದೀನ ಖಾಜಿ, ಅಬ್ದುಲ್ ಹಾದಿಮನಿ ಮತ್ತು ಇತರರು ಹಾಜರಿದ್ದರು.