ನಿವೇಶನ ವಿತರಣೆ ವಿಳಂಬ: ಪೊಲೀಸರು ಅತಂತ್ರ

ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ನಿವೇಶನ ವಿತರಣೆ ಮಾಡುವಲ್ಲಿ ಅಮರಾವತಿ ಡೆವಲಪ​ರ್‍ಸ್ನವರು ವಿಳಂಬ ಮಾಡುತ್ತಿರುವುದರಿಂದ ಸಂಘದ ಸದಸ್ಯರು ಅತಂತ್ರರಾಗಿದ್ದಾರೆ. ಮುಂದಿನ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಬಿರುಸಿನ ಚರ್ಚೆ ನಡೆದಿದೆ.

Delay in allotment of plot Police indecisive snr

  ಮಂಡ್ಯ (ಜ. 06 ):  ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ನಿವೇಶನ ವಿತರಣೆ ಮಾಡುವಲ್ಲಿ ಅಮರಾವತಿ ಡೆವಲಪ​ರ್‍ಸ್ನವರು ವಿಳಂಬ ಮಾಡುತ್ತಿರುವುದರಿಂದ ಸಂಘದ ಸದಸ್ಯರು ಅತಂತ್ರರಾಗಿದ್ದಾರೆ. ಮುಂದಿನ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಬಿರುಸಿನ ಚರ್ಚೆ ನಡೆದಿದೆ.

ಕಳೆದೊಂದು ವರ್ಷದಿಂದಲೂ ಅಮರಾವತಿ ಡೆವಲಪ​ರ್‍ಸ್ ಮಾಲೀಕ ಚಂದ್ರಶೇಖರ್‌ ಜೊತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಇದುವರೆಗೂ ನಿವೇಶನ ವಿತರಣೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ನವೆಂಬರ್‌ 10ರಂದು ನಡೆದ ಸಭೆಯಲ್ಲಿ ಚಂದ್ರಶೇಖರ್‌ ಅವರು ಜನವರಿ ತಿಂಗಳಲ್ಲಿ ನಿವೇಶನ ನೀಡುವ ಭರವಸೆ ನೀಡಿದ್ದರು.

ಅದರಂತೆ ಗುರುವಾರ ಸಂಘದ ಅಧ್ಯಕ್ಷ ಎಂ.ಸಿ.ಮಂಜುನಾಥ್‌, ಸಿಇಒ ಕೆ.ಎ.ಸಿದ್ದೇಗೌಡ, ನಿರ್ದೇಶಕರು ಹಾಗೂ ನಿವೇಶನಕ್ಕೆ ಹಣ ಪಾವತಿಸಿರುವ ಸದಸ್ಯರು ಅಮರಾವತಿ ಚಂದ್ರಶೇಖರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜನವರಿ ತಿಂಗಳಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದು, ಯಾವ ನಿವೇಶನ ಹಂಚಿಕೆ ಮಾಡುವಿರಿ ಎಂದಾಗ ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದ್ದು, ನಂತರ ನಿವೇಶನ ನೀಡುವುದಾಗಿ ತಿಳಿಸಿದರು.

ಅಮರಾವತಿ ಚಂದ್ರಶೇಖರ್‌ ಹೇಳಿದ ಮಾತಿನಿಂದ ಸಮಾಧಾನಗೊಳ್ಳದ ಅಧ್ಯಕ್ಷರು, ನಿರ್ದೇಶಕರು ಕಳೆದೊಂದು ವರ್ಷದಿಂದಲೂ ಇದೇ ಮಾತನ್ನೇ ಹೇಳುತ್ತಾ ಬರುತ್ತಿದ್ದೀರಿ. ಈ ಒಂದು ವರ್ಷದಲ್ಲಿ ಐದು ಬಾರಿ ಕಾಲಾವಕಾಶ ಕೇಳಿದ್ದಿರಿ. ಕೊಟ್ಟಿರುವ ಕಾಲಾವಕಾಶಗಳೆಲ್ಲ ಮುಗಿದರೂ ನಿವೇಶನ ವಿತರಣೆ ಮಾಡದೆ ಮುಂದೂಡುತ್ತಲೇ ಇದ್ದು, ನಿಮ್ಮ ಮಾತಿನಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ ಎಂದರು.

