Asianet Suvarna News Asianet Suvarna News

ವಿಜಯಪುರದಲ್ಲಿ ಪದೇ ಪದೆ ಭೂಕಂಪನ: ಜಿಲ್ಲಾಧಿಕಾರಿ ದಾನಮ್ಮನವರ್‌ ಹೇಳಿದ್ದಿಷ್ಟು

ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಸ್ಪಷ್ಟನೆ,ಕಪ್ಪು ಶಿಲೆಯ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವು ಹಾನಿ ಸೃಷ್ಟಿಸುವುದಿಲ್ಲ: ಡಿಸಿ

DC Vijayamahantesh Danammanavar React to Earthquake in Vijayapura grg
Author
Bengaluru, First Published Aug 24, 2022, 9:58 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಆ.24):  ವಿಜಯಪುರ ಜಿಲ್ಲೆ ಕಪ್ಪು ಶಿಲೆಯಿಂದ ಆವೃತವಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿದೆ. ಹೀಗಾಗಿ ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿ ಸೃಷ್ಟಿಸುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ್‌ ತಿಳಿಸಿದ್ದಾರೆ.

ಹಲವು ದಿನಗಳಿಂದ ಜನರನ್ನ‌ ಕಂಗೆಡಿಸಿರುವ ಸರಣಿ ಭೂಕಂಪನ

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೇಲಿಂದ ಮೇಲೆ ಕಡಿಮೆ ತೀವ್ರತೆ ಉಳ್ಳ ಭೂಕಂಪನ ಸಂಭವಿಸುತ್ತಿದೆ. ಈ ಬಗ್ಗೆ ಆಗಸ್ಟ್ 23ರಂದು ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ ಜಿಲ್ಲೆಯಲ್ಲಿಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಸುತ್ತಿರುವ ತಾಂತ್ರಿಕ ತಜ್ಞರ ಹಾಗೂ ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಕ್ರೋಡೀಕರಿಸಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. 

ವಿಜಯಪುರದಲ್ಲಿ ಪದೇ ಪದೇ ಭೂಕಂಪ: 4 ಸೆಪ್ಟೆಂಬರ್ 2021ರಿಂದ ಈವರೆಗೆ 21ಬಾರಿ ಭೂಕಂಪನ

ಕಪ್ಪು ಕಲ್ಲಿನಿಂದ ಆವೃತ್ತವಾಗಿರುವ ವಿಜಯಪುರ ಜಿಲ್ಲೆ

ಪ್ರಸ್ತುತ ಸಾಲಿನಲ್ಲಿ ಅಧಿಕೃತವಾಗಿ 7 ಬಾರಿ ಕಡಿಮೆ ತೀವ್ರತೆಯುಳ್ಳ ಭೂಕಂಪನದ ಅವಲೋಕನ ಕೈಗೊಳ್ಳಲಾಗಿ, ಜಿಲ್ಲೆಯು ಭೌಗೋಳಿಕವಾಗಿ ದಖನ್ ಪ್ರಸ್ಥಭೂಮಿಯಲ್ಲಿದ್ದು, ಈ ಪ್ರದೇಶವು ಅಂದಾಜು ಶೇ.80 ರಷ್ಟು ಬೆಸಾಲ್ಟ್ (ಕಪ್ಪು ಶಿಲೆ)ಶಿಲೆಯಿಂದ ಆವೃತವಾಗಿದ್ದು, ಭಾರತದ ಭೂಕಂಪನ ವಲಯಗಳ ನಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಭೂಸ್ಥರವು ಝೋನ್-2 ಮತ್ತು ಝೋನ್-3 ಪ್ರದೇಶಗಳ ವ್ಯಾಪ್ತಿಯಲ್ಲಿ ಗುರುತಿಸಲಾಗಿರುತ್ತದೆ. ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿರುತ್ತದೆ. 

