ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ: ಸಚಿವ ಕಾರಜೋಳ
ಸೈದಾಪುರ ಬಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಸಂಕೀರ್ಣ ಕಟ್ಟಡಗಳ ಉದ್ಘಾಟನೆ| ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸೈನಿಕ ಮಾದರಿ 5 ವಸತಿ ಶಾಲೆ ಮಂಜೂರು| ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೀನದಲಿತರ, ರೈತರ ಏಳ್ಗೆಗೆ ಹಲವು ಕಾರ್ಯಕ್ರಮ|
ಯಾದಗಿರಿ(ಜ.12): ಮುಂಬರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಸೈದಾಪುರ ಪಟ್ಟಣದ ರಾಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಪಂಗಡ)ಯ ಸಂಕೀರ್ಣ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಡವರು, ದೀನದಲಿತರು, ರೈತರ ಏಳ್ಗೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾನಿಯಿಂದ 30 ಸಾವಿರ ಕೋಟಿ ರು.ಗಳಿಗಿಂತ ಹೆಚ್ಚಿನ ಹಾನಿ ಉಂಟಾಗಿದೆ. ನಿರಾಶ್ರಿತರಿಗೆ ಪರಿಹಾರ ಕಲ್ಪಿಸಲಾಗಿದೆ. ಅಲ್ಲದೇ, ಶಾಸಕರ ಮನವಿ ಮೇರೆಗೆ ಯಾದಗಿರಿ ಜಿಲ್ಲೆಗೆ ಹೆಚ್ಚುವರಿ ವಸತಿ ಶಾಲೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುವ್ಯವಸ್ಥಿತ ಸೈನಿಕ ಶಾಲೆ ಮಾದರಿಯಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಶಾಲೆಗೆ 50 ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ 40 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಭರಿಸಲಿದ್ದು, 10 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಈ ರೀತಿ ಸರ್ಕಾರ ಬಡವರು, ಹೆಣ್ಣುಮಕ್ಕಳು, ಶೋಷಿತರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
2020-21 ನೇ ಸಾಲಿನ ಆಯ-ವ್ಯಯದಲ್ಲೂ ಹೆಚ್ಚಿನ ಅನುದಾನ ನೀಡುವ ಚಿಂತನೆ ಇದ್ದು, ಹಲವು ವಿನೂತನ ಯೋಜನೆಗಳನ್ನು ಕೂಡ ಜಾರಿಗೊಳಿಸಲಾಗುವುದು ಎಂದ ಅವರು, 2020-21 ನೇ ಸಾಲಿನಲ್ಲಿ ಈ ಯೋಜನೆಯಡಿ 1000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಭೂಮಿಯನ್ನು ಖರೀದಿಸಿ, ಪರಿಶಿಷ್ಟ ಜನಾಂಗದವರಿಗೆ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಅವರು ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಪಂಗಡ)ಯು 2017-18ನೇ ಸಾಲಿನಲ್ಲಿ ಆರಂಭವಾಗಿದ್ದು, ನೂತನವಾಗಿ 16.25 ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ ಶಾಲೆಯ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ವಸತಿ ಶಾಲೆಗೆ 250 ವಿದ್ಯಾರ್ಥಿಗಳ ಮಂಜೂರಾತಿ ಇರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಟ್ಯಾಬ್‌ಗಳನ್ನು ವಿತರಿಸಲಾಯಿತು. ಜಿಪಂ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ನರಸಿಂಹ ನಾಯಕ (ರಾಜುಗೌಡ), ಸೈದಾಪುರ ಗ್ರಾಪಂ ಅಧ್ಯಕ್ಷರಾದ ರಾಮಲಿಂಗಮ್ಮ ಸಿದ್ಧಪ್ಪ, ಜಿಪಂ ಸದಸ್ಯರಾದ ಶಶಿಕಲಾ ಭೀಮಣ್ಣಗೌಡ ಕ್ಯಾತನಾಳ, ತಾಪಂ ಸದಸ್ಯರಾದ ಚಂದ್ರಪ್ಪ ಸಿದ್ರಾಮಪ್ಪ ಕಾವಲಿ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಸಿಇಓ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ರಾಘವೇಂದ್ರ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಉಪಸ್ಥಿತರಿದ್ದರು.