ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸ್ವಲ್ಪ ಸಮಯಾವಕಾಶ ಬೇಕು: ಸಚಿವ ಸವದಿ
ಸರ್ಕಾರಿ ಬಸ್‌ಗಳಲ್ಲೇ ಸಂಚರಿಸಿ| 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಸ್ ನಿಲ್ದಾಣ ಲೋಕಾರ್ಪಣೆ| ಸಾರಿಗೆ ನೌಕರರ ಪ್ರತಿಭಟನೆ ಬರೀ ಊಹಾಪೋಹ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ|
ಯಲ್ಲಾಪುರ(ಫೆ.13): ನಮ್ಮ ಸಾರಿಗೆ ಇಲಾಖೆ ನಾನು ಸಚಿವನಾಗುವವರೆಗೂ .4 ಸಾವಿರ ಕೋಟಿ ಹಾನಿಯಲ್ಲಿತ್ತು. ನಂತರ ಕೊರೋನಾ ನಮ್ಮನ್ನೆಲ್ಲ ಆವರಿಸಿದ ಪರಿಣಾಮ 4 ತಿಂಗಳ ಕಾಲ ಇಡೀ ಬಸ್ ಸಂಚಾರವೇ ಸ್ಥಗಿತಗೊಂಡಿತ್ತು. ಆದರೆ ಮುಖ್ಯಮಂತ್ರಿಗಳ ಸಹಕಾರದಿಂದ ಎಲ್ಲ ಸಿಬ್ಬಂದಿಗಳಿಗೆ ಆ ಅವಧಿಯಲ್ಲಿ ಸರ್ಕಾರದಿಂದಲೇ ಸಂಬಳ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ ಹೇಳಿದರು.
ಅವರು ಶುಕ್ರವಾರ ಲೋಕೋಪಯೋಗಿ ಇಲಾಖೆಯ . 24 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಬೇಡ್ತಿ ಸೇತುವೆ ಮತ್ತು . 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಯಲ್ಲಾಪುರದ ನೂತನ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಿವರಾಮ ಹೆಬ್ಬಾರರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ನಾನು ಉಪಮುಖ್ಯಮಂತ್ರಿಯಾಗಿ, ಸಾರಿಗೆ ಸಚಿವನಾಗಲು ಅವರ ಬಳಗದ ಸಹಕಾರವೇ ಕಾರಣ. ಇಂತಹ ಶಿವರಾಮ ಹೆಬ್ಬಾರರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ದಕ್ಷತೆಯಿಂದ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಯಾಣಿಕರ ಗಮನಕ್ಕೆ: ಸದ್ಯದಲ್ಲೇ ಬಸ್ ಪ್ರಯಾಣ ದರ ಏರಿಕೆ
ಕೊರೋನಾ ಪರಿಣಾಮದಿಂದಾಗಿ ಅತಿ ಹೆಚ್ಚು ತೊಂದರೆಗೊಳಗಾದ ಇಲಾಖೆಯೆಂದರೆ ಸಾರಿಗೆ ಇಲಾಖೆ. 4 ತಿಂಗಳ ಕಾಲ ಬಸ್ ಸಂಚಾರ ಸ್ಥಗಿತಗೊಂಡು, ತನ್ಮೂಲಕ ಸಿಬ್ಬಂದಿಗಳಿಗೆ ಸಂಬಳವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಯಿತು. ಮುಖ್ಯಮಂತ್ರಿಗಳಲ್ಲಿ ವಿನಂತಿಸಿದಂತೆ . 650 ಕೋಟಿ ಸಂಬಳಕ್ಕೆ ನೀಡಿದರು ಎಂದ ಅವರು, 1 ಕೋಟಿಗಿಂತ ಅಧಿಕ ಜನ ಪ್ರಯಾಣಿಸುತ್ತಾರೆ. ಇಂದು ಇಂಧನದ ದರ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿಲ್ಲ. ನಮ್ಮ ಸಿಬ್ಬಂದಿಗಳ ಬೇಡಿಕೆಯ 10ರಲ್ಲಿ 9ಕ್ಕೆ ಸಮ್ಮತಿ ನೀಡಿದ್ದೇವೆ. ಆದರೆ ಚಳವಳಿ ಸಂದರ್ಭದಲ್ಲಿ ಯಾವ ಹೋರಾಟ-ಬೇಡಿಕೆಯ ಕುರಿತು ನೋವಿಲ್ಲ. ನಮ್ಮ ಸಿಬ್ಬಂದಿಗಳೇ ಬೇರೆಯವರ ಮಾತು ಕೇಳಿ, ಬಸ್‌ಗಳಿಗೆ ಕಲ್ಲು ಹೊಡೆದಿದ್ದು ನೋವಾಗಿದೆ. ಬಸ್ ಜನಸಾಮಾನ್ಯರದ್ದು. ಜನರು ಕೂಡ ಖಾಸಗಿ ಬಸ್‌ಗಳಿಗಿಂತಲೂ ಸರ್ಕಾರಿ ಬಸ್‌ಗಳಲ್ಲೇ ಪ್ರಯಾಣಿಸಬೇಕು. ತನ್ಮೂಲಕ ಇಲಾಖೆಗಾಗುವ ನಷ್ಟವನ್ನು ತಪ್ಪಿಸಬೇಕೆಂದರು.
