Asianet Suvarna News Asianet Suvarna News

Chikkamagaluru: ಭದ್ರಾ ಹಿನ್ನೀರಿನ ಮೀನುಗಳಿಗೆ ಡಿಮ್ಯಾಂಡಪ್ಪೋ ..ಡಿಮ್ಯಾಂಡು! 

ಬಯಲು ಸೀಮೆಗೆ ನೀರು ಕೊಡಲು ಹೋಗಿ ನರಸಿಂಹರಾಜಪುರ ತಾಲೂಕು ಅರ್ಧ ಮುಳುಗಡೆಯಾಗಿದ್ದು ಇತಿಹಾಸವಾದರೆ ಅದೇ ಭದ್ರಾ ಡ್ಯಾಂನ ಭದ್ರಾ ಹಿನ್ನೀರಿನಲ್ಲಿ ಈಗ ಸಿಗುತ್ತಿರುವ ಮೀನುಗಳಿಗೆ ಎಲ್ಲಡೆ ಬೇಡಿಕೆ ಹೆಚ್ಚಾಗಿ ಮೀನುಗಾರರು, ಮೀನು ವ್ಯಾಪಾರಿಗಳು ಹಾಗೂ ಗ್ರಾಹಕರು ಖುಷಿಯಾಗಿದ್ದಾರೆ.

Demand for Bhadra backwater fish in narasimharajapur rav
Author
First Published Jul 15, 2023, 6:28 AM IST

ಯಡಗೆರೆ ಮಂಜುನಾಥ್‌,

ನರಸಿಂಹರಾಜಪುರ (ಜು.15) : ಬಯಲು ಸೀಮೆಗೆ ನೀರು ಕೊಡಲು ಹೋಗಿ ನರಸಿಂಹರಾಜಪುರ ತಾಲೂಕು ಅರ್ಧ ಮುಳುಗಡೆಯಾಗಿದ್ದು ಇತಿಹಾಸವಾದರೆ ಅದೇ ಭದ್ರಾ ಡ್ಯಾಂನ ಭದ್ರಾ ಹಿನ್ನೀರಿನಲ್ಲಿ ಈಗ ಸಿಗುತ್ತಿರುವ ಮೀನುಗಳಿಗೆ ಎಲ್ಲಡೆ ಬೇಡಿಕೆ ಹೆಚ್ಚಾಗಿ ಮೀನುಗಾರರು, ಮೀನು ವ್ಯಾಪಾರಿಗಳು ಹಾಗೂ ಗ್ರಾಹಕರು ಖುಷಿಯಾಗಿದ್ದಾರೆ.

ನರಸಿಂಹರಾಜಪುರ ತಾಲೂಕಿನ ಭದ್ರಾ ಹಿನ್ನೀರು ವ್ಯಾಪ್ತಿಯ ರಾವೂರು, ಲಿಂಗಾಪುರ, ಸೂಸಲವಾನಿ, ಮಾರಿದಿಬ್ಬದಲ್ಲಿ ಮೀನುಗಾರರು ಬಲೆ ಬೀಸಿ ಮೀನು ಹಿಡಿಯವ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿನ ನೂರಾರು ಮೀನುಗಾರರು ಬಲೆ ಬೀಸಿ ಮೀನು ಹಿಡಿದು ಕ್ಯಾಂಪಿಗೆ ತರುತ್ತಾರೆ. ಪಟ್ಟಣದ ಮೀನು ವ್ಯಾಪಾರಿಗಳು ಈ ಮೀನು ಕ್ಯಾಂಪಿಗೆ ಹೋಗಿ ಖರೀದಿ ಮಾಡುತ್ತಾರೆ. ಭದ್ರಾ ಹಿನ್ನೀರಿನ ಮೀನುಗಳಿಗೆ ವಿಶೇಷವಾದ ಬೇಡಿಕೆ ಇದೆ. ನರಸಿಂಹರಾಜಪುರ ತಾಲೂಕಿನ ಜೊತೆಗೆ ಲಕ್ಕವಳ್ಳಿ, ಶಿವಮೊಗ್ಗ, ತರೀಕೆರೆ, ಭದ್ರಾವತಿ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ, ಮಂಗಳೂರು, ಉಡುಪಿ ಭಾಗದಿಂದಲೂ ಗಿರಾಕಿಗಳು ಬಂದು ಇಲ್ಲಿಯ ಮೀನು ಖರೀದಿ ಮಾಡುತ್ತಿರುವುದರಿಂದ ಬೇಡಿಕೆ ಮತ್ತಷ್ಟುಹೆಚ್ಚುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಭದ್ರಾ ಹಿನ್ನೀರಿನಲ್ಲಿ ಸತ್ತ ಚಿರತೆ ಪತ್ತೆ: 3 ಆರೋಪಿಗಳ ಬಂಧನ