ಅಮರಾವತಿ ಡೆವಲಪ​ರ್‍ಸ್ ಜೊತೆ 27 ಎಕರೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಅನ್ಯಕ್ರಾಂತಗೊಂಡ 16 ಎಕರೆ 24 ಗುಂಟೆ ಜಮೀನು ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿದ್ದರೂ ಇದುವರೆಗೂ ಖಾತೆಯಾಗಿಲ್ಲ. ಚಂದ್ರಶೇಖರ್‌ ಅವರೇ ಜಿಪಿಎ ತೆಗೆದುಕೊಂಡು ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಆ ಜಮೀನನ್ನು ಸಂಘದ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಸ್ತಾವವನ್ನಿಟ್ಟರೂ ಅದಕ್ಕೂ ಒಪ್ಪುತ್ತಿಲ್ಲ. ಸಂಘದವರಿಗೆ ನಿವೇಶನ ಅಭಿವೃದ್ಧಿಪಡಿಸುತ್ತಿರುವ ಜಾಗವನ್ನೂ ತೋರಿಸುತ್ತಿಲ್ಲ ಎನ್ನುವುದು ಸಂಘದವರ ಆರೋಪವಾಗಿದೆ.

ಪೊಲೀಸರಿಗೆ ನಿವೇಶನ ಅಭಿವೃದ್ಧಿಪಡಿಸುತ್ತಿರುವ ಜಾಗದ ಸರ್ವೇ ನಂಬರ್‌ನ್ನೇ ಶಿಕ್ಷಕರ ಸಂಘದವರಿಗೂ ತೋರಿಸಿದ್ದಾರೆ. ಹಾಗಾಗಿ ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ಅಮರಾವತಿ ಡೆವಲಪ​ರ್‍ಸ್ನವರು ತೋರಿಸುತ್ತಿರುವ ಜಾಗದ ಬಗ್ಗೆ ನಂಬಿಕೆಯೇ ಇಲ್ಲದಂತಾಗಿದೆ.

ಅಮರಾವತಿ ಡೆವಲಪ​ರ್‍ಸ್ನವರು 27 ಎಕರೆ ಜಮೀನಿನಲ್ಲಿ 508 ಸೈಟುಗಳನ್ನು ಅಭಿವೃದ್ಧಿಪಡಿಸಿ ಪ್ರತಿ ಚದರಡಿಗೆ 350 ರು.ನಂತೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ 18.80 ಕೋಟಿ ರು. ಹಣವನ್ನು ಈಗಾಗಲೇ ಡೆವಲಪ​ರ್‍ಸ್ನವರಿಗೆ ಪಾವತಿ ಮಾಡಲಾಗಿದೆ. ಇನ್ನು 3 ರಿಂದ 3.50 ಕೋಟಿ ರು. ಹಣವನ್ನು ಮಾತ್ರ ಪಾವತಿ ಮಾಡಬೇಕಿದೆ. ಆದರೆ, ಅಮರಾವತಿ ಡೆವಲಪ​ರ್‍ಸ್ನವರು ಕೊಟ್ಟಮಾತಿನಂತೆ ನಡೆದುಕೊಳ್ಳದಿರುವುದರಿಂದ ಸಂಘದವರು ಹೋರಾಟದ ಹಾದಿಯನ್ನು ಹಿಡಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ಬಾರಿ ಸಭೆ ನಡೆದಾಗಲೂ ಕಾಲಾವಕಾಶ ಕೇಳುವುದೇ ಆಗಿದೆ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡುತ್ತಿಲ್ಲ. 12 ವರ್ಷವಾದರೂ ನಿವೇಶನ ಹಂಚಿಕೆ ಮಾಡಿಲ್ಲ. ಇನ್ನು ಇವರನ್ನು ಹೇಗೆ ನಂಬುವುದು. ನುಡಿದಂತೆ ನಡೆದುಕೊಳ್ಳದಿರುವುದರ ಬಗ್ಗೆ ಸಂಘದ ಸದಸ್ಯರು ಅಮರಾವತಿ ಡೆವಲಪ​ರ್‍ಸ್ನವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಹೋರಾಟಕ್ಕೆ ನಿರ್ಧಾರ