ಶಿರಸಿ-ಯಲ್ಲಾಪುರಗಳ ಸಂಪರ್ಕ ಕಲ್ಪಿಸುವ .24 ಕೋಟಿ ವೆಚ್ಚದ ಬೇಡ್ತಿ ಸೇತುವೆ ಸುಂದರವಾಗಿ ನಿರ್ಮಾಣಗೊಂಡಿದೆ. ಅದನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಸಾರ್ವಜನಿಕರು ಸರ್ಕಾರದ ಯೋಜನೆ-ಕಾರ್ಯಗಳನ್ನು ತಮ್ಮದೆಂಬ ಭಾವನೆಯಿಂದ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಉ.ಕ. ಮಲೆನಾಡು ಜಿಲ್ಲೆ ಬಹು ವಿಸ್ತೀರ್ಣ ಹೊಂದಿದ್ದರೂ, ಇಲ್ಲಿ ಜನಸಂಖ್ಯೆ ಕಡಿಮೆ. ಹಾಗಾಗಿ ಅಭಿವೃದ್ಧಿ ಎಷ್ಟೇ ಮಾಡಿದರೂ ಜನರಿಗೆ ತಲುಪುತ್ತಿಲ್ಲ. ಕಳೆದ ವರ್ಷದ ಮಳೆಗಾಲದ ಅನಾಹುತದಿಂದ ಶಿರಸಿ-ಯಲ್ಲಾಪುರ ಸೇತುವೆ ಬಗ್ಗೆ ಆತಂಕವಾಗಿತ್ತು. ಧೈರ್ಯದಿಂದ ಸೇತುವೆ ಮೇಲೆ ನಾವೇ ಸ್ವತಃ ಪ್ರಯಾಣಿಸಿ ಚಾಲಕರಿಗೆ ಧೈರ್ಯ ತುಂಬಿದ್ದೇವೆ. ಕೇವಲ ತಾಂತ್ರಿಕತೆ ಹೇಳುತ್ತ ಸಾಗಿದರೆ ಯಾವುದೇ ಅಭಿವೃದ್ಧಿ ಕಷ್ಟ. ಅನೇಕ ಗುತ್ತಿಗೆದಾರರು ಒಂದು ವರ್ಷಕ್ಕೆ ಮಾಡಬೇಕಾದ ಕೆಲಸವನ್ನು 10 ವರ್ಷಕ್ಕೆ ಮಾಡುತ್ತಾರೆ. ಇದು ಸಾಧುವಲ್ಲ. ಆ ದೃಷ್ಟಿಯಿಂದ ಬಸ್ ನಿಲ್ದಾಣ ನಿರ್ಮಿಸಿದ ರವಿ ನಾಯ್ಕ ನಿಗದಿ ಪೂರ್ವದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಮಾತ್ರ ಬಸ್‌ನಲ್ಲಿ ಕಳುಹಿಸುತ್ತಾರೆ. ತಾವು ಟೆಂಪೋ ಸೇರಿದಂತೆ ಮತ್ತಿತರ ಖಾಸಗಿ ವಾಹನಗಳಲ್ಲಿ ಓಡಾಡುತ್ತಾರೆ. 15 ಖಾಸಗಿ ಬಸ್‌ಗಳು ಯಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿವೆ. ಆದರೆ ಒಂದೇ ಒಂದು ಸರ್ಕಾರಿ ಹೈಟೆಕ್ ಬಸ್‌ನ್ನು ಬೆಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಸಾರಿಗೆ ಇಲಾಖೆ ನಮ್ಮದೆಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಸಾರಿಗೆ ಇಲಾಖೆ ಬದುಕಲು ಸಾಧ್ಯ ಎಂದರು.
ವಾ.ಕ.ರಾ.ಸ.ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, ಬಹುದಿನದ ಬೇಡಿಕೆ ಯಲ್ಲಾಪುರ ಜನರಿಗೆ ದೊರೆತಿದೆ. ಹೆಬ್ಬಾರರು ಶಾಸಕರಾದ ಮೇಲೆ ಮುಂಡಗೋಡ-ಯಲ್ಲಾಪುರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗೆಯೇ ನಾವೆಲ್ಲರೂ ಸೇರಿ ಕ್ಷೇತ್ರದ, ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದರು.
ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಡಿಸಿಎಂ ಲಕ್ಷ್ಮಣ್ ಸವದಿ
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಭಟ್ಟ, ಜಿ.ಪಂ. ಸದಸ್ಯೆ ರೂಪಾ ಬೂರ್ಮನೆ, ತಾ.ಪಂ. ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಪ.ಪಂ. ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ವಾಕರಾಸ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಶಿರಸಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೇಡ್ತಿ ಸೇತುವೆಯ ನಿರ್ಮಿಸಿದ ಗುತ್ತಿಗೆದಾರ ಬಿ.ಎಸ್.ಗಾಂವ್ಕರ್ ಧಾರವಾಡ ಮತ್ತು ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರರಾದ ರವಿಶಂಕರ, ರೋಹಿದಾಸ ನಾಯ್ಕ, ಗಣಪತಿ ಪಟಗಾರ ಅವರನ್ನು ಸಚಿವರುಗಳು ಸನ್ಮಾನಿಸಿದರು. ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆಯ ಸಕಾನಿ ಅಭಿಯಂತರ ವಿ.ಎಂ. ಭಟ್ಟನಿರ್ವಹಿಸಿದರು. ಪ್ರಕಾಶ ನಾಯ್ಕ ವಂದಿಸಿದರು.
ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸಮಯಾವಕಾಶ ಬೇಕು
ಸಾರಿಗೆ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸ್ವಲ್ಪ ಸಮಯಾವಕಾಶ ಬೇಕಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಯಲ್ಲಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಬೇಡಿಕೆ ಈಡೇರಿಸುವ ಬಗ್ಗೆ ಮಾತು ನೀಡಿದ್ದೆವು. ಈಗಾಗಲೇ 5 ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಉಳಿದ 4 ಬೇಡಿಕೆಗೆ ಸ್ವಲ್ಪ ಸಮಯಾವಕಾಶ ಬೇಕಿದೆ. ಇದಕ್ಕಾಗಿ ಸಮಿತಿ ಮಾಡಲಾಗಿದ್ದು, ಈಗಾಗಲೇ ನಾಲ್ಕೈದು ಸಭೆ ನಡೆಸಲಾಗಿದೆ. ಇನ್ನೂ ಎರಡು ಮೂರು ಸಭೆ ಮಾಡಿ ಅದಕ್ಕೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಸಾರಿಗೆ ನೌಕರರು ಪ್ರತಿಭಟನೆ ಮಾಡುವುದಾಗಿ ಹೇಳಿಲ್ಲ, ಅದು ಊಹಾಪೋಹ. ಸಾರಿಗೆ ನೌಕರರಲ್ಲಿ ನಾಲ್ಕೈದು ಯೂನಿಯನ್‌ಗಳಿದ್ದು, ಒಂದು ಯೂನಿಯನ್ ಚರ್ಚೆ ನಡೆಸಿದರೆ, ಮತ್ತೊಂದು ಬೇರೆ ಕೇಳುತ್ತಿದೆ. ಬೇರೆ ಬೇರೆ ಯೂನಿಯನ್ ಜತೆ ಮಾತನಾಡಿ ಅವರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದರು.
ಮೀಸಲಾತಿ ಹೋರಾಟ
ವಿವಿಧ ಸಮಾಜದವರು ಮೀಸಲಾತಿಗಾಗಿ ಬೇರೆ ಬೇರೆ ಹೋರಾಟಗಳನ್ನು ನಡೆಸುತ್ತಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿ ಗಮನಿಸುತ್ತಿದ್ದು, ಅದನ್ನು ಬಗೆ ಹರಿಸುವ ಕೆಲಸ ಅವರು ನಡೆಸುತ್ತಾರೆ. ಎಲ್ಲಾ ಸಮಸ್ಯೆಗಳಿಗೂ ಸಿಎಂ ಚಾಣಾಕ್ಷದಿಂದ ಪರಿಹಾರ ಒದಗಿಸುತ್ತಾರೆ. ಹಿಂದುಗಳ ನಡುವೆ ಒಡಕು ಉಂಟಾಗದು. ಒಂದೊಂದು ಸಲ ಇಂತಹ ಸಮಸ್ಯೆಗಳು ಬರುತ್ತೆ, ಅದನ್ನು ಪರಿಹರಿಸೋ ಕೆಲಸ ಸರಕಾರ ಮಾಡಲಿದೆ ಎಂದರು.
ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನು ಗಮನಕ್ಕೆ ತಂದಾಗ, ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊರೋನಾ ಬಂದ ಮೇಲೆ ದೇಶ ಮಾತ್ರವಲ್ಲ, ವಿಶ್ವದಲ್ಲೇ ಹಣಕಾಸಿನ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಅದನ್ನು ಸರಿಪಡಿಸುವ ಕೆಲಸ ಇಂದು ಮಾಡಲಾಗುತ್ತಿದೆ. ಸಿದ್ದರಾಮಯ್ಯ ಇರೋದೇ ಸರಕಾರವನ್ನು ಟೀಕೆ ಮಾಡೋಕೆ ಎಂದು ಸಚಿವ ಸವದಿ ಹೇಳಿದರು.