ಹಿನ್ನೀರಿನ ಮೀನು ಬಲು ರುಚಿ

ಸಮದ್ರದ ಉಪ್ಪು ನೀರಿನ ಮೀನುಗಳಿಗಿಂತಲೂ ಭದ್ರಾ ಹಿನ್ನೀರಿನ ಮೀನು ಬಲು ರುಚಿಯಾಗಿದೆ ಎಂಬುದು ಮೀನು ಪ್ರಿಯರ ಅಭಿಪ್ರಾಯ. ಭದ್ರಾ ಹಿನ್ನೀರಿನಲ್ಲಿ ಹೆಚ್ಚಾಗಿ ಗೌರಿ, ಕಾಟ್ಲಾ, ರವು, ಹುಲಗಂಡೆ, ಸುರಗಿ, ಗೊಜಳೆ, ಬಾಳೆ, ಕೊಳಚೆ, ಜಿಲೇಬಿ ಹಾಗೂ ಸಣ್ಣ ಮೀನಾದ ಮಿಳಚೆ ಮೀನುಗಳು ಸಹ ಸಿಗುತ್ತಿವೆ. ಕಳೆದ 1 ವಾರದಿಂದ ಕಳಸ, ಕುದುರೆಮುಖ ಭಾಗ ದಲ್ಲಿ ಬಾರೀ ಮಳೆಯಾಗುತ್ತಿರುವುದರಿಂದ ದೊಡ್ಡ, ದೊಡ್ಡ ಮೀನುಗಳು ಹರಿದು ಬಂದು ಮೀನುಗಾರರ ಬಲೆಗೆ ಬೀಳುತ್ತಿವೆ. ನರಸಿಂಹರಾಜಪುರ ಪಟ್ಟಣದ ಹೈಟೆಕ್‌ ಮೀನು ಮಾರುಕಟ್ಟೆಗೆ ಕಳೆದ 3 ದಿನದ ಹಿಂದೆ 57 ಕೆಜಿ ತೂಕದ ಮೀನು ಮಾರುಕಟ್ಟೆಗೆ ಬಂದಿತ್ತು. ಶುಕ್ರವಾರ 56 ಕೆ.ಜಿ.ತೂಕದ ಮೀನು ಬಂದಿದೆ. ಉಳಿದಂತೆ 25, 30,27 ಕೆಜಿ ತೂಕದ ಮೀನುಗಳು ಬರುತ್ತಿದೆ ಎನ್ನುತ್ತಾರೆ ಮೀನಿನ ವ್ಯಾಪಾರಿಗಳು.

ಗೊಜಳ ಎಂಬ ಜಾತಿಯ ಮೀನನ್ನು ಔಷಧಿಗೆ ಉಪಯೋಗಿಸುತ್ತಾರೆ. ಆ ಮೀನಿನ ತಲೆ ಭಾಗದಲ್ಲಿರುವ ಎಣ್ಣೆಯನ್ನು ಔಷಧಿಗಾಗಿ ತೆಗೆಯುತ್ತಾರೆ. ಈ ಮೀನುಗಳು ಭದ್ರಾ ಹಿನ್ನೀರಿನ ದಡ ದಲ್ಲೇ ವ್ಯಾಪಾರವಾಗುತ್ತದೆ. ಗೊಜಳ ಮೀನು ಖರೀದಿ ಮಾಡುವವರದೇ ಒಂದು ತಂಡವಿದು,್ದ ಅವರು ಆ ಔಷಧಿ ಮೀನುಗಳನ್ನು ಖರೀದಿ ಮಾಡಿ ಸಾಗರಕ್ಕೆ ಕೊಂಡೊಯ್ಯುತ್ತಾರೆ. ತುಂಗಾ ನದಿ ಹಾಗೂ ಇತರೆ ನದಿಗಳ ದಡದಿಂದಲೂ ಗೊಜಳ ಮೀನುಗಳು ಸಾಗರಕ್ಕೆ ಬರುತ್ತದೆ. ಅಲ್ಲಿಂದ ವಾಹನಗಳ ಮೂಲಕ ಬೇರೆ ರಾಜ್ಯಗಳ ಔಷಧಿ ತಯಾರಿಕಾ ಕಂಪನಿಗಳಿಗೆ ಗೊಜಳ ಮೀನು ಹೋಗುತ್ತದೆ ಎನ್ನುತ್ತಾರೆ ಮೀನುಗಾರರು.

