Asianet Suvarna News Asianet Suvarna News

ಸೂರ್ಯಗ್ರಹಣ: ಮೈಸೂರಲ್ಲಿ ಹೆಚ್ಚು ಗೋಚರ

ಮೈಸೂರಲ್ಲಿ ಡಿಸೆಂಬರ್ 26ರಂದು ಸಂಭವಿಸುವ ಸೂರ್ಯ ಗ್ರಹಣದ ವೇಳೆ ಸೂರ್ಯ ಬೆಂಕಿಯುಂಗುರ (ಕಂಕಣ) ತೊಟ್ಟಂತೆ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಖಗೋಳ ತಜ್ಞ ಡಾ.ಶ್ರೀಧರ್‌ ಅವರು ತಿಳಿಸಿದ್ದಾರೆ. 

December 26 Solar Eclipse Will Clearly Visible in Mysore
Author
Bengaluru, First Published Dec 19, 2019, 7:47 AM IST

ಮಹೇಂದ್ರ ದೇವನೂರು 

ಮೈಸೂರು [ಡಿ.19]:  ಡಿ.26ರಂದು ಇಡೀ ಜಗತ್ತು ಅಪರೂಪದ ಖಗೋಳ ಕೌತುಕವಾದ ‘ಕಂಕಣ ಸೂರ್ಯಗ್ರಹಣ’ಕ್ಕೆ ಸಾಕ್ಷಿಯಾಗಲಿದ್ದು, ಇಡೀ ಭಾರತದಲ್ಲಿ ಮೈಸೂರಲ್ಲಿ ಈ ಗ್ರಹಣ ಹೆಚ್ಚು ಸ್ಪಷ್ಟವಾಗಿ ಗೋಚರಿಸುವುದು ವಿಶೇಷ. ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ಮೈಸೂರಲ್ಲಿ ಗ್ರಹಣ ವೇಳೆ ಸೂರ್ಯ ಬೆಂಕಿಯುಂಗುರ (ಕಂಕಣ) ತೊಟ್ಟಂತೆ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಖಗೋಳ ತಜ್ಞ ಡಾ.ಶ್ರೀಧರ್‌ ಅವರು ತಿಳಿಸಿದ್ದಾರೆ. ಕ್ರಿಸ್‌ಮಸ್‌ ಮರುದಿನ ನಡೆಯಲಿರುವ ಇಂಥ ಅವಿಸ್ಮರಣೀಯ ವಿದ್ಯಮಾನ ವೀಕ್ಷಿಸಲು ದೇಶದ ಮೂಲೆಮೂಲೆಗಳಿಂದ ಖಗೋಳ ವಿಜ್ಞಾನಿಗಳು, ಖಗೋಳ ಸಂಶೋಧಕರು ಅಂದು ಸಾಂಸ್ಕೃತಿಕ ನಗರಿಗೆ ದೌಡಾಯಿಸಲಿದ್ದಾರೆ.

ಏನಿದು ಕಂಕಣ ಸೂರ್ಯಗ್ರಹಣ?: ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವೇಳೆ ಸೂರ್ಯನನ್ನು ಚಂದ್ರ ಆವರಿಸಿಕೊಂಡಾಗ ಭೂಮಿಯಿಂದ ನಿಂತು ನೋಡಿದರೆ ಸೂರ್ಯ ಬೆಂಕಿಯುಂಗುರ ತೊಟ್ಟಂತೆ ಕಾಣುತ್ತಾನೆ. ಈ ರೀತಿಯ ಸೂರ್ಯಗ್ರಹಣವನ್ನು ‘ರಿಂಗ್‌ ಆಫ್‌ ಫೈರ್‌’ ಅಥವಾ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಡಿ.26ರ ಬೆಳಗ್ಗೆ 8.05ರಿಂದ 9.28ರ ಅವಧಿಯಲ್ಲಿ ಕೆಲವೇ ಕೆಲ ನಿಮಿಷಗಳ ಕಾಲ ಬೆಂಕಿಯುಂಗುರ ತೊಟ್ಟರೀತಿಯಲ್ಲಿ ಸೂರ್ಯ ಗೋಚರಿಸಲಿದ್ದಾನೆ. ಆದರೆ, ಒಟ್ಟಾರೆ ಈ ಗ್ರಹಣ ಪ್ರಕ್ರಿಯೆಯು 3.03ಗಂಟೆ (8.05 ಆರಂಭ, 11.09ಕ್ಕೆ ಮುಕ್ತಾಯ) ಅವಧಿಯದ್ದಾಗಿರುತ್ತದೆ.

