ದಾವಣಗೆರೆ - ಚಿತ್ರದುರ್ಗ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ರಾಜ್ಯ ಸಾರಿಗೆ ಬಸ್‌ಗಳಿಗೆ ಸಿರಿಗೆರೆ ಸರ್ಕಲ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿ ಪ್ರತಿಭಟಿಸಲು ಸಿರಿಗೆರೆ, ಚಿಕ್ಕಬೆನ್ನೂರು, ಅಳಗವಾಡಿ ಮತ್ತು ದೊಡ್ಡಾಲಗಟ್ಟದ ಗ್ರಾ.ಪಂ. ಗಳು ಸಂಘಟಿತವಾಗಿವೆ.

ಸಿರಿಗೆರೆ (ಡಿ.25) : ದಾವಣಗೆರೆ - ಚಿತ್ರದುರ್ಗ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ರಾಜ್ಯ ಸಾರಿಗೆ ಬಸ್‌ಗಳಿಗೆ ಸಿರಿಗೆರೆ ಸರ್ಕಲ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿ ಪ್ರತಿಭಟಿಸಲು ಸಿರಿಗೆರೆ, ಚಿಕ್ಕಬೆನ್ನೂರು, ಅಳಗವಾಡಿ ಮತ್ತು ದೊಡ್ಡಾಲಗಟ್ಟದ ಗ್ರಾ.ಪಂ. ಗಳು ಸಂಘಟಿತವಾಗಿವೆ.

ಈ ವಿಚಾರವಾಗಿ ಸಿರಿಗೆರೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿಕ್ಕಬೆನ್ನೂರು, ಅಳಗವಾಡಿ, ದೊಡ್ಡಾಲಗಟ್ಟಗ್ರಾಪಂ ಪದಾಧಿಕಾರಿಗಳೂ ಸಹಕರಿಸಲಿದ್ದಾರೆ ಎಂದು ಸಿರಿಗೆರೆ ಗ್ರಾಪಂ ಅಧ್ಯಕ್ಷ ಎಂ.ಜಿ. ದೇವರಾಜು ಹೇಳಿದ್ದಾರೆ.

ಬಸ್‌ ಇಲ್ಲ, ಊರಿಗೆ ಹೋಗಲಾರದೇ ಕೊಪ್ಪಳ ಬಸ್‌ಸ್ಟ್ಯಾಂಡ್‌ನಲ್ಲಿ ವೃದ್ದೆಯರ ಪರದಾಟ

ಜನವರಿ 20 ರೊಳಗೆ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅಧಿಕೃತವಾಗಿ ಸಿರಿಗೆರ ಸರ್ಕಲ್‌ನಲ್ಲಿ ಬಸ್‌ಗಳ ನಿಲುಗಡೆ ಮಾಡದೇ ಇದ್ದರೆ ಹೆದ್ದಾರಿ ರಸ್ತೆಯನ್ನು ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಸುತ್ತಲಿನ ಹಳ್ಳಿಗಳ ಜನರೂ ಭಾಗಿಯಾಗಲಿದ್ದಾರೆ ಎಂದರು.

ಈ ಮೊದಲು ಚಿತ್ರದುರ್ಗ ಮತ್ತು ದಾವಣಗೆರೆ ಮಾರ್ಗವಾಗಿ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳು ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಸಿರಿಗೆರೆ ಸರ್ಕಲ್‌ನಲ್ಲಿ ನಿಲ್ಲಿಸುತ್ತಿದ್ದವು. ಕಾಲಕಳೆದಂತೆ ಈಗ ಒಂದೆರಡು ಬಸ್‌ಗಳ ಹೊರತಾಗಿ ಯಾವುದೇ ಬಸ್‌ಗಳು ಇಲ್ಲಿ ನಿಲ್ಲಿಸದೇ ಇರುವುದರಿಂದ ಪ್ರಯಾಣಿಕರು ತೀವ್ರ ಸಂಕಟ ಅನುಭವಿಸುವಂತಾಗಿದೆ ಎಂದರು.