ಅಮರಾವತಿ ಡೆವಲಪ​ರ್‍ಸ್ ನಿವೇಶನ ಹಂಚಿಕೆಯಲ್ಲಿ ತೋರುತ್ತಿರುವ ವಿಳಂಬ ನೀತಿ ಅನುಸರಿಸುತ್ತಿರುವುದರ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕೆಂಬ ಬಗ್ಗೆ ಸಂಘದ ಸದಸ್ಯರು ರೂಪು-ರೇಷೆ ಸಿದ್ಧಪಡಿಸುತ್ತಿದ್ದಾರೆ. ಸಂಘದಲ್ಲಿರುವ ಸದಸ್ಯರು ಪೊಲೀಸರಾಗಿರುವುದರಿಂದ ಏಕಾಏಕಿ ಹೋರಾಟಕ್ಕೆ ಇಳಿಯಲು ಸಾಧ್ಯವಿಲ್ಲ. ಅದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರಿಂದ ಅನುಮತಿ ಪಡೆಯಬೇಕು. ಆನಂತರ ಯಾವ ರೀತಿ ಹೋರಾಟ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಮರಾವತಿ ಡೆವಲಪ​ರ್‍ಸ್ ಮಾಲೀಕ ಚಂದ್ರಶೇಖರ್‌ ನಿವೇಶನ ಹಂಚಿಕೆ ಮಾಡುವ ಬಗ್ಗೆ ವಿಶ್ವಾಸ ಮೂಡದೇ ಇರುವುದರಿಂದ ಹೋರಾಟದ ಮೂಲಕ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ನಿವೇಶನ ಹಂಚಿಕೆ ಮಾಡುವ ಕುರಿತಂತೆ ಅಮರಾವತಿ ಡೆವಲಪ​ರ್‍ಸ್ನವರೊಂದಿಗೆ ಮಾತುಕತೆಗೆ ತೆರಳಿದ್ದೆವು. ಅವರು ಇನ್ನೂ ಕಾಲಾವಕಾಶ ನೀಡುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಜನವರಿ ತಿಂಗಳಲ್ಲೇ ನಿವೇಶನ ನೀಡುವುದಾಗಿ ತಿಳಿಸಿದ್ದರು. ಈಗ ಕೇಳಿದರೆ ಮಾಚ್‌ರ್‍ ತಿಂಗಳಲ್ಲಿ ನೀಡುವುದಾಗಿ ಹೇಳುತ್ತಿದ್ದಾರೆ. ಮುಂದೇನು ಮಾಡಬೇಕೆಂಬ ಬಗ್ಗೆ ಸಂಘದ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.

- ಎಂ.ಸಿ.ಮಂಜುನಾಥ, ಅಧ್ಯಕ್ಷರು, ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘ

ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಶೇ.80ರಷ್ಟುಕೆಲಸ ಪೂರ್ಣಗೊಂಡಿದೆ. ಮಳೆಗಾಲ, ಕೊರೋನಾ ಕಾರಣದಿಂದ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಮುಂದಿನ ಮೂರ್ನಾಲ್ಕು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲಾಗುವುದು. ಒಟ್ಟು 503 ನಿವೇಶನಗಳನ್ನು ಹಂಚಿಕೆ ಮಾಡಬೇಕಿದ್ದು, ಹೆಚ್ಚುವರಿಯಾಗಿ ನಾಲ್ಕೈದು ನಿವೇಶನ ಕೇಳಿದ್ದಾರೆ. ಅದಕ್ಕೂ ವ್ಯವಸ್ಥೆ ಮಾಡಲಾಗುವುದು.

- ಚಂದ್ರಶೇಖರ್‌, ಮಾಲೀಕರು, ಅಮರಾವತಿ ಡೆವಲಪ​ರ್‍ಸ್

Latest Videos
Follow Us:
Download App:
  • android
  • ios