ಐಪಿಎಲ್ ಟ್ರೋಫಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಡಿಸಿಪಿ ಸೈದುಲ್ಲಾ ಅವರ ಸಮಯಪ್ರಜ್ಞೆ ಹಲವು ಜೀವಗಳನ್ನು ಉಳಿಸಿತು. ಅವರ ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಬೆಂಗಳೂರು (ಜೂ. 8): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2025ರ ಐಪಿಎಲ್ 18ನೇ ಸೀಸನ್ ಟ್ರೋಫಿ ವಿಜಯೋತ್ಸವದ ಅಂಗವಾಗಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆ ಭೀಕರ ಕಾಲ್ತುಳಿತಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ತಾವು ಜನರಿಂದ ತಳ್ಳಿ ಕೆಳಗೆ ಬಿದ್ದರೂ ಪುನಃ ಮೇಲೆದ್ದು ಧೈರ್ಯ ಮತ್ತು ಸಮಯಪ್ರಜ್ಞೆ ತೋರಿಸಿದ ಕಾರಣ ಹಲವು ಜನರ ಪ್ರಾಣ ಉಳಿಯಲು ಕಾರಣವಾಗಿದೆ. ಒಂದು ವೇಳೆ ಅವರಿಲ್ಲದಿದ್ದರೆ ಸಾವಿನ ಸಂಖ್ಯೆ 30ಕ್ಕಿಂತ ಹೆಚ್ಚಾಗುತ್ತಿತ್ತು ಎಂದು ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಗೇಟ್ ನಂ.19: ಅಪಾಯದ ಕೇಂದ್ರ ಬಿಂದು

ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.19 ಬಳಿ ಸಾವಿರಾರು ಅಭಿಮಾನಿಗಳು ಜಮಾವಣೆಗೊಂಡಿದ್ದರು. ಭದ್ರತಾ ವ್ಯವಸ್ಥೆ ಎಡವಟ್ಟಿನ ಕಾರಣದಿಂದಾಗಿ ಕಾಲ್ತುಳಿತ ಸಂಭವಿಸಿತು. ಈ ವೇಳೆ ಜನರಲ್ಲಿ ಪ್ರಾಣಾಪಾಯದ ಭೀತಿ ಹರಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಕೆಳಗೆ ಬಿದ್ದವರ ಮೇಲೆ ಕಾಲಿಟ್ಟು ಓಡಲಾರಂಭಿಸಿದರು. ಆಗ ಕೆಲವರು ನೆಲಕ್ಕೆ ಬಿದ್ದು ಗಾಯಗೊಂಡರು. ಈ ಹೊತ್ತಿನಲ್ಲಿ ಡಿಸಿಪಿ ಸೈದುಲ್ಲಾ ಅಡಾವತ್ ಸ್ಥಳಕ್ಕೆ ತುರ್ತಾಗಿ ಧಾವಿಸಿದರು. ಆರ್‌ಸಿಬಿ ಅಭಿಮಾನಿಗಳ ಮಧ್ಯೆ ಪ್ರವೇಶಿಸಿದ ಡಿಸಿಪಿಯನ್ನೇ ಇಬ್ಬರು ಬಾರಿ ತಳ್ಳಿಬೀಳಿಸಿದರು. ಆದರೂ ಅಲ್ಲಿಂದ ಎದ್ದುಬಂದು ಪುನಃ ನೂಕಾಟದಲ್ಲಿಯೇ ಕಾಲ್ತುಳಿತ ಘಟನೆ ಸಂಭವಿಸಿದ ಸ್ಥಳಕ್ಕೆ ಬಂದರು.

ಗೇಟಿನ ಬಳಿ ಅಲ್ಲಿ ಉಂಟಾಗಿದ್ದ ಕಾಲ್ತುಳಿತವನ್ನು ನೋಡಿ ತಮ್ಮ ಪ್ರಾಣ ಲೆಕ್ಕಿಸದೇ ನುಗ್ಗಿದ ಅವರು ತಡೆಯುವುದಕ್ಕೆ ಕರ್ತವ್ಯವನ್ನು ಕೈಬಿಡದೆ, ಜನರನ್ನು ನಿಯಂತ್ರಿಸಲು ಮುಂದಾದರು. ಅವರ ಸೂಚನೆಯ ಮೇರೆಗೆ ಇಬ್ಬರು ಸಿಬ್ಬಂದಿ ಲಾಠಿ ಪ್ರಯೋಗದ ಮೂಲಕ ಜನರನ್ನು ಚದುರಿಸಿದರು. ಆ ಕ್ಷಣಕ್ಕೆ ಜನರು ಹಿಂದಿನಿಂದ ಬಂದು ಕೆಳಗೆ ತುಳಿಯುತ್ತಿದ್ದುದನ್ನು ತಪ್ಪಿಸಿ, ಕೆಳಗೆ ಬಿದ್ದು ಗಾಯಗೊಂಡ ಜನರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ರವಾನೆ ಮಾಡಿದರು.

ಮತ್ತಷ್ಟು ಸಾವು ತಪ್ಪಿದ ಸಾಧ್ಯತೆ

ಇನ್ನು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಮತ್ತು ಕ್ರೀಡಾಂಗಣದ ಅಧಿಕಾರಿಗಳ ಪ್ರಕಾರ, ಡಿಸಿಪಿ ಸೈದುಲ್ಲಾ ಅವರ ಸಮಯಪ್ರಜೆ ಇಲ್ಲದಿದ್ದರೆ ಕನಿಷ್ಠ 25–30 ಮಂದಿ ಸಾವನ್ನಪ್ಪಬಹುದಿತ್ತು. ಅಭಿಮಾನಿಗಳ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಗೇಟಿನ ಬದಿಯಲ್ಲಿ ಕೆಳಗೆ ಬಿದ್ದ ಯುವಕರು ಪ್ರಾಣ ಭಿಕ್ಷೆಗಾಗಿ ಒದ್ದಾಡುತ್ತಿದ್ದರು. ಕೆಲವರ ಕಾಲು ಮುರಿದಿದ್ದರೆ, ಇತರರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡ ಡಿಸಿಪಿ ಸೈದುಲ್ಲಾ ಅಡಾವತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನದ ಚಿಕಿತ್ಸೆ ನಂತರ ಈಗ ಅವರು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ಪ್ರಕಾರ ಅವರ ಸ್ಥಿತಿ ಸುಧಾರಣೆಯಲ್ಲಿದೆ.

ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳು:

ಈ ಘಟನೆಯಲ್ಲಿ ಧೈರ್ಯ ಮತ್ತು ಕರ್ತವ್ಯನಿಷ್ಠೆ ಮೆರೆದ ಡಿಸಿಪಿ ಅಡಾವತ್ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ನಿರ್ಣಾಯಕ ಕ್ರಮದಿಂದಾಗಿ ದೊಡ್ಡ ದುರಂತ ತಪ್ಪಿದುದಾಗಿ ಹೇಳಲಾಗಿದೆ.