ಧಾರವಾಡ(ಮಾ.21): ಹು-ಧಾ ಮಹಾನಗರ ಜಿಲ್ಲೆಯ ಪಶ್ಚಿಮ-74 ವಿಧಾನಸಭಾ ಕ್ಷೇತ್ರದ ರಾಣಿ ಚೆನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಸಾರಸ್ವತಪುರ- ಎಮ್ಮಿಕೇರಿ- ಗೌಳಿಗಲ್ಲಿ ಭಾಗಗಳ 15 ಹಾಗೂ 19 ನೇ ವಾರ್ಡ್‌ಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪಕ್ಷದ ಸಂಘಟನಾ ಸಭೆ ಇಲ್ಲಿನ ಗೌಳಿಗಲ್ಲಿಯಲ್ಲಿ ನಡೆಯಿತು.

ಮುಖಂಡರಾದ ಇಸ್ಮಾಯಿಲ್‌ ತಮಾಟಗಾರ ಮಾತನಾಡಿ, ನುಡಿದಂತೆ ನಡೆಯದೇ ಬಂಡವಾಳ ಶಾಹಿಗಳ ಪರವಾಗಿ ಕಾನೂನುಗಳನ್ನು ಮಾರ್ಪಾಡು ಮಾಡುತ್ತಾ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಳಿಸಿದ್ದಾರೆ ಎಂದರು. 

ಎಐಸಿಸಿ ಸದಸ್ಯ ದೀಪಕ್‌ ಚಿಂಚೋರೆ ಮಾತನಾಡಿ, ಬಿಜೆಪಿ ಸರ್ಕಾರ ನಂಬಿಕೆ ದ್ರೋಹ ಕೆಲಸ ಮಾಡಿದೆ. ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ನೀಡದೇ, ಕಾರ್ಪೊರೇಟ್‌ ಪರ ಒಲವು ಹೊಂದಿದೆ. ಮುಂದೆ ಉಣ್ಣುವ ಅನ್ನಕ್ಕೂ ಕನ್ನ ಹಾಕುವ ಹುನ್ನಾರ ಮಾಡಿದೆ. ಆದ್ದರಿಂದ ಸಾರ್ವಜನಿಕರು ಮುಂದೆ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಹೇಳಿದರು.

ಹುಬ್ಬಳ್ಳಿ: ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ ಅಶೋಕ್‌

ರಾಣಿ ಚೆನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಮಲಕಾರಿ ಮಾತನಾಡಿ, ಕಾಂಗ್ರೆಸ್‌ ಬಡವರ, ಶೋಷಿತರ ಪಕ್ಷ. ಬೇರುಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ನಡೆದಿದೆ. ಇಂದಿರಾಗಾಂಧಿ ಅವರು ಬಡತ ನಿರ್ಮೂಲನೆ ಮಾಡಲು ಗರೀಭಿ ಹಠಾವೋ ಕಾರ್ಯಕ್ರಮ ಮಾಡಿದರೆ ಬಿಜೆಪಿ ಸರ್ಕಾರ ಘರೀಬ್‌ ಕೋ ಹಠಾವೋ ಎನ್ನುವ ಧೋರಣೆ ಹೊಂದಿದೆ ಎಂದರು. ಮುಂಬರುವ ದಿನಗಳಲ್ಲಿ ಸರ್ವರು ಕಾಂಗ್ರೆಸ್‌ ಪಕ್ಷ ಬೆಂಬಲಿಸುವಂತೆ ಮಲಕಾರಿ ಕೋರಿದರು.

ಕಾಂಗ್ರೆಸ್‌ ಮುಖಂಡ ಸುಭಾಷ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಹಿರಿಯರಿಗೆ ಸನ್ಮಾನಿಸಲಾಯಿತು. ಮುಖಂಡರಾದ ಸೂರಜ ಗೌಳಿ, ರಮೇಶ ನಲವಡಿ, ಮೆಹಬೂಬ್‌ ಪಠಾಣ, ಪ್ರಕಾಶ ಸುನಗಾರ, ಮುಸ್ತಾಕ್‌ ಪಟೇಲ್‌, ದಾವಲ್‌ ಬಿಜಾಪುರ, ಲೋಕೇಶ ದೊಡ್ಡಬಟ್ಟಿ, ಮಂಜುನಾಥ್‌ ಮಟ್ಟೂರು, ಚಂದನ ಸವದಿ, ಗೌರಮ್ಮ ನಾಡಗೌಡರ, ಪ್ರಕಾಶ ಹಳ್ಯಾಳ, ದೀಪಕ ಪಾಟೀಲ, ಕುಸುಮಾವತಿ ಜೈನ್‌, ರಮೇಶ ಗೌಳಿ ಇದ್ದರು.