ಬೆಂಗಳೂರು(ಡಿ.26): ಕೊರೋನಾಗೆ 40 ದಿನಗಳ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣವನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಧ್ಯ ಪ್ರವೇಶಿಸಿ ಬಗೆಹರಿಸಿದ್ದಾರೆ.

ನ.15ರಂದು ಗ್ಯಾಸ್ಟಿಕ್‌ ಸಮಸ್ಯೆಯಿಂದ ಜಯನಗರದ ಮಣಿಪಾಲ್‌ ಆಸ್ಪತ್ರೆ ಸೇರಿದ್ದ ರಾಜಸ್ಥಾನ ಮೂಲದ ಭೀಮರಾಮ್‌ ಪಟೇಲ್‌ (67) ಎಂಬುವರು ಡಿ.23ರಂದು ಮೃತಪಟ್ಟಿದ್ದರು. ಮೃತದೇಹ ಹಸ್ತಾಂತರಿಸಲು ಹೆಚ್ಚುವರಿ ಹತ್ತು ಲಕ್ಷ ರು. ಬಿಲ್‌ ಪಾವತಿಸುವಂತೆ ಸೂಚಿಸಿ ಆಸ್ಪತ್ರೆ ಆಡಳಿತ ಮಂಡಳಿಯು ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿರಲಿಲ್ಲ.

ನೈಟ್ ಕರ್ಫ್ಯೂ ; ಎಲ್ಲವನ್ನೂ ಯೋಚನೆ ಮಾಡಿಯೇ ನಿರ್ಧರಿಸಿದ್ದೇವೆ: ಸುಧಾಕರ್

ವಿಷಯ ಗೊತ್ತಾಗುತ್ತಿದ್ದಂತೆ ಮಾಹಿತಿ ತರಿಸಿಕೊಂಡು ಪರಿಶೀಲಿಸಿದ ಸಚಿವರು, ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ವಿಚಾರಿಸಿದ್ದಾರೆ. ಆಸ್ಪತ್ರೆ ಆಡಳಿತ, ತಮ್ಮದೇನೂ ತಪ್ಪಿಲ್ಲ, ರೋಗಿಗೆ ಕೋವಿಡ್‌ ಇರುವುದರಿಂದ ನಿಯಮಾವಳಿಗಳ ಅನ್ವಯ ಬಿಬಿಎಂಪಿ ಮೂಲಕ ದೇಹ ಹಸ್ತಾಂತರ ಮಾಡಬೇಕಿದೆ ಎಂಬ ಮಾಹಿತಿ ನೀಡಿದರಲ್ಲದೇ, ಬಾಕಿ ಇರುವ ಶುಲ್ಕ ಪಾವತಿ ಕುರಿತ ವಿವರ ನೀಡಿದರು.

ಅಂತಿಮವಾಗಿ ಸಚಿವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಇನ್ಶೂರೆನ್ಸ್‌ ಕಂಪನಿಯಿಂದ ಪಡೆದ 36.59 ಲಕ್ಷ ರು. ಮತ್ತು ರೋಗಿ ಪುತ್ರ ಪಟೇಲ್‌ ಮುಂಚಿತವಾಗಿ ಪಾವತಿಸಿದ್ದ 9.80 ಲಕ್ಷ ರು. ಗಳಿಗೆ ಬಿಲ್‌ ಮುಕ್ತಾಯಗೊಳಿಸಿ ದೇಹವನ್ನು ಮೃತರ ಕುಟುಂಬಸ್ಥರಿಗೆ ಡಿ.24ರಂದು ಹಸ್ತಾಂತರಿಸಲಾಯಿತು.