Asianet Suvarna News Asianet Suvarna News

ನೋಟ್‌ ಬ್ಯಾನ್‌ನಿಂದ ತೆರಿಗೆ ವಂಚನೆ ಇಳಿಮುಖ: ಸಚಿವೆ ಸೀತಾರಾಮನ್‌

ದೇಶಕ್ಕಾಗಿ ಬಲಿದಾನ ಬೇಕಿಲ್ಲ; ಬದಲಿಗೆ ತೆರಿಗೆ ವ್ಯವಸ್ಥೆ ಬಲಪಡಿಸುವುದು ಇಂದಿನ ಅಗತ್ಯ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್| ನೋಟು ಅಮಾನ್ಯೀಕರಣದಿಂದ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಂಚನೆ ಕಡಿಮೆಯಾಗಿದೆ| ದೇಶಕ್ಕಾಗಿ ಬಲಿದಾನ ಅಗತ್ಯವಿಲ್ಲ| ತೆರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ| ಪ್ರತಿಯೊಬ್ಬರೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕಿದೆ| ತೆರಿಗೆ ವಂಚನೆ ಮಾಡಬಾರದು, ತೆರಿಗೆ ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ| 

Declining Tax Fraud After Note Ban: Nirmala Sitharaman
Author
Bengaluru, First Published Oct 6, 2019, 7:43 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಅ.5): ನೋಟು ಅಮಾನ್ಯೀಕರಣದಿಂದ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಂಚನೆ ಕಡಿಮೆಯಾಗಿದೆ. ದೇಶಕ್ಕಾಗಿ ಬಲಿದಾನ ಅಗತ್ಯವಿಲ್ಲ. ಆದರೆ ತೆರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಇಲ್ಲಿನ ಸತ್ತೂರಿನ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿಯೊಬ್ಬರೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕಿದೆ. ತೆರಿಗೆ ವಂಚನೆ ಮಾಡಬಾರದು. ತೆರಿಗೆ ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕಿದೆ ಎಂದು ಹೇಳಿದ್ದಾರೆ. 

ಜಿಎಸ್‌ಟಿ ತಂತ್ರಜ್ಞಾನ ಅವಲಂಬಿತ:

ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್‌ಟಿ ಪದ್ಧತಿ ಮುಖ್ಯವಾಗಿ ತಂತ್ರಜ್ಞಾನ ಅವಲಂಬಿಸಿದೆ. ಎರಡು ತೆರಿಗೆ ಅಥವಾ ಪುನರಾವರ್ತಿತ ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿಯನ್ನು ಇದು ಒಳಗೊಂಡಿದೆ. ಗ್ರಾಹಕರ ಮೇಲಿನ ತೆರಿಗೆ ಭಾರ ಕಡಿಮೆ ಮಾಡಲು ಈ ಪದ್ಧತಿ ಜಾರಿಗೆ ತಂದಿದೆ. ಹಲವು ವಸ್ತುಗಳ ಮೇಲೆ ಬೀಳುತ್ತಿದ್ದ ಎರಡು ಅಥವಾ ಹೆಚ್ಚು ಬಗೆಯ ತೆರಿಗೆಯ ನಿಯಂತ್ರಣ ಸಾಧಿಸಲು ಸಹಕಾರಿಯಾಗಿದೆ. ಜನರು ಇದರೊಂದಿಗೆ ಹೊಂದಾಣಿಕೆ ಆಗಬೇಕಿದೆ. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ಕೇಂದ್ರ ಸಚಿವೆಗೆ ಪ್ರತಿಭಟನೆ ಮೂಲಕ ಸ್ವಾಗತ

ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೊರೆಯಾಗದಂತೆ ಜಿಎಸ್‌ಟಿ ರೂಪಿಸಲಾಗಿದೆ ಎಂದ ಅವರು, ಶೀಘ್ರವಾಗಿ ಬೆಳೆಯುತ್ತಿರುವ ತೆರಿಗೆ ಪದ್ಧತಿಯನ್ನು ಡಿಜಿಟಲ್‌ ಮಾಡಲಾಗಿದೆ. ಸರಕು ಹಾಗೂ ಸೇವಾ ತೆರಿಗೆಯಿಂದ ಶೇ. 85 ರಷ್ಟು ತೆರಿಗೆ ವಂಚನೆ, ಮೋಸ ತಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಜಿಡಿಪಿ ಹೊಡೆತ ಬಿದ್ದಿದೆ ಎಂದು ತಿಳಿಸಿದರು.

