Kodagu: ಸಚಿವ ಸ್ಥಾನಕ್ಕೆ ಕೊಡವ ಸಮಾಜಗಳ ಆಗ್ರಹ
ಕೊಡವ ಸಮಾಜವನ್ನು ಪ್ರತಿನಿಧಿಸಿ ಗೆದ್ದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ವಿವಿಧ ಕೊಡವ ಸಮಾಜಗಳು ಆಗ್ರಹಿಸಿವೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಮೇ.26): ಕೊಡವ ಸಮಾಜವನ್ನು ಪ್ರತಿನಿಧಿಸಿ ಗೆದ್ದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ವಿವಿಧ ಕೊಡವ ಸಮಾಜಗಳು ಆಗ್ರಹಿಸಿವೆ. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿರಾಜಪೇಟೆಯಲ್ಲಿ ವಿವಿಧ ಕೊಡವ ಸಮಾಜಗಳ ಮುಖಂಡರು ಸಭೆ ನಡೆಸಿದರು.
ಪೊನ್ನಣ್ಣ ಅವರು ಇನ್ನೂ ಕಿರಿಯವರೆಂದು ಸಚಿವ ಸ್ಥಾನ ನೀಡಲು ಒಂದು ವೇಳೆ ಹಿಂದೇಟು ಹಾಕಿದರೆ ಜಿಲ್ಲೆಯಲ್ಲಿ ಪಕ್ಷಭೇದ ಮರೆತು ತೀವ್ರ ಹೋರಾಟ ನಡೆಸಲು ಕೊಡವ ಸಮಾಜಗಳು ನಿರ್ಧರಿಸಿವೆ. ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ವಿವಿಧ ಕೊಡವ ಸಮಾಜಗಳ ಮುಖಂಡರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯ ಮಾಡಲು ನಿರ್ಧರಿಸಿವೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೊಡವ ಜನಾಂಗದ ಏಕೈಕ ಪ್ರತಿನಿಧಿಯಾಗಿರುವ ಎ.ಎಸ್ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡಬೇಕು, ಒಂದು ಸಮಯ ಅವರು ಕಿರಿಯವರೆಂದು ಸಚಿವ ಸ್ಥಾನ ನೀಡಲು ಹಿಂದೇಟು ಹಾಕಿದ್ದರೆ ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ, ಆಗತ್ಯ ಬಿದ್ದರೆ ಕೊಡಗಿನ ಮೂಲನಿವಾಸಿಗಳನ್ನೂ ಕೂಡ ಒಂದುಗೂಡಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಗುರುವಾರ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆದ ಜಿಲ್ಲೆಯ ವಿವಿಧ ಕೊಡವ ಸಮಾಜ ಹಾಗೂ ಕೊಡವ ಸಂಘಟನೆಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಬುಡಕಟ್ಟು ಜನರ ಕುಂಡೆ ಹಬ್ಬ: ಶುಶ್ರೂಷಕಿ ವೇಷ ಧರಿಸಿ ನರ್ತಿಸಿದ ಯುವಕರು
ಈ ಸಂದರ್ಭದಲ್ಲಿ ಕೊಡವ ಸಮಾಜ ಒಕ್ಕೂಟದ ಪ್ರತಿನಿಧಿ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳು ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡದಿದ್ದರೆ ಒಗ್ಗಟ್ಟಿನ ಹೋರಾಟ ನಡೆಸಲು ಸಭೆ ತೀರ್ಮಾನಿಸಿ ಸದ್ಯದಲ್ಲಿಯೇ ಮುಖ್ಯಮಂತ್ರಿ ಹಾಗೂ ವರಿಷ್ಟರ ಬಳಿ ನಿಯೋಗ ತೆರಳಲು ಸಭೆ ನಿರ್ಧರಿಸಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಸುಧೀರ್ಘ ಅವಧಿಯ ಬಳಿಕ ಕೊಡವ ಜನಾಂಗಕ್ಕೆ ಒಬ್ಬರು ಉತ್ತಮ ಜನಪ್ರತಿನಿಧಿ ಸಿಕ್ಕಿದ್ದಾರೆ. ಜನಾಂಗದ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಎ.ಎಸ್ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡಬೇಕಿದೆ ಇದರಲ್ಲಿ ಯಾವುದೇ ರಾಜಕೀಯ ಲೇಪ ಹಾಕದೆ ಪಕ್ಷಾತೀತವಾಗಿ ಎಲ್ಲರು ಒಂದಾಗಬೇಕಿದೆ ಎಂದುರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ ವಿರಾಜಪೇಟೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆ ಆಗಿರುವ ಪೊನ್ನಣ್ಣ ಅವರು ಪಕ್ಷ ಯಾವುದೇ ಇದ್ದರು ಅವರು ಇಂದು ಪಕ್ಷಾತೀತರು. ಅವರು ಎಲ್ಲಾ ಪಕ್ಷದ ಸಹಾಯದಿಂದ ಗೆಲುವು ಸಾಧಿಸಿದ್ದಾರೆ, ಹೊರತು ಒಂದೇ ಪಕ್ಷದ ಮತದಿಂದ ಆಯ್ಕೆಯಾಗಿಲ್ಲ. ಆದ್ದರಿಂದ ಕೊಡಗಿನ ಜ್ವಲಂತ ಸಮಸ್ಯೆಗಳನ್ನು ನೀಗಿಸಿ ಮುನ್ನಡೆಯಲು ಪೊನ್ನಣ್ಣರಿಗೆ ಸಚಿವ ಸ್ಥಾನ ದೊರೆಯಬೇಕಿದೆ ಎಂದು ಒತ್ತಾಯಿಸಿದರು.
