ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಆಗ್ರಹ
ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಆಗ್ರಹಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ರೈಲ್ವೆ ನೌಕರರು ಮೈಸೂರು ರೈಲು ನಿಲ್ದಾಣ ಬಳಿಯ ಡಿಆರ್ಎಂ ಕಚೇರಿ ಹಾಗೂ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರ ಮುಂಭಾಗದಲ್ಲಿ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟಿಸಿದರು.
ಮೈಸೂರು : ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಆಗ್ರಹಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ರೈಲ್ವೆ ನೌಕರರು ಮೈಸೂರು ರೈಲು ನಿಲ್ದಾಣ ಬಳಿಯ ಡಿಆರ್ಎಂ ಕಚೇರಿ ಹಾಗೂ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರ ಮುಂಭಾಗದಲ್ಲಿ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟಿಸಿದರು.
2006ರ ಏಪ್ರಿಲ್ ನಿಂದ ಆಯ್ಕೆಯಾದ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಈ ಯೋಜನೆಯಿಂದ ನೌಕರರಿಗೆ ಅಭದ್ರತೆ ಕಾಡುತ್ತಿದೆ ಎಂದು ಅವರು ಆರೋಪಿಸಿದರು.
ಹೊಸ ಪಿಂಚಣಿ ಯೋಜನೆಯಿಂದ ನೌಕರರು ನಿವೃತ್ತಿ ಕಾಲವನ್ನು ನೆಮ್ಮದಿಯಿಂದ ಕಳೆಯಲು ಆಗುವುದಿಲ್ಲ. ಅಲ್ಲದೆ ನಿವೃತ್ತಿಯಾದ ನೌಕರರು ಸಂಧ್ಯಾಕಾಲದಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಒಂದು ವೇಳೆ ನೌಕರ ಅಕಾಲಿಕ ಮರಣ ಹೊಂದಿದರೆ ಕುಟುಂಬ ಬೀದಿ ಪಾಲಾಗುತ್ತದೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಹೊಸ ಪಿಂಚಣಿ ಯೋಜನೆ ರದ್ದು ಮಾಡಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಯೂನಿಯನ್ ಮೈಸೂರು ವಿಭಾಗೀಯ ಅಧ್ಯಕ್ಷ ಎಸ್. ಸೋಮಶೇಖರ್, ಕಾರ್ಯದರ್ಶಿ ಪಿ. ಶಿವಪ್ರಕಾಶ್, ವಿ. ಅಶೋಕ್ ಕುಮಾರ್, ನಾಗೇಂದ್ರನ್, ರೈಲ್ವೆ ಕಾರ್ಯಾಗಾರ ಶಾಖೆಯ ಅಧ್ಯಕ್ಷ ಕೆ. ಮಂಜುನಾಥ, ಕಾರ್ಯದರ್ಶಿ ಎಂ. ಯತಿರಾಜು, ಖಜಾಂಚಿ ಕೆ.ಕೆ. ಪವಿತ್ರನ್ ಮೊದಲಾದವರು ಇದ್ದರು.