ಜನರು ಭಯ ಪಡುವ ಅವಶ್ಯಕತೆ ಇಲ್ಲ: ಜಿಲ್ಲಾಧಿಕಾರಿ

ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿಯನ್ನು ಸೃಷ್ಟಿಸುವುದಿಲ್ಲ. ಹೀಗಾಗಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ಭೂಕಂಪನಸಾಧ್ಯತೆ ಇರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ. ಇದಲ್ಲದೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ತಜ್ಞರ ತಂಡವನ್ನು ಜಿಲ್ಲೆಗೆ ನಿಯೋಜಿಸಲು ಸರ್ಕಾರಕ್ಕೆ ಸಹ ಪತ್ರ ಬರೆಯಲಾಗಿದ್ದು ಶೀಘ್ರವೆ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ವಿಸ್ತçತವಾಗಿ ಪರಿಶೀಲನೆ ಕೈಗೊಳ್ಳಲಿದೆ.

ಶಾಲಾ-ಕಾಲೇಜುಗಳಲ್ಲಿ ಜಾಗೃತಿಗೆ ನಿರ್ಧಾರ

ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಭೂಕಂಪನ ಕುರಿತು ಅರಿವನ್ನು ಮೂಡಿಸಲು ವಿಪತ್ತು ನಿರ್ವಹಣಾ ಸಭೆಯಲ್ಲಿ ಸೂಚಿಸಿದ್ದು ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮ ಅನುಸರಿಸಿ: ಆದಾಗ್ಯೂ ಭೂಕಂಪನ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೂಚನೆಗಳಂತೆ ಕೆಲವು ಪ್ರಮುಖ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

ಮನೆಗಳಲ್ಲಿ ಏನೆಲ್ಲಾ ಮುನ್ನಚ್ಚರಿಕೆ ತೆಗೆದುಕೊಳ್ಳಬೇಕು?

ಮನೆಯ ಕಪಾಟುಗಳನ್ನು ಬಲಪಡಿಸುವುದು ಹಾಗೂ ಎತ್ತರದ ಪಿಠೋಪಕರಣಗಳು ಇದ್ದಲ್ಲಿ ಗೋಡೆಗೆ ಅಲುಗಾಡದಂತೆ ಸ್ಥಿರಪಡಿಸಬೇಕು. ಮನೆಯಲ್ಲಿ ಮತ್ತು ಸಮೀಪದಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ಮತ್ತು ಅವುಗಳ ಮಾರ್ಗಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಕಟ್ಟಡದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಎಂಜಿನೀಯರ್‌ಗಳಿಂದ ಸಲಹೆ ಪಡೆದು ಮರು ರೂಪಿಸಿಕೊಳ್ಳುವುದು. ಗಾಜಿನ ಕಿಟಕಿಯಿಂದ ದೂರವಿರಬೇಕು., ನಿಮ್ಮನ್ನು ಸುರಕ್ಷಿಸಿಕೊಳ್ಳಲು ಭಾರವಾದ ವಸ್ತುಗಳಿಂದ ದೂರವಿರಬೇಕು. ಕುರ್ಚಿ, ಟೇಬಲ್, ಮಂಚದ ಕೆಳಗಡೆ ಅವಿತುಕೊಳ್ಳಬೇಕು. ಗ್ಯಾಸ್ ಸ್ಟೋವ್‌ಗಳನ್ನು ಮತ್ತು ವಿದ್ಯುತ್ ದೀಪಗಳನ್ನು ಆರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನ

ತುರ್ತು ಸಹಾಯವಾಣಿ ಸಂಪರ್ಕಿಸಿ

ಭೂಕಂಪನದಂತಹ ತುರ್ತು ಸಂದರ್ಭಗಳಲ್ಲಿ ತುರ್ತು ಸಮಯದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1077. ಟಾಲ್ ಫ್ರೀ ಸಂಖ್ಯೆ 08352-221261., ಪೊಲೀಸ್ ಸಹಾಯವಾಣಿ ಸಂಖ್ಯೆ: 100 (ಟಾಲ್ ಫ್ರೀ) 112 (ಟಾಲ್ ಫ್ರೀ) 08352-250844 ಅಥವಾ ಆರೋಗ್ಯ ಸಹಾಯವಾಣಿ ಸಂಖ್ಯೆ : 104 ( ಟಾಲ್ ಫ್ರೀ) ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವದಂತಿಗೆ ಕಿವಿಗೊಡಬೇಡಿ

ಭೂಂಕಪನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದವಾಗಿದೆ. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬಾರದು. ಮತ್ತು ಆತಂಕಕ್ಕೆ ಒಳಗಾಗಬಾರದು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
 

Follow Us:
Download App:
  • android
  • ios