Asianet Suvarna News Asianet Suvarna News

ಕೋಲಾರ : ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ

ಕೋಲಾರದಲ್ಲಿ ಶೂನ್ಯ ಬಡ್ಡಿದರದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು, ರೈತರು, ಬಡವರ ಪಾಲಿನ ಡಿಸಿಸಿ ಬ್ಯಾಂಕ್‌ ದೇವಾಲಯವಾಗಿದೆ. ಮಹಿಳಾ ಅಭಿವೃದ್ಧಿ ದೃಷ್ಟಿಯಿಂದ ಸಾಲ ವಿತರಿಸಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಶ್ಲಾಘಿಸಿದರು.

DCC Bank Distributes zero interest Loan For Women Empowerment
Author
Bengaluru, First Published Sep 4, 2019, 12:20 PM IST

ಕೋಲಾರ [ಸೆ.04]:   ಡಿಸಿಸಿ ಬ್ಯಾಂಕ್‌ ಅವಿಭಜಿತ ಜಿಲ್ಲೆಯ 2.63 ಲಕ್ಷ ಕುಟುಂಬಗಳಿಗೆ ಶೂನ್ಯಬಡ್ಡಿದರದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು, ರೈತರು, ಬಡವರ ಪಾಲಿನ ದೇವಾಲಯವಾಗಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಶ್ಲಾಘಿಸಿದರು.

ಮಂಗಳವಾರ ತಾಲೂಕಿನ ವಲ್ಲಂಬಳ್ಳಿ ಗ್ರಾಮದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯಬಡ್ಡಿ ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ವಾಣಿಜ್ಯಬ್ಯಾಂಕುಗಳು, ಲೇವಾದೇವಿದಾರರು ಬಡವರಿಗೆ ಸಾಲ ನೀಡುವ ಧೈರ್ಯ ಮಾಡುವುದಿಲ್ಲ. ಆದರೆ ಡಿಸಿಸಿ ಬ್ಯಾಂಕ್‌ ಅವರನ್ನು ಹುಡುಕಿಕೊಂಡು ಹೋಗಿ ಸಾಲ ನೀಡುತ್ತಿದೆ, ಅದರಲ್ಲೂ ಶೂನ್ಯಬಡ್ಡಿ ಸಾಲ ನೀಡುವ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 2.63 ಲಕ್ಷ ಕುಟುಂಬಗಳ ಕೈಹಿಡಿದಿದೆ ಎಂದು ತಿಳಿಸಿದರು.

ಸಾಲ ಮರುಪಾವತಿಸಿ ಬ್ಯಾಂಕ್‌ ಬೆಳೆಸಿ

ಬ್ಯಾಂಕ್‌ ಮೂಲಕ ಬಡವರು, ದಲಿತರಿಗೆ ಹೆಚ್ಚಿನ ನೆರವು ನೀಡುತ್ತಿರುವ ಬ್ಯಾಲಹಳ್ಳಿ ಗೋವಿಂದಗೌಡರು ಮತ್ತು ಶೂನ್ಯಬಡ್ಡಿ ಸಾಲ ಒದಗಿಸುವ ಧೈರ್ಯ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾರ್ಹರು, ಅವರಿಗೆ ಬಡವರ ಆಶೀರ್ವಾದ ಸದಾ ಇರುತ್ತದೆ. ರಾಜಕಾರಣ ಬಿಟ್ಟು ಆಲೋಚಿಸೋಣ, ದೀನದಲಿತರ ಪಾಲಿನ ದೇವಾಲಯವಾಗಿ ಬ್ಯಾಂಕ್‌ ಕೆಲಸ ಮಾಡುತ್ತಿದೆ, ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವ ಬ್ಯಾಂಕ್‌ ಉಳಿಸೋಣ, ಶಕ್ತಿಯುತಗೊಳಿಸಲು ಪಡೆದ ಸಾಲವನ್ನು ಪ್ರಾಮಾಣಿಕತೆಯಿಂದ ಮರುಪಾವತಿಸಿ ಬಡವರ ಬಗೆಗಿನ ನಂಬಿಕೆ ಮತ್ತಷ್ಟುಗಟ್ಟಿಗೊಳಿಸೋಣ ಎಂದು ತಾಯಂದಿರಿಗೆ ಕರೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬ್ಯಾಂಕ್‌ ಎರಡೂ ಜಿಲ್ಲೆಗಳ ಪ್ರತಿಕುಟುಂಬಕ್ಕೂ ಆರ್ಥಿಕ ನೆರವು ತಲುಪಿಸುವ ಶಕ್ತಿ ಪಡೆದುಕೊಂಡರೆ ಜನತೆ ವಾಣಿಜ್ಯ ಬ್ಯಾಂಕುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಹೆಚ್ಚು ಸಾಲ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜೀವನದಲ್ಲಿ ಬಡವರ ಸೇವೆ ಮಾಡುವ ಅಪೂರ್ವ ಅವಕಾಶ ನನಗೆ ಲಭಿಸಿದೆ, ಇದಕ್ಕೆ ಲೋಪವಿಲ್ಲದಂತೆ ಮಹಿಳಾ ಸಂಘಗಳ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಸಾಲ ನೀಡಿದ್ದೇವೆ, ತಾಯಂದಿರೂ ಸಹಾ ಸಮರ್ಪಕ ಮರುಪಾವತಿಯ ಮೂಲಕ ನನ್ನನ್ನು ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.

ದಿವಾಳಿಯಾಗಿದ್ದ ಬ್ಯಾಂಕನ್ನು ತಮ್ಮ ಸೇವಾವಧಿಯಲ್ಲಿ ಪುನಶ್ಚೇತನಗೊಳಿಸಿ ಬಡವರು, ರೈತರು, ಮಹಿಳೆಯರಿಗೆ ನೆರವಾಗುವ ಶಕ್ತಿ ತುಂಬಿದ್ದೇವೆ. ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ನೆರವಾಗುವ ಆಶಯದೊಂದಿಗೆ ಹಗಲಿರುಳು ದುಡಿಯುತ್ತಿದ್ದು, ಬ್ಯಾಂಕ್‌ ಉಳಿಸಲು ತಾಯಂದಿರುವ ಸಮರ್ಪಕ ಸಾಲ ಮರುಪಾವತಿಗೆ ಮನವಿ ಮಾಡಿ, ಬ್ಯಾಂಕ್‌ ಹಾಗೂ ತಮ್ಮ ವಿರುದ್ದ ಬರುವ ಟೀಕೆಗಳಿಗೆ ಕೆಲಸದ ಮೂಲಕ ಉತ್ತರಿಸವುದಾಗಿ ತಿಳಿಸಿದರು. ಡಿಸಿಸಿ ಬ್ಯಾಂಕ್‌ನಲ್ಲೇ ಸರ್ಕಾರದ ವಿವಿಧ ಇಲಾಖೆಗಳ ಹಣ ಠೇವಣಿ ಇಡುವಂತಾದರೆ ಮತ್ತಷ್ಟುಜನತೆಗೆ ನೆರವು ನೀಡಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರದಿಂದ ಬಡ್ಡಿ ಪಾವತಿ

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌, ತಾಯಂದಿರಿಗೆ ಶೂನ್ಯಬಡ್ಡಿ ದರದ ಸಾಲ ನೀಡುವ ಧೈರ್ಯವನ್ನು ಸಿದ್ದರಾಮಯ್ಯ ಮಾಡಿದರು. ನೀವು ಕಟ್ಟಬೇಕಾದ ಬಡ್ಡಿಯನ್ನು ಸರ್ಕಾರವೇ ತುಂಬುವಂತೆ ಮಾಡಿದರು. ಕ್ಷೀರಭಾಗ್ಯ, ಅನ್ನಭಾಗ್ಯ ಹೀಗೆ ಹಲವಾರು ಜನಪ್ರಿಯ ಕಾರ್ಯಕ್ರಮ ನೀಡಿದ ಸಿದ್ದರಾಮಯ್ಯ ಅವರ ಆಶಯಕ್ಕೆ ಕುತ್ತು ಬಾರದಂತೆ ಬಡವರು, ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ನೀಡುವ ಕಾಯಕ ಮುಂದುವರೆಸಿರುವುದಾಗಿ ನುಡಿದರು.

ವಲ್ಲಂಬಳ್ಳಿ ಚಲಪತಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸೂಪರ್‌ವೈಸರ್‌ ಅಮಿನ್‌, ಸೀಸಂದ್ರ ಗೋಪಾಲಗೌಡ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ನಂದಂಬಳ್ಳಿ ಕೋದಂಡಪ್ಪ, ಚಲಪತಿ, ಇಂದಾಲಪ್ಪ, ಚೌಡಪ್ಪ, ವೆಂಕಟೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios