ಬೆಂಗಳೂರು[ಡಿ.11]:  ಡಿಸೆಂಬರ್‌ ಅಂತ್ಯದೊಳಗೆ ಕನ್ನಡ ನಾಮಫಲಕ ಅಳವಡಿಸದ ಉದ್ದಿಮೆದಾರರ ಪರವಾನಿಗೆ ರದ್ದು ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದರು.

ಕನ್ನಡ ನಾಮಫಲಕ ಅಳವಡಿಕೆ ಹಾಗೂ ಜಾಹೀರಾತು ಬೈಲಾ ಕುರಿತು ಎಂಟು ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಮೇಯರ್‌ ಗೌತಮ್‌ ಕುಮಾರ್‌ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಭಾಷೆ ಬಳಕೆ ಆದೇಶದ ಬಳಿಕ ನಗರದಲ್ಲಿ ಶೇ.50ರಿಂದ 60ರಷ್ಟುಉದ್ದಿಮೆದಾರರು ತಮ್ಮ ನಾಮಫಲಕದಲ್ಲಿ ಕನ್ನಡ ಭಾಷೆ ಬಳಕೆ ಮಾಡಿಕೊಂಡಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಈವರೆಗೆ ಸುಮಾರು 27 ಸಾವಿರ ಉದ್ದಿಮೆದಾರರಿಗೆ ನೋಟಿಸ್‌ ನೀಡಿದ್ದಾರೆ. ಡಿಸೆಂಬರ್‌ ಅಂತ್ಯದೊಳಗೆ ನಗರದ ಎಲ್ಲ ಉದ್ದಿಮೆದಾರರು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬಿಬಿಎಂಪಿ ನೀಡಿರುವ ಉದ್ದಿಮೆ ಪರವಾನಿಗೆ ರದ್ದು ಪಡಿಸಿ ಮಳಿಗೆಗೆ ಬೀಗ ಹಾಕುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 48 ಸಾವಿರ ಉದ್ದಿಮೆಗಳಿಗೆ ಉದ್ದಿಮೆ ಪರವಾನಗಿ ನೀಡಲಾಗಿದೆ. ಆದರೆ, ಬೆಸ್ಕಾಂ ಪ್ರಕಾರ ಐದು ಲಕ್ಷಕ್ಕೂ ಹೆಚ್ಚು ಉದ್ದಿಮೆಗಳಿವೆ ಎಂಬ ಮಾಹಿತಿ ಇದೆ. ಈ ಪೈಕಿ ಎಲ್ಲಕ್ಕೂ ಉದ್ದಿಮೆ ಪರವಾನಗಿ ನೀಡಿದರೆ ಪಾಲಿಕೆಗೆ ವರಮಾನ ಬರಲಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೋರ್ಡಿಂಗ್ಸ್‌ ತೆರವು: ನಗರದಲ್ಲಿ ಜಾಹೀರಾತು ಫಲಕಗಳ ಕಬ್ಬಿಣದ ಸ್ಟ್ರಕ್ಚರ್‌ ತೆರವು ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ. ಹೋರ್ಡಿಂಗ್ಸ್‌, ಮರದ ಮೇಲೆ ಅಂಟಿಸಲಾದ ಭಿತ್ತಿಪತ್ರ, ಗೋಡೆ ಬರಹಗಳನ್ನು ಹಂತ ಹಂತವಾಗಿ ತೆರವುಗೊಳಿಸಿ ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡಬೇಕು. ಮೊದಲ ಹಂತದಲ್ಲಿ ಪಾದಚಾರಿ ಮಾರ್ಗ, ರಾಜಕಾಲುವೆಗಳ ಪಕ್ಕ ಅಳವಡಿಸಿರುವ ಹೋರ್ಡಿಂಗ್ಸ್‌ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ನಗರದಲ್ಲಿ ಹೋರ್ಡಿಂಗ್ಸ್‌ ಅಳವಡಿಕೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕೂಡಲೇ ತಡೆಯಾಜ್ಞೆ ತೆರವುಗೊಳಿಸಿ ಪ್ರಕರಣ ಇತ್ಯರ್ಥ ಮಾಡುವಂತೆ ಕಾನೂನು ಕೋಶ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾನಾರಾಯಣ್‌, ಕಾನೂನು ಕೋಶ ವಿಭಾಗದ ಮುಖ್ಯಸ್ಥ ದೇಶಪಾಂಡೆ, ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ಉಪಸ್ಥಿತರಿದ್ದರು.

