Asianet Suvarna News Asianet Suvarna News

ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಡಿಮ್ಯಾಂಡ್

ಸಂಕಷ್ಟದಲ್ಲಿರುವ ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

Demand for complete waiver of agricultural loans incurred by farmer snr
Author
First Published Dec 10, 2023, 9:04 AM IST

  ಕೆ.ಆರ್. ನಗರ : ಸಂಕಷ್ಟದಲ್ಲಿರುವ ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ರಾಜಕೀಯ ಹೊರತಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದು, ಬೆಂಗಳೂರಿನಲ್ಲಿ ಡಿ. 23ರಂದು ರೈತರ ಬೃಹತ್ ಮಹಾ ಅಧಿವೇಶನ ನಡೆಯಲಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಕೈಗಾರಿಕಾ ಉದ್ಯಮಿಗಳು ಸಂಕಷ್ಠಕ್ಕೆ ಎದುರಾದಾಗ 12 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ ಸರ್ಕಾರ ರೈತರ ಬಗ್ಗೆ ಏತಕ್ಕಾಗಿ ನಿರ್ಲಕ್ಷ್ಯ ತಾಳಿದೆ ಎಂದು ಪ್ರಶ್ನಿಸಿದ ಕುರುಬೂರು ಶಾಂತಕುಮಾರ್ ಸಾಲಮನ್ನಾ ಆಗಬಾರದು ಎಂಬ ಉದ್ದೇಶದಿಂದ ಬ್ಯಾಂಕ್ಗಳು ಮತ್ತು ಸಹಕಾರ ಸಂಘಗಳು ರೈತರಿಂದ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ, ಈ ಬಗ್ಗೆ ರೈತ ಮುಖಂಡರು ಜಾಗೃತರಾಗಬೇಕು ಎಂದು ಮನವಿ ಮಾಡಿದರು.

ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಇದರ ಜತೆಗೆ ದೆಹಲಿಯಲ್ಲಿ ರೈತ ಮುಖಂಡರು ಹೋರಾಟ ಮಾಡುತ್ತಿದ್ದ ಸಂಧರ್ಭದಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಭರವಸೆಯಂತೆ ರೈತರ ಪರವಾದ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಬರಗಾಲಕ್ಕೆ ಎಕರೆಗೆ 2 ಸಾವಿರ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿಗಳು ಕನಿಷ್ಠ 25 ಸಾವಿರ ನೀಡಬೇಕು ಎಂದು ಒತ್ತಾಯಿಸಿದ ಶಾಂತಕುಮಾರ್ ತೆಲಂಗಾಣದಲ್ಲಿ ಪ್ರತಿ ಎಕರೆಗೆ 10 ಸಾವಿರ ರು. ಗಳನ್ನು ಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಗಾಗಿ ನೀಡುತ್ತಿದ್ದಾರೆ ರಾಜ್ಯ ಸರ್ಕಾರ ಇದನ್ನು ಮನಗಾಣಬೇಕು ಎಂದು ಮನವಿ ಮಾಡಿದರು. ದೆಹಲಿಯಲ್ಲಿ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಪಾಲ್ಗೊಂಡ ರೈತ ಮುಖಂಡರ ಮೇಲೆ ಹಾಕಲಾಗಿರುವ ಮೊಕದ್ದಮೆಗಳನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಅತ್ತಳ್ಳಿ ದೇವರಾಜು, ಹೇಮೇಶ್, ಜಯಶಂಕರ್, ಎಸ್.ಕೆ. ರೇವಣ್ಣ, ಚಂದ್ರಶೇಖರಯ್ಯ, ಮಂಜುಳ, ವೀಣಾ, ಜಯಮ್ಮ, ಸುಮಿತ್ರಾ ಇದ್ದರು.

Follow Us:
Download App:
  • android
  • ios