ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಕೋವಿಡ್ ಟೆಸ್ಟ್: ಡಿಸಿಎಂ ಅಶ್ವತ್ಥ
* ಹಳ್ಳಿಗಳಲ್ಲಿ ಹೋಂ ಐಸೋಲೇಷನ್ ಇಲ್ಲ
* ಯಾವ ಕಾರಣಕ್ಕೂ ಕೊರೋನಾ ಪರೀಕ್ಷೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ
* ಡ್ರಗ್ ಲಾಜಿಸ್ಟಿಕ್‌ನಿಂದ ಖರೀದಿಸಿ
ಮಂಡ್ಯ(ಮೇ.21): ರಾಜ್ಯ ಸರ್ಕಾರ ಕೋವಿಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಬೇಕಾದ ಟೆಸ್ಟಿಂಗ್ ಕಿಟ್‌ಗಳನ್ನು ಸಿದ್ಧಪಡಿಸಿಕೊಂಡಿದೆ. ಯಾವ ಕಾರಣಕ್ಕೂ ಕೊರೋನಾ ಪರೀಕ್ಷೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರತಿ ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಗುರುವಾರ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಕೊರೋನಾ ನಿಯಂತ್ರಣ ಸಭೆಯಲ್ಲಿ ಮಾತನಾಡಿದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಕೊರೋನಾ ಪರೀಕ್ಷೆ ಮಾಡಿಸಬೇಕು. ದಿನದ ವರದಿಯನ್ನು ಜಿಲ್ಲಾಡಳಿತಗಳಿಗೆ ನೀಡಬೇಕು. ಅವರ ಓಡಾಟಕ್ಕೆ ಅನುಕೂಲವಾಗುವಂತೆ ಪ್ರತಿ ಪಂಚಾಯಿತಿಗೆ ಒಂದೊಂದು ವಾಹನ ಕಲ್ಪಿಸಿಕೊಡುವಂತೆ ಸೂಚಿಸಿದರು.
ಹೋಂ-ಐಸೋಲೇಷನ್ ಇಲ್ಲ: ಇನ್ನು ಮುಂದೆ ಹಳ್ಳಿಗಳಲ್ಲಿ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವಂತಿಲ್ಲ. ಅವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರದಲ್ಲಿ ದಾಖಲಿಸಬೇಕು. ಅದಕ್ಕಾಗಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸುವಂತೆ ಹೇಳಿದರು.
"
ಕೊರೋನಾ ತಡೆಗೆ ಮತ್ತೊಂದು ಮಹತ್ವದ ಕ್ರಮ: ವಿವರಿಸಿದ ಅಶ್ವತ್ಥನಾರಾಯಣ
ಡ್ರಗ್ ಲಾಜಿಸ್ಟಿಕ್‌ನಿಂದ ಖರೀದಿಸಿ:
ರಾಜ್ಯ ಡ್ರಗ್ ಲಾಜಿಸ್ಟಿಕ್‌ನಿಂದ ಸೋಂಕಿತರಿಗೆ ಅಗತ್ಯವಿರುವ ಔಷಧಗಳನ್ನು ಪೂರೈಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ ಡಿಸಿಎಂ ಅಶ್ವಥನಾರಾಯಣ ಅವರು, ಒಮ್ಮೆ ಡ್ರಗ್ ಲಾಜಿಸ್ಟಿಕ್‌ನಿಂದ ಸಕಾಲದಲ್ಲಿ ಔಷಧ ಪೂರೈಸಲು ಕ್ರಮ ವಹಿಸದಿದ್ದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ. ಒಂದು ಗಂಟೆಯೊಳಗೆ ಅದರ ಬಗ್ಗೆ ಕ್ರಮ ವಹಿಸಿ ದೊರಕಿಸಿಕೊಡುತ್ತೇವೆ. ಔಷಧಗಳನ್ನೂ ಒಂದು ವಾರಕ್ಕೆ ಅಗತ್ಯವಿರುವಷ್ಟು ದಾಸ್ತಾನು ಮಾಡಿಟ್ಟುಕೊಳ್ಳುವಂತೆ ತಿಳಿಸಿದರು.