ಸಿದ್ದರಾಮಯ್ಯ ತುರ್ತಾಗಿ ಸಿಎಂ ಆಗಬೇಕಂತಾರೆ, ಅದು ಆಗಲ್ಲ: ಡಿಸಿಎಂ ಕಾರಜೋಳ
* ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕಾರಜೋಳ
* ಸಾಮಾಜಿಕ ಅಂತರ ಪಾಲನೆ ಮಾಡಿ, ಮಾಸ್ಕ್ ಧರಿಸಿ
* ಕೊರೋನಾಗೆ ಮುಂಜಾಗ್ರತೆಯೇ ಮದ್ದು
ಬಾಗಲಕೋಟೆ(ಮೇ.30): ಮಾಜಿ ಸಿಎಂ ಸಿದ್ದರಾಮಯ್ಯಗೆ ಜಿಲ್ಲಾಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡ್ತೀನಿ ಅನ್ನೋ ಹುಚ್ಚು ಯಾಕೆ ಅಂತ ನನಗೆ ಗೊತ್ತಿಲ್ಲ. ಡಿಸಿಗಳ ಜೊತೆ ಮೀಟಿಂಗ್ ಮಾಡ್ತೀನಿ ಅಂದ್ರೆ ಅವಕಾಶ ಇಲ್ಲ. ಬೇಕಿದ್ದರೆ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಿ ತಪ್ಪೇನಿಲ್ಲ, ಒದಗಿಸಲು ಸೂಚನೆ ಕೊಡುತ್ತೇವೆ. ಸಿದ್ದು ತಮ್ಮ ಕಾಲದಲ್ಲಿ ಏನೆಲ್ಲಾ ಆದೇಶ ಮಾಡಿದ್ದಾರೆ ಅನ್ನೋದನ್ನ ಫೈಲ್ ತೆಗೆದು ಓದಲಿ ಎಂದು ಸಿದ್ದರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ಕೊಟ್ಟಿದ್ದಾರೆ.
ಡಿಸಿಗಳ ಜೊತೆ ಮೀಟಿಂಗ್‌ಗೆ ಅವಕಾಶ ನೀಡದೇ ಇರೋದಕ್ಕೆ ಸಿದ್ದರಾಮಯ್ಯ ಹಕ್ಕು ಚ್ಯುತಿ ಮಂಡನೆ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದವಧಿಯಲ್ಲಿ ಡಿಸಿಎಂ ಆಗಿದ್ದ ಪರಮೇಶ್ವರ ರಿವ್ಹಿವ್ ಮಾಡ್ತೀನಿ ಅಂದಾಗಲೇ ಸಿದ್ದರಾಮಯ್ಯ ಅವಕಾಶ ಮಾಡಿಲ್ಲ. ಯಡಿಯೂರಪ್ಪನವರು ಮತ್ತು ನಾವು ಬಾಗಲಕೋಟೆ ಡಿಸಿ ಆಫೀಸ್ ಎದುರು ಮಲಗಿದ್ದೆವು. ಆದ್ರೂ ಸ್ವಲ್ಪ ಮಾಹಿತಿ ಸಹ ಕೊಡಲಿಲ್ಲ. ಅಂದು ಪೀಸ್ ಪೇಪರ್ ಸಹ ಕೊಡಲಿಲ್ಲ. ಆ ರೀತಿಯ ನಡವಳಿಕೆ ಯಾವಾಗಲೂ ಕಾಂಗ್ರೆಸ್ ಸರ್ಕಾರದ್ದಿದೆ ಎಂದ ಸಚಿವ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಸಚಿವ ಸಿ.ಪಿ.ಯೋಗಿಶ್ವರ ಅವರನ್ನ ಸಂಪುಟದಿಂದ ಕೈಬಿಡುವ ವಿಚಾರ ಬಗ್ಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಂಪುಟದಿಂದ ಕೈ ಬಿಡುವ ಪರಮೋಚ್ಛ ಅಧಿಕಾರ ಸಿಎಂಗೆ ಇದೆ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳ ನಿರ್ಧಾರ ಅಂತಿಮವಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ: 2ನೇ ಅಲೆಯಲ್ಲೇ ಮಕ್ಕಳಲ್ಲಿ ಕೊರೋನಾ, ಆತಂಕದಲ್ಲಿ ಜನತೆ..!
