8 ಸಾವಿರ ಕೋಟಿ ಕೊಟ್ಟರೂ ಕೃತಜ್ಞರಾಗಲಿಲ್ಲ : ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಸರ
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ .8000 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಶಾಸಕ ಡಿ. ಸಿ. ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.
ಮದ್ದೂರು (ಅ.17): ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ .8000 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಶಾಸಕ ಡಿ. ಸಿ. ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೆಸ್ತೂರು ಜಿ.ಪಂ ಕ್ಷೇತ್ರ ವ್ಯಾಪ್ತಿಯ ಹೆಮ್ಮನ ಹಳ್ಳಿ, ಯರಗನಹಳ್ಳಿ, ಹನುಮಂತ ಪುರ, ಚಿನ್ನನದೊಡ್ಡಿ, ಮಾರದೇವನ ಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿ, ಸಂಸತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ ಕುಮಾರ ಸ್ವಾಮಿ ಅವರನ್ನು ಸೋಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು (HD Devegowda) ಹಾಗೂ ಮಾಜಿ ಸಿಎಂ ಕುಮಾರ ಸ್ವಾಮಿ ಮಂಡ್ಯ (Mandya) ಜಿಲ್ಲೆಯನ್ನು ಎಂದೂ ಕಡೆಗಣಿಸಿಲ್ಲ. ಅಧಿಕಾರಕ್ಕೆ ಬಂದಾಗಲೆಲ್ಲ ಜಿಲ್ಲೆಯ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ನೀಡುತ್ತಾ ಬಂದಿದ್ದಾರೆ. ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುವುದರಲ್ಲಿ ಜೆಡಿಎಸ್ ಕೊಡುಗೆ ಅನನ್ಯವಾಗಿದೆ. ಇದನ್ನು ಮತದಾರರು ಅರ್ಥೈಸಿಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಪ್ರತಿ ಸ್ಪರ್ಧಿಗಳಿಂದ ಸೋಲಾಗಲಿಲ್ಲ. ಜೆ ಡಿ ಎಸ್‌ನಲ್ಲಿರುವ ಸ್ಥಳೀಯ ನಾಯಕರುಗಳೇ ಹಣದ ಆಸೆಗೆ ಬಲಿಯಾಗಿ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಸ್ಥಳೀಯ ನಾಯಕರ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದರು.
ರೈತರ ಸಮಸ್ಯೆಗೆ ಸ್ಪಂದಿಸುವುದು ಜೆ ಡಿ ಎಸ್ ಪಕ್ಷ ಮಾತ್ರ. ಕುಮಾರಸ್ವಾಮಿ ನೀಡಿದ ಸಾವಿರಾರು ಕೋಟಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಿಕೊಳ್ಳುವ ಯೋಗ್ಯತೆ ಜಿಲ್ಲೆಯ ಜನತೆಗೆ ಇಲ್ಲವಾಯಿತು ಎಂದರು.
ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 450 ಕ್ಕೂ ಹೆಚ್ಚು ಜೆಡಿಎಸ್ ಮತದಾರರು ಇದ್ದರೂ ಸಹ ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಮಾಡುವವರನ್ನು, ಗೆಲ್ಲಿಸುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.
ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯಕ್ಕೆ ಬರುತ್ತಿರುವ ಕೆಲ ನಾಯಕರುಗಳು ಶಿಕ್ಷಣವಂತರಾಗಿ ಬಾಳಿ ಬದುಕಬೇಕಾದ ಯುವಕರನ್ನು ಹೆಂಡ, ಮಾಂಸದ ಕ್ಷಣಿಕ ಸುಖದ ಆಸೆಗಾಗಿ ಬಲಿ ಕೊಡುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರವಹಿಸದಿದ್ದಲ್ಲಿ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಮದ್ದೂರು ಕ್ಷೇತ್ರದ ಜನರು ತಮಗೆ ಅಭಿವೃದ್ಧಿ ಪರ ಚಿಂತನೆ ನಡೆಸುವ ಜನಪ್ರತಿನಿಧಿ ಬೇಕೋ ಅಥವಾ ಲೂಟಿಕೊರರು ಬೇಕೋ ಎಂಬುದನ್ನು ತೀರ್ಮಾನ ಕೈಗೊಳ್ಳಬೇಕು. ಚುನಾವಣೆ ಸನ್ನಿಹಿತವಾಗುವ ಕಾಲಕ್ಕೆ ಮತ್ತೊಮ್ಮೆ ಕ್ಷೇತ್ರ ಪ್ರವಾಸ ನಡೆಸುತ್ತೇನೆ, ಆಗ ನಿಮ್ಮ ತೀರ್ಮಾನವನ್ನು ತಿಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ವೇಳೆ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಗ್ರಾಪಂ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷರಾದ ನಾಗೇಶ್, ಉಮೇಶ್, ಮಧು, ಶ್ಯಾಂ ಪ್ರಸಾದ್ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ರಾಮಕೃಷ್ಣಯ್ಯ, ಚೆನ್ನಯ್ಯ, ಚಂದ್ರು, ಉಪ ತಹಸೀಲ್ದಾರ್ ರಾಘವೇಂದ್ರ, ಪಿಡಿಓ ಲೀಲಾವತಿ ಮತ್ತಿತರರು ಇದ್ದರು.
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿಯಿಂದ ಅನುದಾನ
ಸಂಸತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ ಕುಮಾರ ಸ್ವಾಮಿ ಅವರನ್ನು ಸೋಲಿಸಿದರು ಎಂದು ಅಸಮಾಧಾನ