ರಾಜ್ಯಾದ್ಯಂತ ತಂಬಾಕು ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನ
ತಂಬಾಕಿಗೆ ಸರಾಸರಿ ಉತ್ತಮ ಬೆಲೆ ನೀಡಲು ಖರೀದಿದಾರ ಕಂಪನಿಗಳು ಕೆಲ ದಿನ ಕಾಲಾವಕಾಶ ಕೇಳಿದ ಹಿನ್ನೆಲೆ ಅಲ್ಲಿಯವರೆಗೆ ಕೇಂದ್ರೀಯ ತಂಬಾಕು ಮಂಡಳಿ ಅಧಿಕಾರಿಗಳ ಸೂಚನೆಯಂತೆ ರಾಜ್ಯಾದ್ಯಂತ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು ಹೇಳಿದರು.
ಪಿರಿಯಾಪಟ್ಟಣ (ಅ.20): ತಂಬಾಕಿಗೆ ಸರಾಸರಿ ಉತ್ತಮ ಬೆಲೆ ನೀಡಲು ಖರೀದಿದಾರ ಕಂಪನಿಗಳು ಕೆಲ ದಿನ ಕಾಲಾವಕಾಶ ಕೇಳಿದ ಹಿನ್ನೆಲೆ ಅಲ್ಲಿಯವರೆಗೆ ಕೇಂದ್ರೀಯ ತಂಬಾಕು ಮಂಡಳಿ ಅಧಿಕಾರಿಗಳ ಸೂಚನೆಯಂತೆ ರಾಜ್ಯಾದ್ಯಂತ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು ಹೇಳಿದರು.
ಮೈಸೂರಿನ (Mysuru) ವಿಜಯ ನಗರದಲ್ಲಿರುವ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯಲ್ಲಿ ಮಂಡಳಿ ಅಧಿಕಾರಿಗಳು ಮತ್ತು ಸದಸ್ಯರು ಖರೀದಿದಾರ ಕಂಪನಿಯವರ ಸಭೆ ನಡೆಸಿ ಅವರು ಮಾತನಾಡಿದರು.
ಪಿರಿಯಾ ಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು (Tobacco) ಹರಾಜು ಮಾರುಕಟ್ಟೆಯಲ್ಲಿ ಬುಧವಾರ ದರ ಕುಸಿತ ಹಿನ್ನೆಲೆ ರೈತರು ರಸ್ತೆ ತಡೆದು, ಪ್ರತಿಭಟನೆ ನಡೆಸಿದ ಸಂದರ್ಭ ಅವರೊಂದಿಗೆ ಮಾತನಾಡಿ, ಮಂಡಳಿ ಅಧಿಕಾರಿಗಳು ಹಾಗೂ ಸದಸ್ಯರು ಖರೀದಿದಾರ ಕಂಪನಿಗಳೊಂದಿಗೆ ಇಂದು ಸಂಜೆಯೆ ಸಭೆ ನಡೆಸಿ ಸರಾಸರಿ ಉತ್ತಮ ಬೆಲೆ ದೊರಕಿಸಿಕೊಡುವ ಭರವಸೆ ನೀಡಿದ ಹಿನ್ನೆಲೆ ಗುಂಟೂರಿನಲ್ಲಿರುವ ಕೇಂದ್ರೀಯ ತಂಬಾಕು ಮಂಡಳಿ ಹರಾಜು ವ್ಯವಸ್ಥಾಪಕರಾದ ರಾಮಾಂಜನೇಯಲು ಅವರೊಂದಿಗೆ ಆನ್‌ಲೈನ್ ಸಭೆ ನಡೆಸಿ ಕಳೆದ ಮೂರ್ನಾಲ್ಕು ದಿನಗಳಿಂದ ತಂಬಾಕು ರೈತರಿಗೆ ನೀಡಿದ್ದ ಸರಾಸರಿ ರು. 250, 260 ದರ ಕಾಪಾಡಿ ಇನ್ನೂ ಹೆಚ್ಚಿನ ದರ ನಿಗದಿಪಡಿಸಲು ಸಭೆಯಲ್ಲಿ ಹಾಜರಿದ್ದ ಖರೀದಿದಾರ ಕಂಪನಿಗಳವರಿಗೆ ಸೂಚಿಸಿದಾಗ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಮುಖ್ಯಸ್ಥರೊಂದಿಗೆ ಚರ್ಚಿಸಿ ತಿಳಿಸಲು ಮೂರ್ನಾಲ್ಕು ದಿನ ಕಾಲಾವಕಾಶ ಕೇಳಿದ ಹಿನ್ನೆಲೆ ದೀಪಾವಳಿ ಹಬ್ಬದ ತನಕ ತಾತ್ಕಾಲಿಕವಾಗಿ ರಾಜ್ಯಾದ್ಯಂತ ತಂಬಾಕು ಹರಾಜು ಮಾರುಕಟ್ಟೆಪ್ರಕ್ರಿಯೆ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು.
