ಅಥಣಿ(ನ.28): ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇದರಿಂದ ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬರಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಬುಧವಾರ ಅಥಣಿ ವಿಧಾನಸಭಾ ಉಪಚುನಾವಣಾ ನಿಮಿತ್ತ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಮತಯಾಚಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಆಯ್ಕೆಯಾದರೇ ಅಥಣಿಗೆ ಶಾಸಕನಷ್ಟೇ ಅಲ್ಲದೇ ಮಂತ್ರಿಯಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ. ಇಬ್ಬರು ಒಟ್ಟಿಗೆ ಸೇರಿಕೊಂಡು ಅಥಣಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇವೆ. ಈ ಚುನಾವಣೆಯಲ್ಲಿ ಮತದಾರರಿಗೆ ಕೊಟ್ಟಭರವಸೆಗಳನ್ನು ಈಡೇರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಮಾತನಾಡಿ, ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದರಿಂದ ಪಕ್ಷದಿಂದ ಹೊರಬರುವ ಸ್ಥಿತಿ ಬಂದಿದೆ. ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಡಿಸಿಎಂ ಲಕ್ಷ್ಮಣ ಸವದಿಯವರ ಮಾರ್ಗದರ್ಶದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಮತದಾರರ ಭರವಸೆ ಈಡೇರಿಸುವಲ್ಲಿ ಹಗಲಿರುಳು ಇಬ್ಬರು ಒಕ್ಕಟ್ಟಾಗಿ ಶ್ರಮಿಸುತ್ತೇವೆ. ಎಲ್ಲ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು.

ಮತಯಾಚನೆಯಲ್ಲಿ ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಶ್ರೀಶೈಲ ನಾಯಿಕ, ಸುಶೀಲಕುಮಾರ ಪತ್ತಾರ, ಧರೆಪ್ಪ ಠಕ್ಕಣ್ಣವರ, ರಾಜುಗೌಡ ಪಾಟೀಲ, ನಿಂಗಪ್ಪ ನಂದೇಶ್ವರ, ಶಿವಗೌಡ ಜಗದೇವ, ಬಸವರಾಜ ಮುಗ್ಗಣ್ಣವರ, ಸೈಬ್ಬಣ್ಣ ಕಮತಗಿ, ಗೂಳಪ್ಪನ್ನವರ ಸೇರಿದಂತೆ ಗ್ರಾಮದ ಬಿಜೆಪಿ ಹಿರಿಯ ಮುಖಂಡರು, ಯುವಕರು ಕಾರ್ಯಕರ್ತರು ಇದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.