ಅಧರ್ಮದ ವಿರುದ್ಧ ತಟಸ್ಥವಾಗಿ ಇರುವುದು ಕೂಡ ನಮ್ಮ ಚರಿತ್ರೆಯಲ್ಲಿ ಇಲ್ಲ. ಇದನ್ನು ಇಡೀ ಪ್ರಪಂಚ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ ಸಚಿವ ರಾಜನಾಥ ಸಿಂಗ್‌ 

ಬೆಂಗಳೂರು(ಡಿ.04):  ಭಾರತ ತಾನಾಗಿಯೇ ಯಾರನ್ನೂ ಕೆಣಕಲು ಹೋಗುವುದಿಲ್ಲ, ಕೆಣಕಲು ಬಂದರೆ ಸುಮ್ಮನೆ ಬಿಡುವುದಿಲ್ಲ. ಇದನ್ನು ಇಡೀ ಪ್ರಪಂಚ ಅರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಶತ್ರು ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಗೀತಾ ಜಯಂತಿ ಹಿನ್ನೆಲೆಯಲ್ಲಿ ವಸಂತಪುರ ವೈಕುಂಠ ಬೆಟ್ಟದ ಇಸ್ಕಾನ್‌ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಗೀತಾ ದಾನ ಯಜ್ಞ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಭಗವದ್ಗೀತೆ ಹೇಳಿದಂತೆ ಭಾರತ ಯಾವಾಗಲೂ ಶಾಂತಿಯನ್ನು ಪ್ರತಿಪಾದಿಸುತ್ತದೆ. ಯುದ್ಧ, ಹಿಂಸೆ ಯಾವಾಗಲೂ ಭಾರತದ ಗುಣವಾಗಿಲ್ಲ. ಹೀಗಾಗಿ ಭಾರತ ಪ್ರಪಂಚದ ಯಾವೊಂದು ದೇಶದ ಮೇಲೆಯೂ ಆಕ್ರಮಣ ಮಾಡಿಲ್ಲ. ಅನ್ಯ ರಾಷ್ಟ್ರದ ಒಂದಿಂಚೂ ಜಮೀನನ್ನು ಆಕ್ರಮಣ ಮಾಡಿಲ್ಲ. ಇದು ಭಾರತದ ನಡತೆ. ಹಾಗೆಂದು ಯುದ್ಧ, ಹಿಂಸೆಯನ್ನು ಭಾರತ ಬಯಸುವುದಿಲ್ಲ ಎಂದ ಮಾತ್ರಕ್ಕೆ ನಾವು ಅನ್ಯಾಯವನ್ನು ಸಹಿಸಿಕೊಳ್ಳುತ್ತೇವೆ ಎಂದೇನಿಲ್ಲ. ಅಧರ್ಮದ ವಿರುದ್ಧ ತಟಸ್ಥವಾಗಿ ಇರುವುದು ಕೂಡ ನಮ್ಮ ಚರಿತ್ರೆಯಲ್ಲಿ ಇಲ್ಲ. ಇದನ್ನು ಇಡೀ ಪ್ರಪಂಚ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

CM Basavaraj Bommai: ಮೆಗಾ ಜವಳಿ ಪಾರ್ಕ್‌ಗೆ ಅನುದಾನ ಕೋರಿದ ಬೊಮ್ಮಾಯಿ

ಅಧರ್ಮ ಎದುರಾದಾಗ ಸುಮ್ಮನಿರುವುದು ನಮ್ಮ ಧರ್ಮವಲ್ಲ. ಭಾರತ ಯಾರನ್ನೂ ತಾನಾಗಿ ಕೆಣಕುವುದೂ ಇಲ್ಲ, ಕೆಣಕಿದರೆ ಬಿಡುವುದೂ ಇಲ್ಲ (ಭಾರತ್‌ ಕಿಸಿಕೋ ಕಬಿ ಛೇಡತಾ ನಹಿ ಹೈ, ಲೇಕಿನ್‌ ಭಾರತ್‌ಕೊ ಕೊಯಿ ಯದಿ ಛೇಡತಾ ಹೈ, ತೊ ಭಾರತ್‌ ಉಸೆ ಛೋಡತಾ ನಹಿ ಹೈ). ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ಸಂದೇಶವೂ ಇದೇ ಆಗಿದೆ ಎಂದು ಹೇಳಿದರು.

ಈ ಬಗ್ಗೆ ಮಹಾಭಾರತದ ಉದಾಹರಣೆ ನೀಡಿದ ಸಿಂಗ್‌, ವನವಾಸ, ಅಜ್ಞಾತವಾಸದ ಬಳಿಕವೂ ಕೌರವರು ನ್ಯಾಯಯುತವಾದ ರಾಜ್ಯ ನೀಡಲು ಒಪ್ಪಿರಲಿಲ್ಲ. ಕನಿಷ್ಠ ಐದು ಗ್ರಾಮಗಳನ್ನು ನೀಡುವಂತೆ ಪ್ರಸ್ತಾವ ಇಟ್ಟರೂ ಒಪ್ಪಲಿಲ್ಲ. ಶ್ರೀಕೃಷ್ಣನ ಸಂಧಾನವೂ ವಿಫಲವಾದ ಬಳಿಕ ಯುದ್ಧ ಅನಿವಾರ್ಯವಾಯಿತು. ಯಾವಾಗ ಯುದ್ಧ ನಡೆಯುತ್ತದೋ ಧರ್ಮ ಸಂಸ್ಥಾಪನೆ ಆದ ಬಳಿಕವೆ ಅದು ಸಮಾಪ್ತಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಕೃಷ್ಣಪ್ಪ, ಇಸ್ಕಾನ್‌ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸ್‌, ಉಪಾಧ್ಯಕ್ಷ ಚಂಚಲಪತಿ ದಾಸ್‌ ಸೇರಿ ಇತರರಿದ್ದರು.