ಹೆಚ್ಚು ಜನರು ತೆರಿಗೆ ಕಟ್ಟಿದರೆ, ಹೆಚ್ಚು ಜನರು ಆದಾಯ ಘೋಷಣೆ ಮಾಡಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ. ಹೆಚ್ಚಿನ ಆದಾಯ ಬರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು. ಜಿಎಸ್ಟಿಸೇರಿ ಇತರ ತೆರಿಗೆ ಪ್ರಮಾಣ ಕಡಿಮೆಆಗಬೇಕಾದರೆ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲು ಸಹಕರಿಸಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ತೆರಿಗೆ ಸಲಹೆಗಾರರು ತಮ್ಮ ವೃತ್ತಿ ತೊರೆದು ಮಹಾತ್ಮ ಗಾಂಧೀಜಿಯವರ ನೇತೃತ್ವದ ಚಳವಳಿಗೆ ಬೆಂಬಲ ಸೂಚಿಸಿದ್ದರು. ಇಂದು ವೃತ್ತಿ ತೊರೆಯುವುದು ಬೇಕಾಗಿಲ್ಲ. ಆದರೆ ಜನರಿಗೆ ಸಮರ್ಪಕ ತೆರಿಗೆಯ ಮೌಲ್ಯಮಾಪನ ಮಾಡಿ, ದೇಶಕ್ಕೆ ಕೊಡುಗೆ ನೀಡಬೇಕು. ತೆರಿಗೆ ಸಲಹೆಗಾರರ ಮಾನ್ಯತೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ ಎಂದು ಭರವಸೆ ನೀಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಸಲಹೆಗಾರರ ಕೊಡುಗೆ ಅಪಾರ ಎಂದು ನುಡಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಪಾತ್ರ ವಹಿಸುವ ತೆರಿಗೆ ಸಲಹೆಗಾರರು ವೃತ್ತಿ ನೈತಿಕತೆ ಕುರಿತು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಜಿಎಸ್‌ಟಿ ಮೂಲಕ ಸಾಕಷ್ಟುಬದಲಾವಣೆಗಳು ಬರುತ್ತಿವೆ. ತೆರಿಗೆ ಸಲಹೆಗಾರರು ತಮ್ಮ ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡಿ ನೆರವು ಒದಗಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಹಾವೇರಿ ಸಂಸದ ಶಿವಕುಮಾರ್‌ ಉದಾಸಿ, ಶಾಸಕ ಅರವಿಂದ ಬೆಲ್ಲದ, ಬೆಂಗಳೂರು ವಲಯದ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೈ.ಎನ್‌. ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಕನ್ನಡದಲ್ಲಿ ಭಾಷಣ ಪ್ರಾರಂಭ

‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಳಿಕ ಆಂಗ್ಲ ಭಾಷೆಯಲ್ಲಿ ಭಾಷಣ ಮುಂದುವರಿಸಿದರು. ಸರಸ್ವತಿಯ ನೆಲವಿದು ವಿದ್ಯೆ, ಸಂಗೀತ, ಜನಪದ ಹಾಗೂ ಶಾಸ್ತ್ರೀಯ ಕಲೆಗಳ ತವರೂರು ಎನಿಸಿರುವ ಧಾರವಾಡ ಜಿಲ್ಲೆಗೆ ತಾಯಿ ಸರಸ್ವತಿಯ ಆಶೀರ್ವಾದವಿದೆ. ನವರಾತ್ರಿಯ ಸಪ್ತಮಿ ದಿನದಂದು ಹುಬ್ಬಳ್ಳಿ- ಧಾರವಾಡದಲ್ಲಿ ಇರುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಭಾಷಣದ ಕೊನೆಗೆ ಹೇಳುವ ಮೂಲಕ ಹರ್ಷ ವ್ಯಕ್ತಪಡಿಸಿದರು.
 

Follow Us:
Download App:
  • android
  • ios