ಅತ್ತಿಬೆಲೆ ಪಟಾಕಿ ಅವಘಡ: ಕೂಲಿಗೆ ಬಂದವರ ದುರಂತ ಅಂತ್ಯ
ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಸಿಡಿತ ದುರಂತಕ್ಕೆ 14 ಜನ ಬಲಿಯಾಗಿದ್ದು, 6 ಜನ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಎರಡನೆಯ ಶಿವಕಾಶಿ ಎಂಬ ಖ್ಯಾತಿಗೆ ಅತ್ತಿಬೆಲೆ ಗಡಿಯಲ್ಲಿನ ಪಟಾಕಿ ಮಳಿಗೆಗಳು ಹೆಸರಾಗಿದ್ದವು.

ಆನೇಕಲ್ (ಅ.09): ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಸಿಡಿತ ದುರಂತಕ್ಕೆ 14 ಜನ ಬಲಿಯಾಗಿದ್ದು, 6 ಜನ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಎರಡನೆಯ ಶಿವಕಾಶಿ ಎಂಬ ಖ್ಯಾತಿಗೆ ಅತ್ತಿಬೆಲೆ ಗಡಿಯಲ್ಲಿನ ಪಟಾಕಿ ಮಳಿಗೆಗಳು ಹೆಸರಾಗಿದ್ದವು. ಶನಿವಾರ ನಡೆದ ಪಟಾಕಿ ಅವಘಡಕ್ಕೆ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ. ಸಿಡಿದ ಪಟಾಕಿಗೆ ಮಳಿಗೆಯಲ್ಲಿದ್ದ 14 ಮಂದಿ ಕಾರ್ಮಿಕರು ಸುಟ್ಟು ಕರಕಲಾಗಿ 6 ಮಂದಿ ಗಂಭೀರ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರನ್ನು ಸಮೀಪದ ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿ ಅವಘಡದಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಪಟಾಕಿ ಸೇರಿದಂತೆ ಕ್ಯಾಂಟರ್ ವಾಹನ, ಎರಡು ಟಾಟಾ ಏಸ್, ಹತ್ತಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
ಕೂಲಿಗಾಗಿ ಬಂದವರ ದುರಂತ ಅಂತ್ಯ: ಮೃತರೆಲ್ಲರೂ ತಮಿಳುನಾಡು ಮೂಲದ ತಿರುವಣ್ಣಾಮಲೈ, ಧರ್ಮಪುರಿ ಜಿಲ್ಲೆಯ ನಿವಾಸಿಗಳು. ಮೃತಪಟ್ಟವರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕರುಣಾಜನಕ ಕಥೆಯಾಗಿದೆ. ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ರಜೆ ಇದ್ದುದ್ದರಿಂದ ಪಟಾಕಿ ಮಳಿಗೆಯಲ್ಲಿ ದಿನಗೂಲಿ ಕೆಲಸಕ್ಕೆ ಬಂದಿದ್ದರು. ಇನ್ನು ಕೆಲವರು ಹೊಟ್ಟೆ ಪಾಡಿಗಾಗಿ ಕುಟುಂಬದ ನಿರ್ವಹಣೆಗಾಗಿ ಕೆಲಸಕ್ಕೆ ಬಂದಿದ್ದರು. ಪಟಾಕಿ ಅಗ್ನಿ ಅವಘಡದಲ್ಲಿ ಅಂತ್ಯ ಕಂಡಿದ್ದಾರೆ.
ಆನೇಕಲ್ ಪಟಾಕಿ ದುರಂತ, ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ: ಸಿದ್ದರಾಮಯ್ಯ
ತಮಿಳುನಾಡಿನ ಯುವಕರು ಹಾಗೂ ಪಟಾಕಿ ತಯಾರಿಕೆಯಲ್ಲಿ ಪಳಗಿದವರನ್ನು ದಿನಕ್ಕೆ ₹500 ಕೂಲಿಗೆ ಕರೆ ತಂದಿದ್ದರು. ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಕ್ಸ್‌ಫರ್ಡ್ ಆಸ್ಪತ್ರೆ ಬಳಿ ಮೃತರ ಕುಟುಂಬದವರ ಕಣ್ಣೀರ ಕಥೆ ಮನಕಲಕುವಂತಿತ್ತು. ಪಟಾಕಿ ಮಳಿಗೆಯ ಮಾಲೀಕರ ವಿರುದ್ಧ ಮೃತನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
₹5 ಕೋಟಿಯ ಪಟಾಕಿ ನಾಶ: ಗೋದಾಮಿನಲ್ಲಿ ಅಂದಾಜು ₹5 ಕೋಟಿ ಮೌಲ್ಯದ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತಯಾರಿಕಾ ವಸ್ತುಗಳನ್ನು ಅತ್ತಿಬೆಲೆಯಲ್ಲಿ ಸಂಗ್ರಹ ಮಾಡಲಾಗುತ್ತಿತ್ತು. ಭಾರಿ ಪ್ರಮಾಣದ ಪಟಾಕಿ ಸಂಗ್ರಹವೇ ದುರಂತಕ್ಕೆ ಕಾರಣವಾಗಿದೆ. ಶನಿವಾರ ಮಧ್ಯಾಹ್ನ 3.15ಕ್ಕೆ ಬೆಂಕಿ ಅವಘಡ ನಡೆದಿದೆ. ಟ್ರಕ್ ಮತ್ತು 2 ಟಾಟಾ ಏಸ್‌ನಲ್ಲಿ ಪಟಾಕಿ ಬಂದಿದ್ದು, ಅನ್‌ಲೋಡ್ ಮಾಡುವ ವೇಳೆ ಎಲೆಕ್ಟ್ರಿಕ್ ವೈರ್ ಅಥವಾ ಯುಪಿಎಸ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಂಕಿ ನಂದಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ದಳ: ಸುಮಾರು ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ಠಾಣಾ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಪಟಾಕಿ ಮಳಿಗೆಯಲ್ಲಿ ಸಜೀವವಾಗಿ ದಹನವಾಗಿದ್ದ ಹದಿನಾಲ್ಕು ಮಂದಿ ಶವಗಳನ್ನು ಹೊರತೆಗೆದು ಸಮೀಪದ ಆಕ್ಸ್‌ಫರ್ಡ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಶನಿವಾರ ರಾತ್ರಿಯೇ ಘಟನಾ ಸ್ಥಳಕ್ಕೆ ಆಗಮಿಸಿದ್ದ ಕೃಷ್ಣಗಿರಿ ಜಿಲ್ಲಾಧಿಕಾರಿ ಸರಯು, ಭಾನುವಾರ ಬೆಳಗ್ಗೆ ಆಗಮಿಸಿದ್ದ ತಮಿಳುನಾಡಿನ ಸಚಿವ ಸುಬ್ರಹ್ಮಣಿ ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿ ತಲಾ ₹3 ಲಕ್ಷ ಚೆಕ್ ವಿತರಿಸಿದರು.
ಮೃತರ ಸಂಖ್ಯೆ 14ಕ್ಕೆ, ಎಲ್ಲರ ಗುರುತು ಪತ್ತೆ: ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಗೋದಾಮಿ ಅಗ್ನಿ ದುರಂತದಲ್ಲಿ ಮೃತಪಟ್ಟವರು ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಎಲ್ಲಾ 14 ಮಂದಿಯ ಗುರುತು ಪತ್ತೆಯಾಗಿದೆ. ತಮಿಳುನಾಡಿನ ಧರ್ಮಪುರಿ ತಾಲೂಕು ಅಮ್ಮಾಪೇಟ್ ಗ್ರಾಮದ ನಿವಾಸಿಗಳಾದ ಗಿರಿ(22), ಸಚಿನ್(22), ವಿಜಯರಾಘವನ್(20), ಇಳಂಬರತಿ(19), ಆಕಾಶ್(23), ವೇಡಿಯಪ್ಪನ್(25), ಆದಿಕೇಶವನ್(23), ಸಂಗಮ್ ತಾಲೂಕಿನ ನಿರ್ಪತೊರೈ ಗ್ರಾಮದ ಪ್ರಕಾಶ್(20), ಚಿನ್ನಸೇಲಂ ತಾಲೂಕಿನ ವೆಡುತ್ತ ವೈನತ್ತಂ ಗ್ರಾಮದ ವಸಂತರಾಜ್(23), ಅಬ್ಬಾಸ್(23), ಪ್ರಭಾಕರನ್(17), ವಾಣಿಯಾಂಬಾಡಿ ತಾಲೂಕಿನ ವೆಲ್ಲಕುಟೈ ಗ್ರಾಮದ ನಿತೀಶ್(22), ಸಂತೋಷ್(23), ಹೊಸೂರು ಟೌನ್ ನಿವಾಸಿ ಆಂತೋಣಿ ಪೌಲ್ ರಾಜ್(21) ಮೃತರು. ಭಾನುವಾರ ಯಡುವನಹಳ್ಳಿಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮುಂದುವರೆದ ಚಿಕಿತ್ಸೆ: ಅಗ್ನಿ ಅವಘಡದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ನವೀನ್, ರಾಜೇಶ್ ವೆಂಕಟೇಶ್ ಎಂಬುವವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಿನೇಶ್ ಎಂಬಾತನನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಲಕ್ಷ್ಮಿ ಫೋಟೋ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ: ಡಿ.ಕೆ.ಶಿವಕುಮಾರ್
ಮೃತರಲ್ಲಿ 8 ವಿದ್ಯಾರ್ಥಿಗಳು: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿಯಿಂದ 10 ಕಾರ್ಮಿಕರು ಅತ್ತಿಬೆಲೆಗೆ ಕೂಲಿಗಾಗಿ ಬಂದಿದ್ದರು. ಇವರಲ್ಲಿ 8 ವಿದ್ಯಾರ್ಥಿಗಳಾಗಿದ್ದಾರೆ. ಆದಿಕೇಶವನ್, ಗಿರಿ, ವೇಡಪ್ಪನ್, ಆಕಾಶ್, ವಿಜಯರಾಘವನ್, ವೆಳಂಬರದಿ, ವಿನೋದ್, ಮುನಿವೇಲ್ ವಿದ್ಯಾರ್ಥಿಗಳಾಗಿದ್ದಾರೆ. ಇವರು ತಮಿಳುನಾಡಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ದೀಪಾವಳಿ ಸಂದರ್ಭದಲ್ಲಿ ಕೆಲಸಕ್ಕೆ ಬರುತ್ತಿದ್ದರು ಎಂದು ತಿಳಿದುಬಂದಿದೆ.