ದೇವಸ್ಥಾನಕ್ಕೆ ಹೋದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ
ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ನಂದಿಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಪೂಜೆಗೆಂದು ತೆರಳಿದ್ದ ದಲಿತ ಕುಟುಂಬದ ತಾಯಿ ಮಗನನ್ನು ತಡೆದು ಗ್ರಾಮಸ್ಥರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಹಾವೇರಿ (ಮಾ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ನಂದಿಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಪೂಜೆಗೆಂದು ತೆರಳಿದ್ದ ದಲಿತ ಕುಟುಂಬದ ತಾಯಿ ಮಗನನ್ನು ತಡೆದು ಗ್ರಾಮಸ್ಥರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಸ್ವಾತಂತ್ರ್ಯ ಸಿಕ್ಕು ಈಗ 75 ವರ್ಷಗಳು ಕಳೆಯುತ್ತಿದ್ದು, ಇಡೀ ದೇಶದ ಜನರು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ರಾಷ್ಟ್ರೀಯ ಐಕ್ಯತೆಯಿಂದ ಬಾಳಬೇಕಿದೆ. ಆದರೆ, ಕಾನೂನು ಸಂರಕ್ಷಣೆ ಮಾಡಬೇಕಾದ ಹಾಗೂ ಸಂವಿಧಾನಬದ್ಧವಾಗಿ ರಾಜ್ಯದ ಮುಖ್ಯಸ್ಥರಾಗಿ ಆಡಳಿತ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಇನ್ನೂ ಅಸ್ಕೃಶ್ಯತೆ ತಾಂಡವಾಡುತ್ತಿದೆ. ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ನಂದಿಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಪೂಜೆಗೆಂದು ತೆರಳಿದ್ದ ದಲಿತ ಕುಟುಂಬದ ತಾಯಿ ಮಗನನ್ನು ತಡೆದು ಗ್ರಾಮಸ್ಥರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಸಂವಿಧಾನ ಜಾರಿಗೊಂಡು 74 ವರ್ಷವಾದರೂ ಅಸ್ಪೃಶ್ಯತೆ ಜೀವಂತ
ಮನೆಯನ್ನು ಹೊಕ್ಕು ಮಾರಣಾಂತಿಕ ಹಲ್ಲೆ: ಕಳೆದ ಎರಡು ದಿನಗಳ ಹಿಂದೆ ನಂದಿಹಳ್ಳಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ದಲಿತ ಸಮುದಾಯದ ತಾಯಿ, ಮಗ ದೇವರ ದರ್ಶನಕ್ಕೆ ಹಾಗೂ ಪೊಜೆಗೆ ತೆರಳಿದ್ದರು. ಈ ವೇಳೆ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ಮೇಲ್ವರ್ಗದ ಜನರು ಅವರನ್ನು ತಡೆದು ಎಚ್ಚರಿಕೆ ನೀಡಿದ್ದರು. ಆ ಬಳಿಕ ಮೇಲ್ವರ್ಗದ ಸಮುದಾಯ ಜನರೆಲ್ಲಾ ಸೇರಿ ದೇವಸ್ಥಾನ ಪ್ರವೇಶ ಮಾಡಿದ್ದ ದಲಿತರ ಮನೆಗೆ ಹೊಕ್ಕು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಮನೆಯ ಹಂಚನ್ನು ಜಖಂಗೊಳಿಸಿ ಹಲ್ಲೆ: ಗ್ರಾಮದಲ್ಲಿನ ಹಲವು ಮೇಲ್ವರ್ಗದ ಜನರು ಸೇರಿಕೊಂಡು ಗುಂಪು, ಗುಂಪಾಗಿ ಬಂದು ದಲಿತರ ನಿವಾಸಕ್ಕೆ ನುಗ್ಗಿದ್ದಾರೆ. ಮನೆಯ ಮೇಲಿನ ಹಂಚುಗಳನ್ನು ಜಖಂ ಗೊಳಿಸಿ ದೌರ್ಜನ್ಯವೆಸಗಿದ್ದಾರೆ. ತಾಯಿ ಹೆಮ್ಮವ್ವ ಮಲ್ಲಾಡದ ಹಾಗೂ ಅವರ ಮಗ ರಮೇಶ್ ಮಲ್ಲಾಡದ ಹಲ್ಲೆಗೊಳಗಾಗಿದ್ದಾರೆ. ಈ ಕುರಿತು ತಾಯಿ, ಮಗನಿಂದ ಸುಮಾರು 30 ಮೇಲ್ವರ್ಗದ ಜನರ ಮೇಲೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದ್ದು, ಬಿಗುವಿನ ವಾತಾವರಣವನ್ನು ಶಮನಗೊಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿಯೂ ಅಸ್ಪೃಶ್ಯತೆ ಆಚರಣೆ: ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ದ್ಯಾಮವ್ವ ದೇವಿ ಗುಡಿ ಪ್ರವೇಶಕ್ಕೆ ದಲಿತ ಕುಟುಂಬಕ್ಕೆ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಜ.26ರಂದು ಮಾದಿಗ ಸಮುದಾಯದ ಮದುವೆ ಇದ್ದು, ಇದರ ನಿಮಿತ್ತ ಮಂಗಳವಾರ ಊರಿನಲ್ಲಿರುವ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ದಲಿತ ಕುಟುಂಬ ಹೋಗಿತ್ತು. ಆದರೆ, ಈ ಸಂದರ್ಭದಲ್ಲಿ ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕುವ ಮೂಲಕ ದೇವಸ್ಥಾನ ಪ್ರವೇಶ ನಿಷೇಧಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಅಸ್ಪೃಶ್ಯತೆ ಹೇಳಿಕೆಯನ್ನು ತಿರುಚಲಾಗುತ್ತಿದೆ : ಕುಮಾರಸ್ವಾಮಿ ಆಕ್ರೋಶ
ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಬೆನ್ನಲ್ಲೇ ದೇವಾಲಯಕ್ಕೆ ಬೀಗ: ಜ.21ರಂದು ಶ್ಯಾಗೋಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಕ್ರಮವಹಿಸುವಂತೆ ಊರಿನ ಹಿರಿಯರು, ಯುವಕರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅದಾದ ನಂತರ, ಗ್ರಾಮಕ್ಕೆ ಗದಗ ಪೊಲೀಸರು ಭೇಟಿ ನೀಡಿ ಊರಿನವರ ಸಮ್ಮುಖದಲ್ಲೇ ಮಾದಿಗ ಸಮುದಾಯದ ಜನರನ್ನು ಊರಿನ ದೇವಸ್ಥಾನಗಳಿಗೆ ಪ್ರವೇಶಾವಕಾಶ ಕಲ್ಪಿಸಿದ್ದರು. ಆಗ ಸುಮ್ಮನಿದ್ದ ಗ್ರಾಮಸ್ಥರು ಈಗ ಬೇಕಂತಲೇ ಗುಡಿಗೆ ಬೀಗ ಹಾಕಿಸಿ, ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.