ಬೆಂಗಳೂರು[ಮೇ.21]: ವಿಲ್ಸನ್‌ ಗಾರ್ಡನ್‌ನ ಬಿಟಿಎಸ್‌ ರಸ್ತೆಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ವೈಟ್‌ ಟಾಪಿಂಗ್‌ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣರಾದ ಜಲಮಂಡಳಿ ಅಧಿಕಾರಿಗಳ ವಿರುದ್ಧ ಮೇಯರ್‌ ಗಂಗಾಂಬಿಕೆ ಗರಂ ಆಗಿದ್ದಾರೆ.

ಸೋಮವಾರ ಪಾಲಿಕೆ ಅಧಿಕಾರಿಗಳೊಂದಿಗೆ ಮೇಯರ್‌ ಅವರು ವೈಟ್‌ ಟಾಪಿಂಗ್‌ ಕಾಮಗಾರಿ ತಪಾಸಣೆ ನಡೆಸಿದರು. ಈ ವೇಳೆ ಜಲಮಂಡಳಿಯ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್‌ ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮೇಯರ್‌ ಗಮನಕ್ಕೆ ತಂದರು. ಆಗ ಮೇಯರ್‌ ಸಂಬಂಧ ಪಟ್ಟಜಲಮಂಡಳಿಯ ಅಧಿಕಾರಿಗಳಿಗೆ ಒಂದು ವಾರದಲ್ಲಿ ಪೈಪ್‌ಲೈನ್‌ ಸ್ಥಳಾಂತರಿಸಿ ಕಾಮಗಾರಿಗೆ ಅನುವು ಮಾಡಿಕೊಡದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಚರಂಡಿ ಪೈಪ್‌ಲೈನ್‌ ಸ್ಥಳಾಂತರ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಹಂತ ಹಂತವಾಗಿ ನಡೆಸಲು ಸಂಚಾರಿ ಪೊಲೀಸರು ಅನುಮತಿ ನೀಡಿದ್ದಾರೆ. ಅದರಂತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಕೆಲ ರಸ್ತೆಯ ಒಳಚರಂಡಿಗಳು ಮುಚ್ಚಿ ಹೋಗಿರುವುದರಿಂದ ಕೊಳಚೆ ನೀರು ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಜತೆಗೆ ರಾಜಕಾಲುವೆ ತಡೆಗೋಡೆ ಬಿದ್ದುದ್ದು, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಲಿದೆ. ಸಂಬಂಧಪಟ್ಟಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.