Chikkamagaluru: ಜೋಡಿಲಿಂಗದಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಆತಂಕ

ತುಂಗಾ ನದಿಯ ಮೀನಿಗಿಂತಲೂ ಭದ್ರಾ ಹಿನ್ನೀರಿನ ಮೀನು ಬಲು ರುಚಿಕರವಾಗಿದೆ. ನಮ್ಮ ಊರಿಗೆ ಬರುವ ನೆಂಟರು ಮೊದಲು ಮೀನಿನ ಬಗ್ಗೆಯೇ ಕೇಳುತ್ತಾರೆ. ಭದ್ರಾ ಹಿನ್ನೀರಿನ ಮೀನು ಎಂಬುದು ನರಸಿಂಹರಾಜಪುರದ ವಿಶೇಷತೆಯಾಗಿದೆ. ಭದ್ರಾ ಮೀನು ನೆಂಟರ ಮಧ್ಯೆ ಪರಸ್ಪರ ಬಾಂಧವ್ಯದ ಪ್ರತೀಕವಾಗಿದೆ. ಮಳೆಗಾಲದಲ್ಲಿ ವಿಶೇಷವಾಗಿ ದೊಡ್ಡ, ದೊಡ್ಡ ಮೀನು ಮಾರುಕಟ್ಟೆಗೆ ಬರುತ್ತಿದ್ದು ಗ್ರಾಹಕರಿಗೆ ಖುಷಿಯಾಗುತ್ತದೆ. ಮೂಡಿಗೆರೆ ಸೇರಿದಂತೆ ವಿವಿಧ ಊರಿನ ಹೋಟೆಲ್‌ ನವರು ಭದ್ರಾ ಹಿನ್ನೀರಿನ ಮೀನಿಗಾಗಿ ಇಲ್ಲಿಗೆ ಬರುತ್ತಾರೆ. ಮೀನು ವ್ಯಾಪಾರಿಗಳು ಸ್ಥಳೀಯರಿಗೆ ಸ್ವಲ್ಪ ರಿಯಾಯ್ತಿ ದರದಲ್ಲಿ ಮೀನು ಮಾರಾಟ ಮಾಡಬೇಕು.

-ಅಭಿನವ ಗಿರಿರಾಜ್‌ ಮೀನು ಖರೀದಿದಾರರು, ನರಸಿಂಹರಾಜಪುರ


ಭದ್ರಾ ಹಿನ್ನೀರಿನ ಮೀನಿಗೆ ಬಾರೀ ಡಿಮ್ಯಾಂಡು ಇದೆ. ಮಂಗಳೂರು, ಉಡುಪಿ ಭಾಗದಿಂದಲೂ ಭದ್ರಾ ಹಿನ್ನೀರಿನ ಮೀನು ಕೊಳ್ಳಲು ಬರುತ್ತಾರೆ. ಕಳಸ, ಕುದುರೆಮುಖ ಭಾಗದಲ್ಲಿ ಈಗ ಮಳೆ ಬರುತ್ತಿರುವುದರಿಂದ ದೊಡ್ಡ ಗಾತ್ರದ ಮೀನು ಬರುತ್ತಿದೆ. ಈಗ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಸಮಸ್ಯೆ ಎಂದರೆ ಹೈಟೆಕ್‌ ಮೀನು ಮಾರುಕಟ್ಟೆಯಲ್ಲಿ ಸ್ವಚ್ಛ ಮಾಡಿದ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವುದಿಲ್ಲ. ಇದರಿಂದ ಮೀನು ಮಾರುಕಟ್ಟೆಗಲೀಜಾಗುತ್ತದೆ. ಪ್ರತಿ ದಿನ ಮೀನು ಮಾರುಕಟ್ಟೆಸ್ವಚ್ಛ ಮಾಡಲು ಪಟ್ಟಣ ಪಂಚಾಯಿತಿಯವರು ಸಿಬ್ಬಂದಿ ನೇಮಿಸಿದರೆ ಒಳ್ಳೆಯದು.

ಪೈರೋಜ್‌, ಮೀನು ವ್ಯಾಪಾರಿ, ನರಸಿಂಹರಾಜಪುರ 
 

Follow Us:
Download App:
  • android
  • ios