ಧಾರ​ವಾಡ(ಜೂ.11): ರಾಜ್ಯದಲ್ಲಿ ನಡೆಯುತ್ತಿರುವ ಕೆಲ ರಾಜಕೀಯ ವಿದ್ಯಮಾನಗಳನ್ನು ಸರಿದೂಗಿಸಲು ರಾಜ್ಯ ಬಿಜೆಪಿ ಉಸ್ತು​ವಾರಿ ಅರುಣ ಸಿಂಗ್‌ ಅವರು ರಾಜ್ಯಕ್ಕೆ ಬರಲಿದ್ದಾರೆ ಎಂಬುದು ಗಾಳಿಸುದ್ದಿ. ಪಕ್ಷ ಸಂಘಟನೆಗಾಗಿ ಅವರು ಬರಲಿದ್ದು, ಮೂರು ದಿನ​ವಲ್ಲ 15 ದಿನ​ಗಳ ಕಾಲ ರಾಜ್ಯ​ದಲ್ಲಿ ಉಳಿ​ದು​ಕೊಂಡು ಪಕ್ಷ ಸಂಘ​ಟನೆ ಮಾಡ​ಬ​ಹುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ರೇಣುಕಾಚಾರ್ಯ ಹಾಗೂ ಅರವಿಂದ ಬೆಲ್ಲದ ಅವರ ಹೇಳಿಕೆಯ ವಿಚಾರದ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ನನ್ನ ಅಭಿಪ್ರಾಯ ಮಾತ್ರ ಹೇಳುವೆ. ನಮ್ಮದು ರಾಷ್ಟ್ರೀಯ ಪಕ್ಷ. ಪ್ರಧಾನಿ, ಗೃಹ ಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಸೇರಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದನ್ನು ಪಾಲನೆ ಮಾಡಬೇಕಾಗುತ್ತದೆ. ರಾಷ್ಟ್ರೀಯ ನಾಯಕರ ಮುಂದೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬದಲಾವಣೆ ಪ್ರಸ್ತಾವನೆ ಇಲ್ಲ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ : BJP ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ

ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಊಹಾಪೋಹಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಹುಟ್ಟಿಕೊಂಡಿವೆ. ಇದಕ್ಕೆ ಮಾಧ್ಯಮಗಳು ಇನ್ನಷ್ಟು ಬಣ್ಣ ಹಚ್ಚುತ್ತಿದ್ದಾರೆ. ಇನ್ನುಳಿದ ಅವಧಿಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಇರಲಿದ್ದಾರೆ ಎಂದು ಕಾರ​ಜೋಳ ಸ್ಪಷ್ಟ​ಪ​ಡಿ​ಸಿ​ದ್ದಾರೆ.