ಪಾವಗಡವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ
ಮಳೆಯ ಅಭಾವದಿಂದ ಅತ್ಯಂತ ಸಂಕಷ್ಟಎದುರಾಗಿದ್ದು, ಬರಪೀಡಿತ ತಾಲೂಕು ಪಟ್ಟಿಗೆ ಪಾವಗಡ ತಾಲೂಕನ್ನು ಸೇರಿಸಿ ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾಲೂಕು ರೈತ ಸಂಘದಿಂದ ಬುಧವಾರ ಇಲ್ಲಿನ ಕಂದಾಯ ಇಲಾಖೆಯ ಗ್ರೆಡ್ 2 ತಹಸೀಲ್ದಾರ್ ನರಸಿಂಹಮೂರ್ತಿಗೆ ಮನವಿ ಸಲ್ಲಿಸಿದರು.
ಪಾವಗಡ : ಮಳೆಯ ಅಭಾವದಿಂದ ಅತ್ಯಂತ ಸಂಕಷ್ಟಎದುರಾಗಿದ್ದು, ಬರಪೀಡಿತ ತಾಲೂಕು ಪಟ್ಟಿಗೆ ಪಾವಗಡ ತಾಲೂಕನ್ನು ಸೇರಿಸಿ ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾಲೂಕು ರೈತ ಸಂಘದಿಂದ ಬುಧವಾರ ಇಲ್ಲಿನ ಕಂದಾಯ ಇಲಾಖೆಯ ಗ್ರೆಡ್ 2 ತಹಸೀಲ್ದಾರ್ ನರಸಿಂಹಮೂರ್ತಿಗೆ ಮನವಿ ಸಲ್ಲಿಸಿದರು.
ಬೆಳಗ್ಗೆ 11 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ರೈತ ಸಂಘದ ನೂರಾರು ಮಂದಿ ಪದಾಧಿಕಾರಿಗಳು ನಗರದ ಬಳ್ಳಾರಿ ರಸ್ತೆ ಮೂಲಕ ಬರದ ಬಗ್ಗೆ ಘೋಷಣೆ ಕೂಗುತ್ತಾ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ದೊಡ್ಡಹಟ್ಟಿಪೂಜಾರಪ್ಪ ಮಾತನಾಡಿ, ಜೀವನ ಸಾಗಿಸಲು ನಮಗೆ ಪರ್ಯಾಯ ವ್ಯವಸ್ಥೆಯಿಲ್ಲ. ಯಾವುದೇ ಕೈಗಾರಿಕೆ ಆಗಲಿ ಅಥವಾ ನದಿಮೂಲದ ನೀರಿನ ಸೌಲಭ್ಯವಿಲ್ಲ. ಬಹುತೇಕ ಮಳೆಯ ಆಶ್ರಿತವೇ ಜೀವನಾಂಶದ ಬೆಳೆಗಳಾಗಿದ್ದು, ಮಳೆಯ ಅಭಾವದಿಂದ ಶೇಂಗಾ, ತೊಗರಿ, ಭತ್ತ, ರಾಗಿ, ಜೋಳದ ಬೆಳೆಗಳು ಮೊಳಕೆ ಹಂತದಲ್ಲಿಯೆ ನಷ್ಟಕ್ಕೀಡಾಗಿದೆ. ಅಂತರ್ ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿದ್ದು ನೀರಾವರಿ ಬೆಳೆಗಳು ಒಣಗಿ ಹೋಗುತ್ತಿವೆ. ಇಲ್ಲಿ ಮಳೆಯ ಕೊರತೆಯಿಂದ ಸದಾ ಬರ ಎದುರಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮಳೆಯ ಅಭಾವದಿಂದ ಪ್ರಸಕ್ತ ಸಾಲಿಗೆ ಎಲ್ಲಾ ರೀತಿಯ ಬೆಳೆಗಳು ಒಣಗಿ ಹೋಗಿದ್ದು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಕಳೆದ ವರ್ಷ ಅತಿವೃಷ್ಟಿಹಾಗೂ ಅನಾವೃಷ್ಟಿಯ ಪರಿಣಾಮ ಕಸಬಾ ಹಾಗೂ ವೈ.ಎನ್.ಹೊಸಕೋಟೆ, ನಿಡಗಲ್, ನಾಗಲಮಡಿಕೆ ಸೇರಿ ತಾಲೂಕಿನ ನಾಲ್ಕು ಹೋಬಳಿಯ ರೈತರು ಮತ್ತು ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿ, ಅನೇಕ ರೀತಿಯ ಸಮಸ್ಯೆ ಎದುರಿಸಿದ್ದು, ಜೀವನಕ್ಕಾಗಿ ಇಲ್ಲಿನ ಸಾವಿರಾರು ಮಂದಿ ಬೆಂಗಳೂರು ಇತರೆ ಆಂಧ್ರದ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಪ್ರಸಕ್ತ ಸಾಲಿಗೆ ಬರದ ತೀವ್ರತೆ ವ್ಯಾಪಕವಾಗಿ ಕಾಡುತ್ತಿದ್ದು, ಕುಡಿವ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಕುರಿ, ಮೇಕೆ, ದನಕರುಗಳಿಗೆ ಮೇವು ಮತ್ತು ಕುಡಿವ ನೀರು ಸಿಗುತ್ತಿಲ್ಲ. ಪ್ರಾಣಿ ಪಕ್ಷಿಗಳ ನರಳಾಟ ಹೆಚ್ಚಾಗಿ ನೀರು ಮತ್ತು ಆಹಾರಕ್ಕಾಗಿ ಊರುಗಳಿಗೆ ಪ್ರವೇಶಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬರಪೀಡಿತ ಪಟ್ಟಿಯಿಂದ ಪಾವಗಡವನ್ನು ಕೈಬಿಟ್ಟಿದ್ದು ದುರಂತವೇ ಸರಿ. ಕೂಡಲೇ ತಾಲೂಕಿನ ಸ್ಥಿತಿಗತಿಯ ಸಮಗ್ರ ವರದಿ ಪಡೆದು ಕೂಡಲೇ ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಡಿಸುವ ಮೂಲಕ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಇದೇ ವೇಳೆ ರೈತ ಮುಖಂಡರಾದ ಈರಕ್ಯಾತಪ್ಪ, ಕನ್ನಮೇಡಿ ಕೃಷ್ಣಮೂರ್ತಿ ಚಿತ್ತಯ್ಯ, ಕೆ.ಜಿ.ಸಿದ್ದಪ್ಪ, ಹನುಮಂತರಾಯಪ್ಪ ಇತರೆ ರೈತ ಮುಖಂಡರು ತಾಲೂಕಿನ ಸ್ಥಿತಿಗತಿ ಬಗ್ಗೆ ವಿವರಿಸಿ ಶೀಘ್ರ ಬರ ಪ್ರದೇಶವಾಗಿ ತಾಲೂಕನ್ನು ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಗೋರಸ್‌ಮಾವು ಸದಾಶಿವಪ್ಪ, ಈರಣ್ಣ, ರಾಮಾಂಜಿನಪ್ಪ ಸಣ್ಣ ಚಿತ್ತಯ್ಯ, ನಾಗರಾಜಪ್ಪ, ರಮೇಶ್‌ಕುಮಾರ್, ಮಂಜುನಾಥ್, ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಇದ್ದರು.