Asianet Suvarna News Asianet Suvarna News

ತ್ಯಾಜ್ಯ ನಿರ್ವಹಣಾ ಉದ್ಯಮದಿಂದ ಸಾಕಷ್ಟು ಉದ್ಯೋಗಾವಕಾಶ: ಅಶ್ವತ್ಥ ನಾರಾಯಣ

2025ರ ವೇಳೆಗೆ 1.10 ಲಕ್ಷ ಕೋಟಿ ರು. ಮೊತ್ತದ ವ್ಯಾಪಾರ ಸೃಷ್ಟಿ ಸಾಧ್ಯತೆ| ಭಾರತದಲ್ಲಿ ಸದ್ಯ ವಾರ್ಷಿಕ 2,770 ಲಕ್ಷ ಟನ್‌ ತ್ಯಾಜ್ಯ ಉತ್ಪತ್ತಿ, ಇದರಲ್ಲಿ ಪ್ಲ್ಯಾಸ್ಟಿಕ್‌ ತ್ಯಾಜ್ಯದ ಪ್ರಮಾಣ 15,000 ಟನ್‌ ಗಳಷ್ಟಿದ್ದು, ಇದರಲ್ಲಿ ಶೇ.40ರಷ್ಟು ಪುನರ್‌ ಸಂಸ್ಕರಣೆ ಆಗುತ್ತಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ| 

DCM Ashwath Narayan Taks Over Jobs grg
Author
Bengaluru, First Published Dec 16, 2020, 7:13 AM IST

ಬೆಂಗಳೂರು(ಡಿ.16): ತ್ಯಾಜ್ಯ ನಿರ್ವಹಣಾ ಉದ್ಯಮವು 2025ರ ವೇಳೆಗೆ ದೇಶದಲ್ಲಿ ಸುಮಾರು 1.10 ಲಕ್ಷ ಕೋಟಿ ರು.ಗಳಷ್ಟು ಮೊತ್ತದ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. 

ಸೋಷಿಯಲ್‌ ಆಲ್ಫಾ ಮತ್ತು ಎಚ್‌ ಅಂಡ್‌ ಎಂ ಫೌಂಡೇಷನ್‌ ವತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ತ್ಯಾಜ್ಯ ನಿರ್ವಹಣೆಯಲ್ಲಿ ನಾವೀನ್ಯತಾ ಪರಿಹಾರಗಳಿಗೆ ಸವಾಲು’ ಎಂಬ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚುತ್ತಿರುವ ನಗರೀಕರಣದಿಂದಾಗಿ ತ್ಯಾಜ್ಯ ನಿರ್ವಹಣೆ ಅತ್ಯಂತ ಮಹತ್ವದ್ದಾಗಲಿದ್ದು, ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಉತ್ತಮ ತ್ಯಾಜ್ಯ ನಿರ್ವಹಣೆಯ ನಮ್ಮ ನಗರಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಅವುಗಳನ್ನು ವಸತಿಗೆ ಯೋಗ್ಯವಾದ ನೆಲೆಗಳನ್ನಾಗಿ ಹಾಗೂ ಕ್ಷಮತೆಯಿಂದ ಕೂಡಿದ ಸ್ಥಳಗಳನ್ನಾಗಿ ಮಾಡಲಿದೆ ಎಂದು ವಿವರಿಸಿದರು.

ಭಾರತದಲ್ಲಿ ಸದ್ಯ ವಾರ್ಷಿಕ 2,770 ಲಕ್ಷ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಪ್ಲ್ಯಾಸ್ಟಿಕ್‌ ತ್ಯಾಜ್ಯದ ಪ್ರಮಾಣ 15,000 ಟನ್‌ ಗಳಷ್ಟಿದ್ದು, ಇದರಲ್ಲಿ ಶೇ.40ರಷ್ಟು ಪುನರ್‌ ಸಂಸ್ಕರಣೆ ಆಗುತ್ತಿಲ್ಲ. ತ್ಯಾಜ್ಯ ನಿರ್ವಹಣೆಯಲ್ಲಿ ನಾವೀನ್ಯತೆಯಿಂದ ಕೂಡಿದ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ರಾಜ್ಯ ಸರ್ಕಾರವು ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯ ನೀತಿ-2020 ಮತ್ತು ನಗರ ಘನತ್ಯಾಜ್ಯ ನಿರ್ವಹಣಾ ಕಾರ್ಯತಂತ್ರ-2020ಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಜಗತ್ತಿನ ಅತಿದೊಡ್ಡ ಬೆಂಗಳೂರು ಟೆಕ್‌ ಶೃಂಗ: ಡಿಸಿಎಂ ಅಶ್ವತ್ಥ ನಾರಾಯಣ

ತಂತ್ರಜ್ಞಾನ ಬಳಕೆ:

ಕಸವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆಗಳು, ಇಂಟರ್‌ನೆಟ್‌ ಬೆಂಬಲಿತ ಸೇವೆಗಳು, ರೋಬೋಟಿಕ್ಸ್‌ ಆನ್ವಯಿಕತೆಗಳು, ಜೈವಿಕ ತಂತ್ರಜ್ಞಾನ ಮಧ್ಯಸ್ಥಿಕೆ ನೆರವು ಯೋಜನೆಗಳು, ಸೋಲಾರ್‌ ಫಲಕಗಳಿರುವ ಕಾಂಪೋಸ್ಟ್‌ ತಯಾರಿಕಾ ಘಟಕಗಳು, ದತ್ತಾಂಶ ವಿಶ್ಲೇಷಕಗಳು ಒಳಗೊಂಡಂತೆ ತ್ಯಾಜ್ಯ ನಿರ್ವಹಣೆಯನ್ನು ಸುಸ್ಥಿರ ಮಾದರಿಗಳನ್ನಾಗಿ ಮಾಡಬಲ್ಲವು ಎಂದು ಅಭಿಪ್ರಾಯಪಟ್ಟರು.

ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವ ಐದು ನವೋದ್ಯಮಗಳನ್ನು ವಿಜೇತರೆಂದು ಆಯ್ಕೆ ಮಾಡಲಾಗುವುದು. ನಂತರ ಈ ನವೋದ್ಯಮಗಳಿಗೆ ತಮ್ಮ ತ್ಯಾಜ್ಯ ನಿರ್ವಹಣಾ ತಾಂತ್ರಿಕತೆಯನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಸೋಷಿಯಲ್‌ ಆಲ್ಫಾ ಮತ್ತು ಎಚ್‌ ಎಂ ಫೌಂಡೇಷನ್‌ ನೆರವು ನೀಡಲಿವೆ ಎಂದರು.

ಸೋಷಿಯಲ್‌ ಆಲ್ಫಾ ಕಾರ್ಯಕ್ರಮ ನಿರ್ದೇಶಕಿ ಮಧುಶ್ರೀ ನಾರಾಯಣ್‌, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್‌ ರಾಘವನ್‌, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್‌) ನಿರ್ದೇಶಕಿ ಮೀನಾ ನಾಗರಾಜ್‌, ಬಿಬಿಎಂಪಿ ಹೆಚ್ಚುವರಿ ಆಯುಕ್ತ (ಘನ ತ್ಯಾಜ್ಯ ವಿಲೇವಾರಿ) ರಣದೀಪ್‌ ಡಿ., ಕರ್ನಾಟಕ ನವೋದ್ಯಮಗಳ ದೂರದರ್ಶಿತ್ವ ತಂಡದ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌ ಪಾಲ್ಗೊಂಡಿದ್ದರು.

ತ್ಯಾಜ್ಯ ಆಮದು

ತ್ಯಾಜ್ಯ ನಿರ್ವಹಣೆಯಲ್ಲಿ ಸ್ವೀಡನ್‌ ದೇಶವು ಮಾದರಿಯಾಗಿದೆ. ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಆ ದೇಶವು ಕಸ ನಿರ್ವಹಣೆಯಿಂದ ಲಾಭ ಗಳಿಸುತ್ತಿದ್ದು, ಬೇರೆ ದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.  
 

Follow Us:
Download App:
  • android
  • ios