ಹೋರ್ಡಿಂಗ್‌ ಅಳವಡಿಕೆಗೆ ಬಿಡಿಎ ಅನುಮತಿ? 

ಹೆಬ್ಬಾಳದ ಮೇಲ್ಸೇತುವೆ ಬಳಿ ಇರುವ ಬಿಡಿಎ ಜಾಗದಲ್ಲಿ ಅಳವಡಿಸಿರುವ ಹೋರ್ಡಿಂಗ್‌ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಡಿಎ ಪಿಪಿಪಿ ಮಾದರಿಯಲ್ಲಿ ಅಳವಡಿಸಲು ಅನುಮತಿ ನೀಡಿದೆ ಎಂಬ ಮಾಹಿತಿ ಇದೆ. ಈ ಪೈಕಿ ಸಂಬಂಧಪಟ್ಟಅಧಿಕಾರಿಗಳ ಜೊತೆ ಚರ್ಚಿಸಿ ಹೋರ್ಡಿಂಗ್ಸ್‌ ತೆರವು ಮಾಡಲು ಕ್ರಮವಹಿಸಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದರು.

ಕನ್ನಡ ನಾಮಫಲಕ ಬಗ್ಗೆ ಉಡಾಫೆ ಹೇಳಿಕೆ : ಮೇಯರ್ ಆಕ್ರೋಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಿ ಬಿಬಿಎಂಪಿ ಹೊರಡಿಸಿರುವ ಆದೇಶ ಕುರಿತು ಕರ್ನಾಟಕ ವಾಣಿಜ್ಯಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಉಡಾಫೆ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಎಫ್‌ಕೆಸಿಸಿಐ ಆಯೋಜಿಸುವ ಯಾವುದೇ ಸಭೆ ಸಮಾರಂಭದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಹೇಳಿದ್ದಾರೆ.

ಕನ್ನಡ ನಾಮಫಲಕ ಅಳವಡಿಕೆ ವಿಚಾರವನ್ನಿಟ್ಟಿಕೊಂಡು ಬಿಬಿಎಂಪಿ ನಿರ್ಧಾರವನ್ನು ಅಸಡ್ಡೆ ಮಾಡಿ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ರಸ್ತೆ ಗುಂಡಿ ಭರ್ತಿಗೂ ಕನ್ನಡ ನಾಮ ಫಲಕಕ್ಕೂ ಯಾವುದೇ ಸಂಬಂಧವಿಲ್ಲ. ಬಿಬಿಎಂಪಿ ಹೇಗೆ ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿದೆ. ಎಫ್‌ಕೆಸಿಸಿಐ ತನ್ನ ಕೆಲಸ ತಾನು ನಿರ್ವಹಿಸಲಿ ಎಂದರು.

ಅಲ್ಲದೆ, ನಗರದಲ್ಲಿ ಶೇ.60ರಷ್ಟುಕನ್ನಡ ಭಾಷೆ ಬಳಕೆಯ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಿರುವುದು ಬಿಬಿಎಂಪಿಯ ದೃಢ ನಿರ್ಧಾರ. ಈ ಕುರಿತು ಬಿಬಿಎಂಪಿಗೆ ಎಫ್‌ಕೆಸಿಸಿಐ ಯಾವುದೇ ಸಲಹೆ ನೀಡುವ ಅವಶ್ಯಕತೆ ಇಲ್ಲ. ಇಂತಹ ದಾರ್ಷ್ಟ್ಯ ಪ್ರದರ್ಶಿಸಿದ ಎಫ್‌ಕೆಸಿಸಿಐನ ಯಾವುದೇ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಕೇವಲ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಹಲವಾರು ಕರ್ತವ್ಯಗಳನ್ನು ನಿರ್ವಹಿಸುತ್ತಿದೆ. ಬಿಬಿಎಂಪಿ ಇನ್ನೊಂದು ಸಂಸ್ಥೆಯಿಂದ ಹೇಳಿಸಿಕೊಂಡು ಕಲಿಯಬೇಕಾದ ಅವಶ್ಯಕತೆ ಇಲ್ಲ. ಬಿಬಿಎಂಪಿ ತನ್ನ ಕೆಲಸ ತಾನು ಸಮರ್ಥವಾಗಿ ನಿರ್ವಹಿಸಲಿದೆ ಎಂದು ಹೇಳಿದರು.

