ಅಥಣಿ(ಜ.24): ಇತ್ತೀಚೆಗೆ ಪ್ರಧಾನಿ ಮೋದಿಯವರು ಕೃಷಿ ಅಭಿವೃದ್ಧಿಗೆ ಎಲ್ಲ ರಾಜ್ಯಗಳ ಸಿಎಂ, ಡಿಸಿಎಂ, ಕೃಷಿ ಸಚಿವರ ಸಭೆ ನಡೆಸಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅದಲ್ಲದೆ ಕೆಲವು ಸಲಹೆಗಳನ್ನು ಸ್ವೀಕರಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದ್ದಾರೆ.

ಅಥಣಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ದೇಶದ ಪ್ರತಿಯೊಬ್ಬ ರೈತ ಸ್ವಾವಲಂಬಿಯಾಗಬೇಕು. ವಿದೇಶ ಆಮದು ಕಡಿಮೆ ಆಗಬೇಕು. ಅಂಥ ಯೋಜನೆಗಳನ್ನು ತರಲು ಪ್ರಧಾನಿ ನರೆಂದ್ರ ಮೋದಿ ಅವರು ಒತ್ತು ನೀಡಿದ್ದಾರೆ. ಈ ಕುರಿತು ಅನೇಕ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ಮುಂದೆ ಪ್ರತಿ ರೈತನಿಗೆ ತಾನು ಖರೀದಿಸಿದ ರಸಗೊಬ್ಬರ ಸಬ್ಸಿಡಿ ಹಣ ಅವನ ಖಾತೆಗೆ ನೇರವಾಗಿ ಜಮೆ ಆಗುವಂತೆ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮುಂದಿದೆ. ಇದರಿಂದ ಕೆಲವು ಕಂಪನಿ ಈ ಸಬ್ಸಿಡಿ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು ಕಡಿಮೆಯಾಗಲಿದೆ. ದುರುಪಯೋಗ ತಪ್ಪಿಸುವುದಕ್ಕಾಗಿ ಈ ವ್ಯವಸ್ಥೆ ತರಲು ಚಿಂತನೆ ಮಾಡಲಾಗುತ್ತಿದೆ ಎಂದರು.

ಪೆಟ್ರೋಲ್‌, ಡೀಸೆಲ್‌ ಮುಂತಾದವುಗಳ ಸಲುವಾಗಿ ಪರಾವಲಂಬನೆ ತಪ್ಪಿಸುವುದಕ್ಕೆ ಕಬ್ಬು ಬೆಳೆಯುವ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆ ಬದಲು ಎಥೆನಾಲ್‌ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮೆಕ್ಕೆಜೋಳದಿಂದ ಕೆಟ್ಟ ಅಕ್ಕಿಗಳಿಂದ ಸಹ ಎಥೆನಾಲ್‌ ತಯಾರಿಸಬಹುದು. ಅದಕ್ಕೂ ಹೆಚ್ಚು ಮಹತ್ವ ನೀಡಲು ಸೂಚಿಸಿದ್ದಾರೆ ಎಂದು ಹೇಳಿದರು.