ಬೆಂಗಳೂರು(ಫೆ.18): ಕಂಬಳ ಕ್ರೀಡೆಯಲ್ಲಿ ದಾಖಲೆ ವೇಗದಲ್ಲಿ ಓಡಿ ಭಾರತದ ಉಸೇನ್‌ ಬೋಲ್ಡ್‌ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಡಿಬಿದರೆಯ ಶ್ರೀನಿವಾಸಗೌಡ ಅವರಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ತಮ್ಮ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದ ವತಿಯಿಂದ 1 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ.

ಕಂಬಳ ಕ್ರೀಡಾಪಟು ಶ್ರೀನಿವಾಸಗೌಡ ಅವರನ್ನು ಸೋಮವಾರ ಅಭಿನಂದಿಸಿದ ಬಳಿಕ ನೆರವು ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಶ್ರೀನಿವಾಸಗೌಡ ಅವರು ತಮ್ಮ ಪ್ರತಿಭೆ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಕಂಬಳ ಬೇಕು-ಬೇಡ ಎನ್ನುವವರು ಅದಕ್ಕೆ ಅಡಚಣೆಯನ್ನುಂಟು ಮಾಡುವವರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದಿದ್ದಾರೆ.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ಅವರನ್ನು ಪ್ರೋತ್ಸಾಹಿಸುವುದರ ಜತೆಗೆ ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುವವರನ್ನು ಹುರಿದುಂಬಿಸುವ ಉದ್ದೇಶದಿಂದ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ 1 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಮಣ್ಣಿನ ನೆಲ, ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಓಡಿ ದಾಖಲೆ ಮಾಡುವುದು ಕಷ್ಟ. ಅಂತಹದ್ದರಲ್ಲಿ ಶ್ರೀನಿವಾಸಗೌಡ ಕೆಸರು ಗದ್ದೆಯಲ್ಲಿ ಓಡಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಕ್ರೀಡೆಯಲ್ಲಿ ನಮ್ಮವರು ಸಮರ್ಥರಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಅವರಲ್ಲಿರುವ ಪ್ರತಿಭೆ ಇನ್ನಷ್ಟುಅರಳಲಿ ಎಂದು ಹಾರೈಸಿದ್ದಾರೆ.

ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!

ಕರಾವಳಿಯ ನಾಗರಿಕರ ಪ್ರೋತ್ಸಾಹ, ಸಹಕಾರದಿಂದ ಆ ಭಾಗದ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ದೇಶದ ಗಮನ ಸೆಳೆದಿದೆ. ಕಂಬಳದಲ್ಲಿ ಕೋಣಗಳನ್ನು ಓಡಿಸುವ ತರಬೇತಿ ನೀಡಲೆಂದೇ ಅಕಾಡೆಮಿ ಮಾಡಿಕೊಂಡಿದ್ದಾರೆ ಎಂಬುದನ್ನು ಕೇಳಿ ಸಂತಸವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.