ಎಫ್‌ಕೆಸಿಸಿಐ ಮಾತ್ರವಲ್ಲ ಕನ್ನಡ ಭಾಷೆಗೆ ಯಾರು ಗೌರವ ನೀಡುವುದಿಲ್ಲ, ಅಂತಹ ಆ ಸಂಘ ಸಂಸ್ಥೆಗಳು ಬಿಬಿಎಂಪಿ ಕಡೆಯಿಂದ ಯಾವುದೇ ರೀತಿ ಸವಲತ್ತುಗಳನ್ನು ಅಪೇಕ್ಷೆ ಪಡುವುದು ಬೇಕಾಗಿಲ್ಲ. ಅವರು ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್‌ ಆಗಿ ತಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯುವುದಕ್ಕೆ ‘ಕನ್ನಡಪ್ರಭ’ದೂರವಾಣಿ ಮೂಲಕ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌ ಅವರನ್ನು ಸಂಪರ್ಕಿಸಿದಾಗ ಮೊದಲು ಪ್ರತಿಕ್ರಿಯೆ ನೀಡುವುದಕ್ಕೆ ನಿರಾಕರಿಸಿದರು. ತದನಂತರ ಮತ್ತೆ ಪ್ರಯತ್ನ ನಡೆಸಿದಾಗ ‘ಶೀಘ್ರವಾಗಿ ಬಿಬಿಎಂಪಿ ಮೇಯರ್‌ ಅವರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲಾಗುವುದು. ಯಾವಾಗ ಭೇಟಿ ಮಾಡುತ್ತೇನೆ ಎಂಬುದನ್ನು ಭೇಟಿಯ ಬಳಿಕ ತಿಳಿಸುತ್ತೇನೆ’ ಎಂದು ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದರು.

ಹಿನ್ನೆಲೆ:

ಕನ್ನಡ ನಾಮಫಲಕ ವಿಚಾರವಾಗಿ ಮೇಯರ್‌ ಗೌತಮ್‌ ಕುಮಾರ್‌ಗೆ ಬರೆದಿರುವ ಪತ್ರದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌, ನ.1ರಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ತರುವಂತೆ ತಾವು ಸೂಚಿಸಿದ್ದೀರಿ. ಆದರೆ, ಈಗಾಗಲೇ ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸದ ಸಮಸ್ಯೆ, ಟ್ರಾಫಿಕ್‌ ಸೇರಿದಂತೆ ಬಹಳಷ್ಟುಸಮಸ್ಯೆಗಳು ತಾಂಡವವಾಡುತ್ತಿವೆ, ಅವುಗಳ ಕಡೆ ಗಮನಹರಿಸಿ. ನಾಮಫಲಕದ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ವ್ಯಾಪಾರಿಗಳಿಗೆ ಹಾಗೂ ಉದ್ದಿಮೆದಾರರಿಗೆ ಕಿರುಕುಳ ನೀಡಬೇಡಿ. ಕನ್ನಡ ನಾಮಫಲಕ ಅಳವಡಿಕೆಗೆ 2020ರ ಏಪ್ರಿಲ್‌ ವರೆಗೆ ಕಾಲಾವಕಾಶ ನೀಡುವಂತೆ ಎಂದು ಡಿ.5ಕ್ಕೆ ಪತ್ರ ಬರೆದು ಕೇಳಿದ್ದರು.