ಜಮ್ಮ ಸಮಸ್ಯೆ ಬಗ್ಗೆ ಮಸೂದೆಗೆ ರಾಷ್ಟ್ರಪತಿ ಅವರ ಸಹಿ ಆಗಿ ಎಂಟು ವರ್ಷ ಕಳೆದರು ಜಾರಿಯಾಗದೆ ಸಮಸ್ಯೆ ಹಾಗೇ ಇದೆ. ಕೋವಿ ಸಮಸ್ಯೆ ಸೇರಿದಂತೆ ಪೊನ್ನಂಪೇಟೆಯ ಕ್ರೀಡಾ ಶಾಲೆಯಲ್ಲಿ ಕೊಡಗಿನ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನು ಹಲವು ಗಭೀರ ಸಮಸ್ಯೆಗಳಿವೆ. ಇದಕ್ಕೆ ನಮ್ಮಗೆ ಸಮರ್ಥವಾದ ಸಚಿವರು ಬೇಕು. ಈ ನಿಟ್ಟಿನಲ್ಲಿ ಅಖಿಲ ಕೊಡವ ಸಮಾಜ ನೇತ್ರತ್ವದಲ್ಲಿ ಪಕ್ಷಾತೀತವಾಗಿ ಸಚಿವ ಸ್ಥಾನಕ್ಕೆ ಆಗ್ರಹಿಸಬೇಕು. ಆಗತ್ಯವಾದರೆ ಎಲ್ಲರೂ ಸೇರಿ ಹೋರಾಟ ನಡೆಸಬೇಕಿದೆ ಎಂದರು.
ಮೇ 19 ರಿಂದ ಸರ್ವರ್ ಬಂದ್, 10 ಕೆ. ಜಿ ಫ್ರೀ ಅಕ್ಕಿ ಕೊಡುವುದಕ್ಕೆ ಬಿತ್ತಾ ಕತ್ತರಿ?
ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಪೂವಯ್ಯ ಮಾತನಾಡಿ ಈ ಬಾರಿ ಆಯ್ಕೆಯಾದ ಎ ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು. ನಮ್ಮ ಕೊಡಗಿನ ಗಭೀರ ಸಮಸ್ಯೆಗಳು ಪರಿಹಾರ ಕಾಣಬೇಕಾದರೆ ಈಗಿನ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಜಿಲ್ಲೆಗೆ ಹಾಗೆ ಬಂದು ಈಗೆ ಹೋಗುವ ಉಸ್ತುವಾರಿಗಳು ಬೇಡ. ನಮ್ಮದೆ ಸಚಿವರು, ನಮ್ಮದೇ ಉಸ್ತುವಾರಿ ಇದ್ದರೆ ಆಡಳಿತ ಸುಗಮವಾಗಿ ಉತ್ತಮವಾಗಿ ಜಿಲ್ಲೆಯಲ್ಲಿ ಸಾಗುತ್ತದೆ. ಆದರಿಂದ ರಾಜ್ಯದ ಮುಖ್ಯಮಂತ್ರಿಯವರನ್ನು ಅಖಿಲ ಕೊಡವ ಸಮಾಜ ನೇತ್ರತ್ವದಲ್ಲಿ ನಿಯೋಗದೊಂದಿಗೆ ತೆರಳಿ ಭೇಟಿಯಾಗಿ ಬೇಡಿಕೆ ಸಲ್ಲಿಸುವ ಎಂದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಚುನಾವಣೆ ಸಮಯದಲ್ಲಿ ಜನಾಂಗದ ಹಿತದೃಷ್ಟಿಯಿಂದ ನಾವು ಯಾವುದೇ ರಾಜಕೀಯ ಮಾಡಿಲ್ಲ. ಹಾಗೇ ಯಾವುದೇ ಪಕ್ಷಕ್ಕೂ ಪರ, ವಿರೋಧ ವ್ಯಕ್ತಪಡಿಸಿಲ್ಲ. ಚುನಾವಣೆಯೇ ಬೇರೆ, ಸಚಿವ ಸ್ಥಾನ ನೀಡುವುದೇ ಬೇರೆ. ಚುನಾವಣೆಗೆ ಸಚಿವ ಸ್ಥಾನವನ್ನು ಬೆರೆಸುವುದು ಬೇಡ. ನಾವು ಪಕ್ಷಾತೀತವಾಗಿ ಸಚಿವ ಸ್ಥಾನಕ್ಕೆ ಹೋರಾಟ ಮಾಡಬೇಕಿದೆ. ಈ ಮೂಲಕ ಏಕೈಕ ಕೊಡವ ಶಾಸಕನಿಗೆ ಸರ್ಕಾರ ಉನ್ನತ ಸ್ಥಾನಮಾನ ನೀಡಬೇಕಿದೆ ಎಂದರು. ಅಖಿಲ ಕೊಡವ ಸಮಾಜದ ಮುಖಂಡರು ಹಾಗೂ ವಿವಿಧ ಕೊಡವ ಸಮಾಜ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.