ಬಾಗಲಕೋಟೆ(ಡಿ.23): ಮಾಜಿ ಸಚಿವ ಯು.ಟಿ. ಖಾದರ್ ಕಾಂಗ್ರೆಸ್‌ ಪಕ್ಷದ ಒಂದು ತುಣುಕು, ವೋಟ್ ಬ್ಯಾಂಕ್ ರಾಜಕಾರಣ ಮಾಡೋದು ಅಷ್ಟೇ ಅವರಿಗೆ ಗೊತ್ತು, ಶಾಸಕ ಆಗೋದು ಅಷ್ಟೆ ಗೊತ್ತಿದೆ. ದೇಶದ ಭದ್ರತೆ ಬಗ್ಗೆ ಅವರಿಗೆ ಗೊತ್ತಿಲ್ಲ, ಜ್ಞಾನದ ಕೊರತೆಯಿಂದ ಹಾಗೆ ಮಾತನಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತೇ ಎಂಬ ಯು. ಟಿ. ಖಾದರ್ ಹೇಳಿಕೆಗೆ ಸೋಮವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಸೂಫಿ ಸಂತರು  ಭಾವೈಕ್ಯತೆಯಿಂದ ಬದುಕಬೇಕೆಂದು ಹೇಳಿ ಹೋಗಿದ್ದಾರೆ. ನಮ್ಮ ಜನ ಭಾವೈಕ್ಯತೆಯಿಂದ ಬದುಕುವವರಾಗಿದ್ದಾರೆ. ರಕ್ತದ ಕಲೆ ತರುವಂತ ಕೆಲಸ ಯಾರು ಮಾಡಬಾರದು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ, ಭಾಷಾವಾರು ರಾಜ್ಯಗಳು ವಿಂಗಡಣೆಯಾಗಿವೆ. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಕಾನೂನು ಜಾರಿಯಾಯ್ತು, ಮಹಾರಾಷ್ಟ್ರದಲ್ಲಿ ಬಹುಮತವಿಲ್ಲದ ಮೂರು ಪಕ್ಷ ಸೇರಿ ಕಿಚಡಿ ಸರ್ಕಾರ ರಚನೆಯಾಗಿದೆ. ಕಿಚಡಿ ಸರ್ಕಾರದ ಮುಖ್ಯಸ್ಥರು ಉದ್ಧವ್ ಠಾಕ್ರೆ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಜನರ ಭಾವನೆ ಬೇರೆಡೆ ಡೈವರ್ಟ್ ಮಾಡೋಕೆ ಆ ರೀತಿ  ಹೇಳಿಕೆ ನೀಡಿದ್ದಾರೆ. ಪ್ರಾಮಾಣಿಕ, ಕಳಕಳಿಯಿಂದ ಕೊಟ್ಟಿರುವ ಹೇಳಿಕೆಯಲ್ಲ. ಬೆಳಗಾವಿ ಈ ಭೂಮಿ ಮೇಲೆ ಜನರು ಇರುವವರೆಗೂ ಕರ್ನಾಟಕದಲ್ಲಿರುತ್ತೆ ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.