Asianet Suvarna News Asianet Suvarna News

ಗಡಿ ವಿವಾದ: ಮರಾಠಿ ಮುಖಂಡರಿಗೆ ಬಿಸಿ ಮುಟ್ಟಿಸಿದ ಬೆಳಗಾವಿ ಜಿಲ್ಲಾಡಳಿತ

ಗಡಿಯಲ್ಲಿ ಶಾಂತಿ ಕದಡಿದ್ರೆ ಸಹಿಸಲ್ಲ| ಮಹಾ ಸಾಹಿತಿಗಳನ್ನು ಕರೆಸದಂತೆ ಕಟ್ಟುನಿಟ್ಟಿನ ಸೂಚನೆ| ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ|

DC S B Bommanahalli Met With MES Leaders in Belagavi
Author
Bengaluru, First Published Jan 15, 2020, 8:21 AM IST
  • Facebook
  • Twitter
  • Whatsapp

ಬೆಳಗಾವಿ(ಜ.15): ಜಿಲ್ಲೆ ಹಾಗೂ ನಗರದಲ್ಲಿ ಮರಾಠಿಗರು ಆಯೋಜಿಸುತ್ತಿರುವ ಮರಾಠಿ ಸಮ್ಮೇಳನ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ರಾಜಕೀಯ ಮುಖಂಡರು, ನಾಯಕರು ಹಾಗೂ ಸಾಹಿತಿಗಳನ್ನು ಆಹ್ವಾನಿಸಬೇಡಿ. ಒಂದು ವೇಳೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಕೈಕಟ್ಟಿಕುಳಿತುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಂಇಎಸ್‌ ಮುಖಂಡರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಸೀಮಾ ಲಾಟ್ಕರ್‌ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಗಡಿ ಭಾಗದಲ್ಲಿ ಸಮ್ಮೇಳನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಗಡಿ ವಿವಾದದ ಮಾತುಗಳನ್ನಾಡಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಧಕ್ಕೆ ತರುತ್ತಿರುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಹೆಳುವ ಮೂಲಕ ಝಾಪಾಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಗಡಿ ವಿಷಯ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಗಡಿ ಹಾಗೂ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ನಿಮ್ಮ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ತಿಳಿಹೇಳಬೇಕು. ಅಲ್ಲದೇ ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮ್ಮೇಳನ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ವಿವಾದ ಸೃಷ್ಟಿಸುವ ಮೂಲಕ ಎರಡು ಭಾಷಿಕರ ಮಧ್ಯ ಶಾಂತಿ ಕದಡುವ ಕಾರ್ಯ ಸರಿಯಲ್ಲ. ಆದ್ದರಿಂದ ಜಿಲ್ಲೆಯಲ್ಲಿ ನಡೆಯುವ ಮರಾಠಿ ಕಾರ್ಯಗಳಿಗೆ ಕರ್ನಾಟಕದಲ್ಲಿರುವ ಸಾಹಿತಿ ಹಾಗೂ ಮುಖಂಡರನ್ನು ಆಹ್ವಾನಿಸಿ. ಆದರೆ, ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಕ್ರಮಕೈಗೊಳ್ಳಬೇಕು. ಇದನ್ನು ಬಿಟ್ಟು ನೆರೆಯ ಮಹಾರಾಷ್ಟ್ರದ ರಾಜಕೀಯರ ನಾಯಕರು, ಮುಖಂಡರು ಹಾಗೂ ಸಾಹಿತಿಗಳನ್ನು ಆಹ್ವಾನಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಧಿಕಾರಿಗಳ ನೇರ ಮಾತುಗಳಿಂದ ಕಂಗೆಟ್ಟಎಂಇಎಸ್‌ ಮುಖಂಡರು, ಕಳೆದ ಹಲವು ದಶಕಗಳಿಂದ ಬೆಳಗಾವಿ ತಾಲೂಕಿನಲ್ಲಿ ಮರಾಠಿ ಸಮ್ಮೇಳಗಳನ್ನು ಆಯೋಜಿಸುತ್ತಾ ಬರಲಾಗಿದೆ. ಅಲ್ಲದೇ ಜಿಲ್ಲಾಡಳಿತಕ್ಕೆ ಸಹಕಾರವನ್ನು ನೀಡುತ್ತಾ ಬರಲಾಗಿದೆ. ಆದರೆ ಏಕಾಏಕಿ ನಮ್ಮ ನಾಕಯರನ್ನು ಹಾಗೂ ಸಾಹಿತಿಗಳನ್ನು ಆಹ್ವಾನಿಸಬೇಡಿ ಎಂದರೆ ಹೇಗೆ? ಎಂದು ತಮ್ಮ ಹಳಸಲು ಹಾಗೂ ಮೊಂಡುವಾದವನ್ನು ಮುಂದುವರಿಸಿದ್ದಾರೆ.

ನಗರ ಹಾಗೂ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಹಾಗೂ ಶಾಂತಿ ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಮುಖಂಡರು ತಿಳಿಸಿದ್ದಾರೆ.

ಮಾಧ್ಯಮದವರನ್ನು ಹೊರಗಿಟ್ಟು ಸಭೆ

ಗಡಿ ವಿಷಯವಾಗಿ ಉದ್ಭವವಾಗಿರುವ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಂಇಎಸ್‌ ಮುಖಂಡರೊಂದಿಗೆ ಬೆಳಗಾವಿ ಜಿಲ್ಲಾಡಳಿತ ಸಭೆ ನಡೆಸಿತು. ಈ ವೇಳೆ ಮಾಧ್ಯಮವರನ್ನು ಸಭೆಯ ಕೊಠಡಿಯೊಳಗೆ ಬಿಡದೇ ಕೇವಲ ಎಂಇಎಸ್‌ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಅಧಿಕಾರಿಗಳು ಸಭೆಯ ನಂತರ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆ ಕೆಲವು ಕನ್ನಡಪರ ಸಂಘಟನೆ ಕಾರ್ಯಕರ್ತರು ಮಾಧ್ಯಮದವರನ್ನು ಸಭೆಯಿಂದ ಹೊರಗಿಟ್ಟು ಅಧಿಕಾರಿಗಳು ಸಭೆ ನಡೆಸುತ್ತಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios