ಒಬ್ಬ ರೈತ 3 ಲಕ್ಷದವರೆಗೂ ಸಾಲ ಪಡೆಯಲು ಅವಕಾಶವಿದ್ದು, ಕಳೆದ ಸಾಲಿನಲ್ಲಿ 50 ಸಾವಿರ ಸಾಲ ಪಡೆದಿದ್ದರೆ ಅಂತಹ ರೈತರು ಮತ್ತೆ ಅರ್ಜಿ ಸಲ್ಲಿಸಿ 2.50ಲಕ್ಷ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಿದೆ ಎಂದು  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌.ಧರ್ಮೇಗೌಡ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಮೇ.14): ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕ್‌ ಮುಂದಾಗಿದೆ ಎಂದು ವಿಧಾನಪರಿಷತ್‌ ಉಪಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.5.5 ಬಡ್ಡಿ ದರದಲ್ಲಿ ನರ್ಬಾಡ್‌ ಬ್ಯಾಂಕಿನಿಂದ 80 ಕೋಟಿ ರು. ಸಾಲ ಪಡೆದು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಣೆ ಮಾಡಲಿದ್ದು, ಇನ್ನೇರೆಡು ದಿನಗಳಲ್ಲಿ 20 ಕೋಟಿ ರು. ಬಿಡುಗಡೆಯಾಗಲಿದೆ. ಉಳಿದಂತೆ ಹಂತ ಹಂತವಾಗಿ ಸಾಲ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಹೊಸದಾಗಿ ಅರ್ಜಿ ಸಲ್ಲಿಸಿದ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಒಬ್ಬ ರೈತ 3 ಲಕ್ಷದವರೆಗೂ ಸಾಲ ಪಡೆಯಲು ಅವಕಾಶವಿದ್ದು, ಕಳೆದ ಸಾಲಿನಲ್ಲಿ 50 ಸಾವಿರ ಸಾಲ ಪಡೆದಿದ್ದರೆ ಅಂತಹ ರೈತರು ಮತ್ತೆ ಅರ್ಜಿ ಸಲ್ಲಿಸಿ 2.50ಲಕ್ಷ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿರುವ 130 ಸಹಕಾರಿ ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು ಎಂದರು.

ಅತಿಥಿ ಉಪನ್ಯಾಸಕರಿಗೆ ವರ್ಷ ಪೂರ್ತಿ ವೇತನಕ್ಕೆ ಆಗ್ರಹ; ಸಂಸದ ರಾಘವೇಂದ್ರಗೆ ಮನವಿ

ಜಿಲ್ಲೆಯಲ್ಲಿ ಇದುವರೆಗೂ 17 ಕೋಟಿ ರು. ಸಾಲದ ಬೇಡಿಕೆ ಬಂದಿದೆ. 23 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬರುವ ಸಾಧ್ಯತೆ ಇದೆ. ಎಲ್ಲರಿಗೂ ಸಮನಾಂತರವಾಗಿ ಸಾಲ ನೀಡಲು ಉದ್ದೇಶಿಸಲಾಗಿದೆ. 70 ಕೋಟಿ ರು. ಹೊಸ ಸಾಲವಾಗಿ ನೀಡಲು ಬ್ಯಾಂಕ್‌ ಮುಂದಾಗಿದೆ ಎಂದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಜೀವನ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ 1ಲಕ್ಷ 70 ಸಾವಿರ ರು. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸಫಲವಾಯಿತು ಎಂದು ಪ್ರಶ್ನಿಸಿದರು.

ಆಟೋ ಚಾಲಕರು, ಮಡಿವಾಳರು, ಕ್ಷೌರಿಕ ಕುಟುಂಬಗಳಿಗೆ 5000 ರು. ಪರಿಹಾರಧನ ಘೋಷಣೆ ಮಾಡಿದೆ. ಆದರೆ, ಈ ವೃತ್ತಿಯನ್ನು ಮಾಡುವವರನ್ನು ಗುರುತು ಮಾಡಿಲ್ಲ. ಹಣ್ಣು, ಹೂವು, ತರಕಾರಿ ಬೆಳೆದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಬೆಳೆಗಾರರಿಗೆ ಪರಿಹಾರ ನೀಡುವಂತೆ ಸರ್ಕಾರ ಗಮನ ಸೆಳೆದರು ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಣೆ ಮಾಡಿದೆ. ನೌಕರರ ತುಟ್ಟಿಭತ್ಯೆ ಖಡಿತಕ್ಕೆ ಕೈ ಹಾಕಿರುವ ಸರ್ಕಾರದ ಕ್ರಮ ಖಂಡನೀಯ. ಆರ್‌ಟಿಇ ದಾಖಲಾತಿ ಶುರುವಾಗಿದೆ. ಸರ್ಕಾರ ಖಾಸಗಿ, ಅನುದಾನ, ಅನುದಾನ ರಹಿತ ಶಾಲೆಗಳಿಗೆ ನೀಡಬೇಕಿದ್ದ 50 ಕೋಟಿ ರು. ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೌರವ ಶಿಕ್ಷಕರಿಗೆ ಕಳೆದ ಐದು ತಿಂಗಳಿಂದ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.