ಇದರಿಂದ ರೈತರಿಗೆ ಅಲ್ಪ ಅನಾನುಕೂಲವಾದರೂ ಮುಂದಿನ ದಿನಗಳಲ್ಲಿ ಉತ್ತಮ ದರ ದೊರಕಿಸಿಕೊಡುವ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ತಂಬಾಕು ರೈತರು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ತಂಬಾಕು ಮಂಡಳಿ ಸದಸ್ಯರಾದ ಎಚ್.ಆರ್. ದಿನೇಶ್, ವಿಕ್ರಂರಾಜ…, ಪ್ರಾದೇಶಿಕ ವ್ಯವಸ್ಥಾಪಕ ಎಂ. ಲಕ್ಷ್ಮಣ…ರಾವ…, ತಂಬಾಕು ಹರಾಜು ಮಾರುಕಟ್ಟೆಯ ಎಲ್ಲ ಹರಾಜು ಅಧೀಕ್ಷಕರು, ಖರೀದಿದಾರ ಕಂಪನಿಗಳವರು ಇದ್ದರು.
ಕರ್ನಾಟಕ ತಂಬಾಕಿಗೆ ಹೆಚ್ಚಿನ ಬೇಡಿಕೆ
ಭಾರತ ದೇಶದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ತಂಬಾಕು ಬೆಳೆಯಲಾಗುತ್ತಿದೆ. ಇಲ್ಲಿ ಖರೀದಿಸಿದ ಶೇ.80ರಷ್ಟು ತಂಬಾಕನ್ನು ಆಮದು ಮಾಡಲಾಗುತ್ತಿದೆ. ಆದರಿಂದ ಸರ್ಕಾರಕ್ಕೆ ಇದರಿಂದ ಹೆಚ್ಚಿನ ಆದಾಯ ಬರುತ್ತಿದೆ ಎಂದು ಸಂಸದ ಆರ್. ಧ್ರುವ ನಾರಾಯಣ್ ತಿಳಿಸಿದರು.
ತಾಲೂಕಿನ ಹೆಬ್ಬಳ್ಳದಲ್ಲಿನ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಹರಾಜಿಗೆ ಚಾಲನೆ ನೀಡಿ ಮಾತನಾಡಿದರು. 2020ಕ್ಕೆ ತಂಬಾಕು ನಿಷೇಧ ಆಗುತ್ತದೆ ಎನ್ನುವುದರ ಬಗ್ಗೆ ರೈತರು ಕೇಳಿದ ಪ್ರಶ್ನೆಗೆ ತಂಬಾಕು ನಿಷೇದ ಮಾಡದಂತೆ ಅಧಿವೇಶನಲ್ಲಿ ಚರ್ಚಿಸುತ್ತೇನೆ ಎಂದರು.
ತಂಬಾಕು ಕಂಪನಿ ಯವರು ರೈತರ ಪರ ಉತ್ತಮ ನಿಲುವು ತೆಗೆದುಕೊಂಡು, ತಂಬಾಕನ್ನು ಖರೀದಿಸಬೇಕು. ಇದರಿಂದ ಕಂಪನಿಗಳಿಗೆ ಯಾವುದೆ ರೀತಿಯ ನಷ್ಟ ಉಂಟಾಗುವುದಿಲ್ಲ. ತಂಬಾಕು ಮಂಡಳಿಯವರು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ಇಳುವರಿ ಕಡಿಮೆ ಆಗಿದೆ. ಆದರೆ ಉತ್ತಮ ಗುಣಮಟ್ಟದ ತಂಬಾಕನ್ನು ರೈತರು ಬೆಳೆದಿದ್ದು ಉತ್ತಮ ಬೆಲೆ ಕೊಡಿಸಿ ಕೊಡಬೇಕು ಎಂದು ಸೂಚನೆ ನೀಡಬೇಕು. ಇಲ್ಲಿ ಮೂಲಭೂತ ಸೌಲಭ್ಯ ನೀಡುವಂತೆ
ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ರತ್ನಸಾಗರ, ಹರಾಜು ಅಧೀಕ್ಷಕ ರಮೇಶ್, ಎಚ್.ಸಿ. ಶಿವಣ್ಣ, ಮೊತ್ತ ಬಸವರಾಜು, ಕಾಳೇಗೌಡ, ಕೃಷ್ಣ ಕುಮಾರ್, ಜಯರಾಮ್, ಹರಿದಾಸ್, ಮಹದೇವು, ನಾಗರಾಜಪ್ಪ ಹಾಗೂ ರೈತರು ಇದ್ದರು.