ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಕೂರಿಗೆ ಹಿಡಿದ ರೈತರು ಎಷ್ಟು ಜನ ಇದ್ದಾರೆ? ಕಾರಜೋಳ
ಇದು ರಾಜಕೀಯ ಪ್ರೇರಿತ ಹೋರಾಟ| ರೈತರ ಹಿತ ಗಮನದಲ್ಲಿಟ್ಟುಕೊಂಡು ಮಾಡುವಂತಹ ಹೋರಾಟವಲ್ಲ| ದೇಶದಲ್ಲಿ ಶೇ. 95 ರಷ್ಟು ರೈತರಿಂದ ಸ್ವಾಗತ| ರೈತನಿಗೆ ಮಾರುಕಟ್ಟೆ ವಿಚಾರದಲ್ಲಿ ಮುಕ್ತ ಅವಕಾಶ| ಎಪಿಎಂಸಿ ಒಳಗೂ ಹೊರಗೂ, ರೈತ ಹೊಲದಲ್ಲಿ ಮಾರಾಟ ಮಾಡೋಕೆ ಅವಕಾಶ|
ಬಾಗಲಕೋಟೆ(ಜ.26): ಕೂರಿಗೆ ಹಿಡಿದು ಬೆಳೆದಂತಹ ರೈತರು ಹೊರಗೆ ಬಂದು ಎಷ್ಟು ಜನ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೋರಾಟದಲ್ಲಿ ಭಾಗಿಯಾದವರು ರೈತರಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನುಷ್ಠಾನದಲ್ಲಿ ಏನಾದರೂ ವ್ಯತ್ಯಾಸವಾದರೆ ಅಥವಾ ರೈತರ ಹಿತ ಕಾಪಾಡಲು ತೊಂದರೆಯಾದರೆ ಖಂಡಿತ ಬದಲಾವಣೆ ಮಾಡಬಹುದು. ಅನುಷ್ಠಾನಕ್ಕೆ ಅವಕಾಶ ಮಾಡಿ ಕೊಡಿ, ಸರ್ಕಾರವನ್ನು ಬೆಂಬಲಿಸಿ. ಹೋರಾಟ ನಿಲ್ಲಿಸಿ ಎಂದು ಹೋರಾಟ ನಿರತರಿಗೆ ಗೋವಿಂದ ಕಾರಜೋಳ ಅವರು ಕೈಮುಗಿದು ಕೇಳಿಕೊಂಡಿದ್ದಾರೆ.
ಇದು ರಾಜಕೀಯ ಪ್ರೇರಿತ ಹೋರಾಟವಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡುವಂತಹ ಹೋರಾಟವಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಕಾನೂನು ಅನುಷ್ಠಾನ ಮಾಡುತ್ತೇವೆ ಅಂತ ಕಾಂಗ್ರೆಸ್‌ನವರು ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದರು. ಈಗ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಾರಜೋಳ ಪ್ರಶ್ನಿಸಿದ್ದಾರೆ.
ಹದಗೆಟ್ಟ ರಸ್ತೆಗೆ ಡಿಸಿಎಂ ಫುಲ್ ಗರಂ: ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರಜೋಳ
ದೇಶದಲ್ಲಿ ಶೇಕಡಾ 95ರಷ್ಟು ರೈತರು ಸ್ವಾಗತಿಸಿದ್ದಾರೆ. ನಾನು ಕೇಳ್ತಿನಿ ನಮ್ಮ ಜಿಲ್ಲೆಯಲ್ಲಿ ಯಾರಾದ್ರೂ ವಿರೋಧ ಮಾಡಿದ್ದಾರಾ?, ಬೆರಳೆಣಿಕೆಯಷ್ಟು ರೈತರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಹೋರಾಟವಾಗಿದೆ. ನಾವು ರೈತರಿಗೆ ಸಂಸತ್, ವಿಧಾನಸಭೆ ಅಧಿವೇಶನದ ಒಳಗೂ ಹೊರಗೂ ಹೇಳಿದ್ದೇವೆ. ರೈತನಿಗೆ ಮಾರುಕಟ್ಟೆ ವಿಚಾರದಲ್ಲಿ ಮುಕ್ತ ಅವಕಾಶವಿದೆ. ಎಪಿಎಂಸಿ ಒಳಗೂ ಹೊರಗೂ, ರೈತ ಹೊಲದಲ್ಲಿ ಮಾರಾಟ ಮಾಡೋಕೆ ಅವಕಾಶವಿದೆ. ವಿರೋಧ ಮಾಡೋದಕ್ಕೆ ಕಾರಣನೇ ಇಲ್ಲ. ಒಂದು, ಎರಡು ವರ್ಷವೋ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ. ಸರಿ ಹೋಗದೇ ಇದ್ದರೆ, ಕಾನೂನು ತಿದ್ದುಪಡಿ ಮಾಡೋದಕ್ಕೆ ಆಗೋದಿಲ್ವಾ?, ಅನೇಕ ಕಾನೂನುಗಳನ್ನು ತಂದಿದ್ದೇವಿ, ಅನೇಕ ಬಾರಿ ತಿದ್ದುಪಡಿ, ಮಾರ್ಪಾಡುಗಳನ್ನ ಮಾಡಿದ್ದೇವೆ. ಸ್ವಾತಂತ್ರ್ಯ ಬಂದು 70 ವರ್ಷದಲ್ಲಿ ಅನೇಕ ಬಾರಿ ಕಾನೂನು ತಿದ್ದುಪಡಿ ಮಾಡಿದ್ದೇವೆ. ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತೇವೆ ಎಂಬ ಡಿಸಿಎಂ ಕಾರಜೋಳರ ಹೇಳಿಕೆ ಗೊಂದಲದ ಗೂಡಾಗಿದೆ.
ಸಂವಿಧಾನ ಬದಲಾವಣೆ ಅಲ್ಲ, ಅನೇಕ ಬಾರಿ ತಿದ್ದುಪಡಿ ಮಾಡಿದ್ದೇವೆ. ಈ ಭೂಮಿ ಮೇಲೆ ಜನ ಎಲ್ಲಿವರೆಗೂ ಇರ್ತಾರೆ ಅಲ್ಲಿವರೆಗೂ ಸಂವಿಧಾನ ಇರುತ್ತದೆ ಎಂದು ಕಾರಜೋಳ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇನ್ನು ಖಾತೆ ಅದಲು ಬದಲು ಕಾಮಿಡಿ ಕ್ಯಾಬಿನೆಟ್ ಪ್ರಶ್ನೆಗೆ ಪ್ರತಿಕ್ರಿಯಿಸಿದೇ ಸುದ್ದಿಗೋಷ್ಠಿಯಿಂದ ಕಾರಜೋಳರು ನಿರ್ಗಮಿಸಿದ್ದಾರೆ.