ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ವರದಿ ನೀಡಲು ವಿಳಂಬ

ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಪ್ರಕರಣಗಳಲ್ಲಿ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌(ಕೆಎಂಸಿ) ವರದಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಪೊಲೀಸರು ತನಿಖೆ ಪೂರ್ಣಗೊಳಿಸಲು ಆಗದೇ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. 

Delay in Karnataka Medical Council reporting in cases of medical negligence gvd

ಮೋಹನ ಹಂಡ್ರಂಗಿ

ಬೆಂಗಳೂರು (ಜು.29): ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಪ್ರಕರಣಗಳಲ್ಲಿ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌(ಕೆಎಂಸಿ) ವರದಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಪೊಲೀಸರು ತನಿಖೆ ಪೂರ್ಣಗೊಳಿಸಲು ಆಗದೇ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ಪ್ರಕರಣಗಳ ವಿಷಯದಲ್ಲಿ ಏಳೆಂಟು ವರ್ಷವಾದರೂ ಕೆಎಂಸಿ ವರದಿ ನೀಡಿಲ್ಲ. ಇದರಿಂದ ದೂರುದಾರರು ವ್ಯವಸ್ಥೆಯ ಸಂಶಯ ವ್ಯಕ್ತಪಡಿಸುವಂತಾಗಿದೆ.

ಕಳೆದ 9ವರ್ಷಗಳಲ್ಲಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಪ್ರಕರಣಗಳ ಸ್ಥಿತಿಗತಿ ನೋಡಿದರೆ, ಕೆಎಂಸಿಯ ವಿಳಂಬ ನೀತಿ ವೇದ್ಯವಾಗುತ್ತದೆ. ಈ ಅವಧಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆರೋಪದಡಿ 15 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅರ್ಧದಷ್ಟು ಪ್ರಕರಣಗಳಲ್ಲಿ ಕೆಎಂಸಿ ವರದಿ ನೀಡುವಲ್ಲಿ ವಿಳಂಬ ಮಾಡಿರುವುದರಿಂದ ಪೊಲೀಸರು ತನಿಖೆ ಪೂರ್ಣಗೊಳಿಸಲಾಗದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಸದನದಲ್ಲಿ ಶ್ರೀಲಂಕಾ ಮೊಬೈಲ್‌ ಪುರಾಣ: ಸೈಬರ್‌ ಪೊಲೀಸ್‌ಗೆ ಸೈಬರ್‌ ವಂಚಕನ ಗಾಳ ಯತ್ನ

ಏನಿದು ಕೆಎಂಸಿ ವರದಿ
ವೈದ್ಯಕೀಯ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು ಆರೋಪದಡಿ ನೀಡಲಾಗುವ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಾರೆ. ಬಳಿಕ ತನಿಖೆ ಆರಂಭಿಸಿ, ಮೃತ ವ್ಯಕ್ತಿಯ ಕೇಸ್‌ ಹಿಸ್ಟರಿ ಶೀಟ್‌( ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ರೋಗ, ಲಕ್ಷಣ, ವೈದ್ಯರು ನೀಡಲಾದ ಚಿಕಿತ್ಸೆ, ಔಷಧಿಗಳು ಇತ್ಯಾದಿ ಮಾಹಿತಿ) ಕೆಎಂಸಿಗೆ ಕಳುಹಿಸುತ್ತಾರೆ. ಕೆಎಂಸಿ ಈ ಕೇಸ್‌ ಹಿಸ್ಟರಿ ಶೀಟ್ ಪರಿಶೀಲಿಸಿ, ವ್ಯಕ್ತಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣವೇ ಅಥವಾ ಬೇರೇ ಕಾರಣವೇ ಎಂಬುದನ್ನು ಪರಿಶೀಲಿಸಿ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ವರದಿ ನೀಡಬೇಕು. ಈ ವರದಿ ಆಧರಿಸಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ.

9 ವರ್ಷದಿಂದ ವರದಿ ನೀಡದ ಕೆಎಂಸಿ
ಉದಾಹರಣೆಗೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ 2015ರಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು, ಮೃತ ವ್ಯಕ್ತಿಯ ಕೇಸ್‌ ಹಿಸ್ಟರಿ ಶೀಟ್‌ ಅನ್ನು ಕೆಎಂಸಿಗೆ ಕಳುಹಿಸಿದ್ದಾರೆ. ಆದರೆ, ಈವರೆಗೂ ಕೆಎಂಸಿ ವರದಿ ನೀಡಿಲ್ಲ.ಇದರಿಂದ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ರೀತಿಯ ಹಲವು ಪ್ರಕರಣಗಳಲ್ಲಿ ಕೆಎಂಸಿ ವರದಿ ನೀಡುವಲ್ಲಿ ವಿಳಂಬ ಧೋರಣೆ ಮುಂದುವರೆಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕೆಎಂಸಿಗೆ ಪತ್ರ ಬರೆದು ಸುಸ್ತಾದ ಪೊಲೀಸರು
ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಪ್ರಕರಣಗಳ ಸಂಬಂಧ ತ್ವರಿತಗತಿಯಲ್ಲಿ ವರದಿ ನೀಡುವಂತೆ ಪೊಲೀಸರು ಹಲವು ಬಾರಿ ಕೆಎಂಸಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೇ, ಕೆಎಂಸಿ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹತ್ತಾರು ಬಾರಿ ಪತ್ರ ಬರೆದರೂ ಕೆಎಂಸಿ ವರದಿ ನೀಡುವ ಗೋಜಿಗೆ ಹೋಗಿಲ್ಲ.

ಮುಡಾ ಹಗರಣದಿಂದ ಸಿಎಂ ಪಾರಾಗಲು ದೇಸಾಯಿ ಆಯೋಗ ರಚನೆ: ಎಚ್.ಡಿ.ಕುಮಾರಸ್ವಾಮಿ

ಪೊಲೀಸ್‌ ಠಾಣೆಗೆ ಅಲೆದಾಟ
ದೂರುದಾರರು ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್‌ ಠಾಣೆಗಳಿಗೆ ಅಲೆದಾಡುತ್ತಿದ್ದಾರೆ. ಠಾಣೆಗೆ ಬಂದಾಗಲೆಲ್ಲಾ ಕೆಎಂಸಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳುವಂತಾಗಿದೆ. ಪ್ರಕರಣ ದಾಖಲಾಗಿ ಹಲವು ವರ್ಷ ಕಳೆದರೂ ಕೆಎಂಸಿ ವರದಿ ಬಂದಿಲ್ಲ ಎಂದರೆ ಹೇಗೆ ಎಂದು ದೂರುದಾರರು ಪೊಲೀಸರನ್ನೇ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಕೆಎಂಸಿ ವಿಳಂಬ ಧೋರಣೆ ಪೊಲೀಸರ ಹಾಗೂ ದೂರುದಾರರ ಬೇಸರಕ್ಕೂ ಕಾರಣವಾಗಿದೆ.

Latest Videos
Follow Us:
Download App:
  • android
  • ios