ಅಪರೂಪದ ಖಗೋಳ ಕೌತುಕ ವಿಶ್ವದೆಲ್ಲೆಡೆ ಒಂದೇ ರೀತಿ ಕಾಣಿಸುವುದಿಲ್ಲ. ಭಾರತದಲ್ಲೂ ತಮಿಳುನಾಡು, ಕೇರಳ, ಕರ್ನಾಟಕ ಭಾಗದಲ್ಲಷ್ಟೇ ಕಂಕಣ ಸೂರ್ಯಗ್ರಹಣದ ದರ್ಶನ ಸಾಧ್ಯವಿದೆ. ಉಳಿದೆಡೆ ಭಾಗಶಃ ಸೂರ್ಯಗ್ರಹಣದ ದರ್ಶನ ಸಿಗಲಿದೆ.

ಕರ್ನಾಟಕದ ಮೂರು ಕಡೆ: ವಿಶೇಷವೆಂದರೆ ಭಾರತದಲ್ಲಿ ಈ ಸೂರ್ಯಗ್ರಹಣ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸುವುದು ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳಾದ ಮೈಸೂರು, ಮಡಿಕೇರಿ ಮತ್ತು ಮಂಗಳೂರು ಭಾಗದಲ್ಲಿ. ಅದರಲ್ಲೂ ಮುಖ್ಯವಾಗಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಪೂರಕವಾಗಿರುವ ವಾತಾವರಣ ಅಂದು ಮೈಸೂರಲ್ಲಿರುವ ಕಾರಣ ದೇಶಾದ್ಯಂತ ಇಲ್ಲಿಗೆ ಹೆಚ್ಚಿನ ಖಗೋಳ ತಜ್ಞರು ಮತ್ತು ವಿಜ್ಞಾನಿಗಳು ಆಗಮಿಸುತ್ತಿದ್ದಾರೆ.

ಸೂರ್ಯನಿಂದ ಬದುಕು: ಕಂಕಣ ಸೂರ್ಯಗ್ರಹಣ ನೋಡಲು ನೀವು ಬರಬೇಕು...

ಮುಂದಿನ ವಾರ ಸಂಭವಿಸುತ್ತಿರುವುದು ಇದು 2019ರ ಕೊನೇ ಸೂರ್ಯಗ್ರಹಣ. ಹಲವು ದಶಗಳ ಬಳಿಕ ಕರ್ನಾಟಕದಲ್ಲಿ ಇಂಥದ್ದೊಂದು ಅಪರೂಪದ ಕಂಕಣ ಸೂರ್ಯಗ್ರಹಣದ ದರ್ಶನ ಆಗುತ್ತಿದೆ. ಮುಂದಿನ ಕಂಕಣ ಸೂರ್ಯಗ್ರಹಣ 2064ರಲ್ಲಿ ಸಂಭವಿಸಲಿದೆ. ಅಂದರೆ 45 ವರ್ಷಗಳ ಬಳಿಕ ಈ ಗ್ರಹಣ ಮರುಕಳಿಸಲಿದೆ.

ಮೈಸೂರಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕರ್ನಾಟಕ ಸೈನ್ಸ್‌ ಫೌಂಡೇಷನ್‌, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಾಹ್ಯಾಕಾಶ ಸಂಶೋಧಕರು, ಹವ್ಯಾಸಿ ಖಗೋಳ ವೀಕ್ಷಕರು ಸೇರಿ ಪ್ರಖ್ಯಾತ ವಿಜ್ಞಾನಿಗಳು ಮೈಸೂರಿಗೆ ಆಗಮಿಸುತ್ತಿದ್ದಾರೆ.

ಹಾಗೆ ನೋಡಿದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಮಂಗಲದಲ್ಲಿ ಇತರೆಡೆಗಿಂತಲೂ ಹೆಚ್ಚು ಸ್ಪಷ್ಟವಾಗಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಆದರೆ, ಅರಣ್ಯಪ್ರದೇಶದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸೂಕ್ತವಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕೊಡಗಿನ ಕುಟ್ಟದಲ್ಲೂ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೂ ಹಲವು ಖಗೋಳ ವಿಜ್ಞಾನಿಗಳು ತೆರಳಿ, ಖಗೋಳ ಕೌತುಕವನ್ನು ವೀಕ್ಷಿಸಲಿದ್ದಾರೆ.

Follow Us:
Download App:
  • android
  • ios