ಈ ವಿಚಾರವಾಗಿ ರಾಜ್ಯ ಸಾರಿಗೆ ಸಂಸ್ಥೆಯ ಜಿಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಮಾತುಕತೆ ಮಾಡಿದ್ದರೂ ಉಪಯೋಗವಾಗಿಲ್ಲ. ಈ ಭಾಗದ ಶಾಸಕರೂ, ರಾಜ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಎಂ. ಚಂದ್ರಪ್ಪನವರಿಗೂ ಈ ವಿಚಾರವಾಗಿ ಮನವಿ ಮಾಡಲಾಗಿದೆ.

ಸಿರಿಗೆರೆ ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದ್ದು, ನಿತ್ಯವೂ ಸಾವಿರಾರು ಪ್ರಯಾಣಿಕರು ರಾಜ್ಯ ಸಾರಿಗೆ ಬಸ್‌ಗಳ ಪ್ರಯಾಣವನ್ನೇ ನಂಬಿಕೊಂಡಿದ್ದಾರೆ. ದಾವಣಗೆರೆ- ಚಿತ್ರದುರ್ಗ ಮಾರ್ಗವಾಗಿ ಓಡಾಡುವ ಬಹುತೇಕ ಬಸ್‌ಗಳ ಫ್ಲೈ ಒವರ್‌ಗಳ ಮೇಲೆಯೇ ಓಡಾಡುತ್ತವೆ. ಅಪರೂಪಕ್ಕೊಮ್ಮೆ ಪ್ಲೈ ಒವರ್‌ಗಳ ಮೇಲೆ ನಿಲ್ಲಿಸುವ ಬಸ್‌ಗಳಿಂದ ಇಳಿಯುವ ಜನರು ಸುಮಾರು 20 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಇಳಿಯುವಾಗ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಇಳಿಯಬೇಕು. ವಯಸ್ಸಾದವರು ಸಾಹಸ ಮಾಡಿ ಎತ್ತರದ ಸೇತುವೆಯಿಂದ ಇಳಿಯಬೇಕಾದ ಪರಿಸ್ಥಿತಿ ಇದೆ.

ಬಸ್ ಇಲ್ಲ, ಕೆಲಸವೂ ಇಲ್ಲ; ಮಂಗಳೂರಿನಿಂದ ಕೊಪ್ಪಳಕ್ಕೆ ಪಾದಯಾತ್ರೆ ಹೊರಟ ಕುಟುಂಬ!

ಬಸ್‌ ತಂಗುದಾಣ ನಿರ್ಮಿಸಲು ಆಗ್ರಹ

ಸಿರಿಗೆರೆ ವೃತ್ತದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸಾರಿಗೆ ಸಂಸ್ಥೆಯಿಂದ ಬಸ್‌ ತಂಗುದಾಣವನ್ನು ನಿರ್ಮಿಸಿ ಚೆಕ್‌ಪೋಸ್ಟ್‌ ಅಳವಡಿಸಬೇಕು. ಚಿತ್ರದುರ್ಗ ಮತ್ತು ದಾವಣಗೆರೆ ಡಿಪೋಗಳಿಗೆ ಸೇರಿದ ಎಲ್ಲಾ ಬಸ್‌ಗಳು ಫ್ಲೈ ಒವರ್‌ಗಳ ಮೇಲೆ ಸಂಚರಿಸದೆ ಕೆಳಗೆ ಸಂಚರಿಸಿ ಈ ತಂಗುದಾಣ ಸಮೀಪ ನಿಲ್ಲುವಂತೆ ಆಗಬೇಕು. ಬಸ್‌ಗಳು ಬಂದು ಹೋಗುವುದನ್ನು ದಾಖಲಿಸಲು ಸಿಬ್ಬಂದಿ ನೇಮಕ ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುವುದು. ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡುವ ವಿಚಾರವಾಗಿ ಜಿಲ್ಲಾಧಿಕಾರಿ ಹಾಗೂ ರಕ್ಷಣಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ದೇವರಾಜ್‌ ತಿಳಿಸಿದರು.