ಶಿವಮೊಗ್ಗ ಸ್ಫೋಟ: ನಾನಂತೂ ಕಲ್ಲು ಗಣಿಗಾರಿಕೆ ಮಾಡಿಲ್ಲ, ಅಕ್ರಮದಲ್ಲಿ ತೊಡಗಿಲ್ಲ, ಕಾರಜೋಳ
ಕೆಲವರು ನಿಯಮಾವಳಿ ಮೀರಿ ಸ್ಫೋಟಕ ಕಾರು, ಟ್ರಕ್‌ಗಳಲ್ಲಿ ಒಯ್ಯಬಾರದು| ಹೆಚ್ಚಿನ ತನಿಖೆಯಿಂದ ಎಲ್ಲ ಮಾಹಿತಿ ಸಿಗುತ್ತದೆ| ಸ್ಫೋಟದ ಭೀಕರತೆಗೆ ಮೃದೇಹಗಳು ಛಿದ್ರ ಛಿದ್ರ| ಕಲ್ಲಿನ ಬಂಡೆಯೇ ಪುಡಿ ಪುಡಿ ಆಗುವ ಸ್ಫೋಟಕ ಇದಾಗಿದೆ: ಕಾರಜೋಳ|
ಬಾಗಲಕೋಟೆ(ಜ.22): ಶಿವಮೊಗ್ಗದಲ್ಲಿ ಭೀಕರ ಸ್ಫೋಟದಿಂದ 8 ಮಂದಿ ಸಾವನ್ನಪ್ಪಿರುವುದು ದೊಡ್ಡ ದುರಂತವಾಗಿದೆ. ಕಲ್ಲು ಗಣಿಯಲ್ಲಿ ಬ್ಲಾಸ್ಟಿಂಗ್‌ಗೆ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. ತಪ್ಪು ಯಾರೇ ಮಾಡಿದ್ರೂ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಹಿಂದೇಟು ಹಾಕಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಂದು(ಶುಕ್ರವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿವೆ. ಅಂತಲ್ಲಿ ಜಿಲೆಟಿನ್ ಡಿಟೊನೆಟರ್ಸ್ ಬಳಕೆ ಮಾಡುವವರು ಪರವಾನಿಗೆ ಪಡೆದುಕೊಳ್ಳಬೇಕು. ಸುರಕ್ಷಿತ ಸ್ಥಳದಲ್ಲಿ ಮದ್ದು ಇಡಬೇಕು. ಈ ಬಗ್ಗೆ ಸರ್ಕಾರ ಹಲವಾರು ಬಾರಿ ಸೂಚನೆ ಕೊಟ್ಟಿದ್ರೂ ಕೆಲ ಮಾಲೀಕರು ನಿರ್ಲಕ್ಷ್ಯ ಮಾಡಿದ್ದರಿಂದ ಕಾರ್ಮಿಕ ವರ್ಗಕ್ಕೆ ದೊಡ್ಡ ಅನಾಹುತ ಆಗಿದೆ. ಶಿವಮೊಗ್ಗ ಘಟನೆ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದು ತಿಳಿಸಿದ್ದಾರೆ.
ಕೆಲವರು ನಿಯಮಾವಳಿ ಮೀರಿ ಸ್ಫೋಟಕ ಕಾರು, ಟ್ರಕ್‌ಗಳಲ್ಲಿ ತೆಗೆದುಕೊಂಡು ಹೋಗಬಾರದು. ಹೆಚ್ಚಿನ ತನಿಖೆಯಿಂದ ಎಲ್ಲ ಮಾಹಿತಿ ಸಿಗುತ್ತದೆ. ಸಾವಿನ ಸಂಖ್ಯೆ ಬಗ್ಗೆ ಸ್ಥಳದಲ್ಲಿ ಇರುವ ಎಸ್ಪಿ ನಿಖರ ಮಾಹಿತಿ ಒದಗಿಸುತ್ತಾರೆ. ಸ್ಫೋಟದ ಭೀಕರತೆಗೆ ಮೃದೇಹಗಳು ಛಿದ್ರ ಛಿದ್ರವಾಗಿವೆ. ಕಲ್ಲಿನ ಬಂಡೆಯೇ ಪುಡಿ ಪುಡಿ ಆಗುವ ಸ್ಫೋಟಕ ಇದಾಗಿದೆ ಎಂದಿದ್ದಾರೆ.
ಶಿವಮೊಗ್ಗ ಬಳಿ ಭೀಕರ ಸ್ಫೋಟ 8 ಬಲಿ, ಸ್ಫೋಟದ ತೀವ್ರತೆಗೆ 4 ಜಿಲ್ಲೆಯಲ್ಲಿ ಕಂಪಿಸಿದ ಭೂಮಿ!
ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿ ತನಿಖೆ ನಡೆಸಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಕಡೆಗೂ ಕಲ್ಲು ಬಂಡೆ ಒಡೆಯಲು ಸ್ಫೋಟಕ ಬಳಕೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಸೇರಿ ಬೇರೆ ಬೇರೆ ಕಡೆಗಳಲ್ಲಿ ಗಣಿಗಾರಿಕೆ ಇದೆ. ಈಗಾಗಲೇ ನಾನು ಬಾಗಲಕೋಟೆ ಎಸ್ಪಿ, ಡಿಸಿಗೆ ಸೂಚನೆ ಕೊಟ್ಟಿದ್ದೇನೆ. ನಿಯಮಾವಳಿ ಪ್ರಕಾರವೇ ಸ್ಫೋಟಕ ಬಳಕೆಗೆ ಕ್ರಮಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ನಾನಂತೂ 70 ವರ್ಷದಲ್ಲಿ ಕಲ್ಲು ಸಗಣಿಗಾರಿಕೆ ಮಾಡಿಲ್ಲ. ಅಕ್ರಮದಲ್ಲಿ ತೊಡಗಿಲ್ಲ. ಅಂತ ಪ್ರಭಾವಿಗಳು ಯಾರು ಇದ್ದಾರೆ ನೋಡಿ, ಕ್ರಮ ತೆಗೆದುಕೊಳ್ಳೋಣ. ನಿನ್ನೆಯ ಘಟನೆಯಿಂದ ಇಡೀ ರಾಜ್ಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗಣಿಗಾರಿಕೆ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ, ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.