ಕಲಬುರಗಿ(ಮೇ.01):  ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೇ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ನಿಷೇಧಾಜ್ಞೆಯನ್ನು ಮೇ 7 ರವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಮೆ 3 ರ ಲಾಕ್‍ಡೌನ್ ಮುಕ್ತಾಯದ ನಂತರವೂ ಕಲಬುರಗಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಯುವ ಸ್ಪಷ್ಟ ಸಂದೇಶ ಸಾರ್ವಜನಿಕರಿಗೆ ನೀಡಿದಂತಾಗಿದೆ.
ಏಕೆಂದರೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳ, ಸಾವನ್ನಪ್ಪಿರುವವ ಸಂಖ್ಯೆಯಲ್ಲಿಯೂ ಅಸಹಜ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ಜಿಲ್ಲೆ ರೆಡ್‍ಝೋನ್‍ನಲ್ಲಿ ವರ್ಗೀಕರಣಗೊಂಡಿದ್ದರಿಂದ ಲಾಕ್‍ಡೌನ್, ನಿರ್ಬಂಧ ಇನ್ನಸ್ಟು ಹೆಚ್ಚುಕಾಲ ಮುಂದುವರಿಯುವಂತಾಗಿದೆ.

ಕಲಬುರಗಿ: ಕೊರೋನಾ ಸೋಂಕಿನಿಂದ ವೈದ್ಯೆ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಕಲಬುರಗಿ ಜಿಲ್ಲೆಯಾದ್ಯಂತ ಮಾ. 19 ರಿಂದ ಏ. 30 ರ ವರೆಗೆ ಒಟ್ಟು 43 ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಪರಿಸ್ಥಿತಿಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿಗಳು ಮೇ 7ರ ವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿದ್ದಾರೆ.

ನಿಷೇಧಾಜ್ಞೆಯ ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಚಲಿಸುವುದು, ಅನಾವಶ್ಯಕವಾಗಿ ಹಾಗೂ ಕಾರಣರಹಿತವಾಗಿ ಸಂಚರಿಸುವಂತಿಲ್ಲ. ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ. ಜನ ನಿಯಮಗಳನ್ನು ಕಟ್ಟುನಿಟ್ಟು ಪಾಲಿಸಿ ಸಹಕರಿಸುವಂತೆ ಡಿಸಿ ಶರತ್ ಬಿ ಕೋರಿದ್ದಾರೆ.