ಬೀದರ್‌(ಆ.08): ಜಿಲ್ಲೆಯ ನಂದಗಾಂವ ಗ್ರಾಮದ ಹೊಲದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಅನ್ನ ನೀರಿಲ್ಲದೆ ಹಸಿವೆಯಿಂದ ಬಳಲಿ ಸಾವನ್ನಪ್ಪಿದ್ದು, ಆಕೆಯು ಮಾನಸಿಕ ಅಸ್ವಸ್ಥೆ ಹಾಗೂ ವಿವಿಧ ರೋಗಗಳಿಂದ ಬಳಲುತ್ತಿದ್ದಳೆಂಬ ದೂರು ದಾಖಲಾಗಿದ್ದು ಕೊರೋನಾ ಸಂಕಷ್ಟದ ಸಂದರ್ಭ ಭಿಕ್ಷುಕಿ ಹಸಿವಿನಿಂದ ಸಾವನ್ನಪ್ಪಿದ್ದಾಳೆ ಎಂಬ ಅಂಶ ಮಹತ್ವ ಪಡೆದಿದೆ.

ಇದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜು.28ರಂದು ಹುಮನಾಬಾದ್‌ ತಾಲೂಕಿನ ನಂದಗಾಂವ್‌ ಗ್ರಾಮದ ಹೊಲದಲ್ಲಿ ಶವವಾಗಿ ಬಿದ್ದಿದ್ದ ಮಹಿಳೆ (45) ಕುರಿತಂತೆ ಹಳ್ಳಿಖೇಡ್‌(ಬಿ) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಮಹಿಳೆಯ ಕೂದಲು ಮತ್ತು ದೇಹ ನೋಡಿದರೆ ಹುಚ್ಚಳಂತೆ ಕಂಡುಬರುತ್ತಿದ್ದು, ಯಾವುದೋ ರೋಗದಿಂದ ಬಳಲಿ ಹೀಗೆ ಹುಚ್ಚರಂತೆ ಓಡಾಡಿಕೊಂಡು ಬಂದಾಗ ಅನ್ನ ನೀರು ಇಲ್ಲದೆ ಅಲ್ಲಿಯೇ ಬಿದ್ದು ಮೃತಪಟ್ಟಿರುವಂತೆ ಕಂಡುಬರುತ್ತದೆ. ದೇಹದಲ್ಲಿ ಖಂಡವಿಲ್ಲದೇ ಅಸ್ತಿಪಂಜರದಂತೆ ಮೃತದೇಹ ಕಂಡುಬರುತ್ತಿತ್ತು ಎಂದು ದೂರುದಾರ ತುಕಾರಾಮ ಕಪ್ಪರಗಾಂವ್‌ ತಿಳಿಸಿದ್ದಾರೆ.

ಬಿಎಸ್‌ವೈ ಶೀಘ್ರ ಗುಣಮುಖರಾಗಲು ಸಚಿವ ಪ್ರಭು ಚವ್ಹಾಣ್‌ರಿಂದ ವಿಶೇಷ ಪೂಜೆ

ದೂರನ್ನು ದಾಖಲಿಸಿಕೊಂಡು ಸ್ಥಳ ಮಹಜರು ಮಾಡಿದ ಪೊಲೀಸರು ಶವ ಪರೀಕ್ಷೆ ಮಾಡಿಸಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಂದಗಾಂವ್‌ ಗ್ರಾಮದ ಈ ಹೊಲಕ್ಕೆ ಎಲ್ಲಿಂದಲೋ ಈ ಮಹಿಳೆ ನಡೆದುಬಂದಂತಿದೆ. ಈಕೆಯ ಡಿಎನ್‌ಎ ಪರೀಕ್ಷೆ ನಡೆಸುವ ಕುರಿತಂತೆ ವೈದ್ಯರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. 

ಇನ್ನು ವೈದ್ಯರು ಸಹ ದೂರುದಾರ ನೀಡಿದ ಹೇಳಿಕೆಗಳಿಗೆ ಹೋಲುವಂಥ ಪ್ರತಿಕ್ರಿಯೆಯನ್ನೇ ನೀಡಿದ್ದು ಮಹಿಳೆಯ ದೇಹದ ಭಾಗಗಳು ಆಹಾರವಿಲ್ಲದೆ ಅತ್ಯಂತ ಬಳಲಿದಂತಿದ್ದವು, ಟಿಬಿ ರೋಗ ಲಕ್ಷಣಗಳೂ ಇದ್ದವು ಎಂದು ಹೇಳಿರುವುದು, ಜಿಲ್ಲೆಯಲ್ಲಿ ಭಿಕ್ಷುಕಿಯೊಬ್ಬಳು ಅನ್ನ ಆಹಾರ ಇಲ್ಲದೆ ಅಷ್ಟೇ ಅಲ್ಲ ರೋಗಗಳಿಗೆ ಚಿಕಿತ್ಸೆ ಪಡೆಯಲಾಗದೆ ಸಾವನ್ನಪ್ಪಿರುವಂಥ ಪ್ರಕರಣ ಅತ್ಯಂತ ಬೇಸರ ತರಿಸುವಂತಿದೆ. ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ರಸ್ತೆಯಲ್ಲಿ ತಿರುಗಾಡುವ ಭಿಕ್ಷುಕರಿಗೆ ಊಟದ ಹಾಗೂ ಆರೋಗ್ಯ ರಕ್ಷಣೆ ನೀಡುವಂಥ ಕೆಲಸವಾಗಬೇಕಿದೆ. ಸಧ್ಯದ ಮಟ್ಟಿಗಂತೂ ಜಿಲ್ಲೆಯಲ್ಲಿ ಭಿಕ್ಷುಕರ ಸಂಖ್ಯೆ ವಿಪರೀತವಾಗಿದ್ದು ಅವರಿಗೆ ಅನ್ನ ಆಹಾರ ಸಿಗುವ ಸಾಧ್ಯತೆಗಳೂ ಕಡಿಮೆಯಿದ್ದು ಇತ್ತ ಜಿಲ್ಲಾಡಳಿತ ಚಿತ್ತ ಹರಿಸಬೇಕಿದೆ.

ನಂದಗಾಂವ ಹೊಲದಲ್ಲಿ ಶವವಾಗಿ ಬಿದ್ದಿದ್ದ ಮಹಿಳೆಯು ಮಾನಸಿಕ ರೋಗಿಯಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಟಿಬಿ ರೋಗದಿಂದ ಬಳಲುತ್ತಿರುವಂತೆ ಅಲ್ಲದೆ ಆಕೆಯ ದೇಹದ ಭಾಗಗಳು ಕೆಲ ದಿನಗಳಿಂದ ಅನ್ನ, ನೀರು ಆಹಾರವಿಲ್ಲದೆ ಬಳಲಿದಂತಿದ್ದವು. ಶೀಘ್ರ ಡಿಎನ್‌ಎ ಸೇರಿದಂತೆ ಹೆಚ್ಚಿನ ಪರೀಕ್ಷೆಗೆ ಉನ್ನತ ಪ್ರಯೋಗಾಲಯಕ್ಕೆ ಮೊರೆ ಹೋಗುತ್ತೇವೆ ಎಂದು ವೈದ್ಯಾಧಿಕಾರಿ ಡಾ. ವಿಜಯಕುಮಾರ ಸೂರ್ಯವಂಶಿ ಅವರು ತಿಳಿಸಿದ್ದಾರೆ.