ಸಿದ್ದರಾಮಯ್ಯ ತುರ್ತಾಗಿ ಸಿಎಂ ಆಗಬೇಕಂತಾರೆ
ಸಿಎಂ ಬದಲಾವಣೆ ಬಿಜೆಪಿಗೆ ಹತ್ತಿದ ದೊಡ್ಡ ರೋಗ ಎಂದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕಾರಜೋಳ, ಸಿದ್ದರಾಮಯ್ಯ ತುರ್ತಾಗಿ ಸಿಎಂ ಆಗಬೇಕಂತಾರೆ, ಆದ್ರೆ ಆಗಲ್ಲ, ಸಿದ್ದರಾಮಯ್ಯ ಅಷ್ಟೇ ಅಲ್ಲ ಕಾಂಗ್ರೆಸ್ ಈಗ ಅವಸಾನದ ಕಾಲದಲ್ಲಿದೆ. ವಿನಾಕಾರಣ ದೇಶದ ಪ್ರಧಾನಿಯನ್ನಾಗಲಿ, ರಾಜ್ಯ ಸರ್ಕಾರವನ್ನಾಗಲಿ ಆರೋಪ ಮಾಡುವುದನ್ನು ಬಿಡಿ. ಇಂತಹ ಕಠಿಣ ಸಂದರ್ಭದಲ್ಲಿ ಒಳ್ಳೆಯ ಸಲಹೆ ನೀಡುವಂತಾಗಲಿ. ವಿಪಕ್ಷ ನೀಡುವ ಉತ್ತಮ ಸಲಹೆಯನ್ನ ಅನುಸರಿಸುತ್ತೇವೆ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನ ವಿರೋಧಿಸಿದ್ರೆ ಟೀಕೆಯೇ ವಿಪಕ್ಷ ಗುರಿನಾ ಅಂತ ಅನಿಸುತ್ತೇ? ಅನುಭವಿ ರಾಜಕಾರಣಿ ಆಗಿರೋ ಸಿದ್ದರಾಮಯ್ಯ ಒಳ್ಳೆಯ ಸಲಹೆ ನೀಡಲಿ ಅಂತ ಕೇಳುತ್ತೇನೆ ಎಂದ ಕಾರಜೋಳ ಹೇಳಿದ್ದಾರೆ.
ಹಳ್ಳಿಗಳಿಗೆ ತೆರಳಿ ಜಾಗೃತಿಗೆ ಮುಂದಾದ ಡಿಸಿಎಂ
ಬಾಗಲಕೋಟೆ ಜಿಲ್ಲೆಯಲ್ಲಿ ಹಳ್ಳಿಗಳಿಗೆ ತೆರಳಿ ಜಾಗೃತಿಗೆ ಡಿಸಿಎಂ ಗೋವಿಂದ ಕಾರಜೋಳ ಮುಂದಾಗಿದ್ದಾರೆ. ಹೌದು, ಇಂದು ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಕಾರಜೋಳ ಅವರು, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಎಲ್ಲರೂ ಸ್ಪಂದಿಸಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ. ಔಷಧಿ, ಮಾತ್ರೆ ಮನೆಯಲ್ಲಿದೆ ಅಂತಾ ಅದನ್ನೇ ತಗೆದುಕೊಳ್ಳಬೇಡಿ. ಕೊರೋನಾಗೆ ಮುಂಜಾಗ್ರತೆಯೇ ಮದ್ದು ಆಗಿದೆ. ದಿನನಿತ್ಯ ಕೆಲಸ ಕಾರ್ಯಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಿ, ಮಾಸ್ಕ್ ಧರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಗಲಕೋಟೆ ಶಾಸಕ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ, ಎಸ್‌ಪಿ ಲೋಕೇಶ್ ಮತ್ತು ಸಿಇಓ ಟಿ. ಭೂಬಾಲನ್ ಉಪಸ್ಥಿತರಿದ್ದರು.