ಕಂಪ್ಲಿ ಪ್ರಕರಣ: ಕೊರೋನಾ ಸೋಂಕಿತೆ ಜತೆ ಸಂಪರ್ಕದಲ್ಲಿದ್ದ ಮಹಿಳೆ ಪತ್ತೆ..!
ಹುಲಿಗೆಮ್ಮ ಹುಡುಕಾಟ ನಡೆಸಲು ಹರಸಾಹಸ| ಒಎಪಿ ಸ್ಕೀಮ್ ಮೂಲಕ ಮಹಿಳೆಯ ಪತ್ತೆ|ಕಂಪ್ಲಿ ಪ್ರಕರದಿಂದ ಕೊಪ್ಪಳ ಜಿಲ್ಲಾದ್ಯಂತ ಎದೆ ಬಡಿತ ಹೆಚ್ಚಳ|ಪ್ರಾಥಮಿಕ ಮತ್ತು ಸೆಕಂಡರಿ ಕಾಂಟೆಕ್ಟ್‌ಗೆ ಬಂದವರೆಲ್ಲರನ್ನೂ ಕ್ವಾರಂಟೈನ್ |
ಕೊಪ್ಪಳ(ಮೇ.14): ಕೊರೋನಾ ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಯಾಣ ಮಾಡಿದ ಮಹಿಳೆ ವಿಳಾಸ ಪತ್ತೆಯಾಗಿದ್ದು, ಆಕೆಯನ್ನು ಕ್ವಾರಂಟೈನ್ ಮಾಡಲಾಗಿದೆ. ಕಂಪ್ಲಿ ಪ್ರಕರಣದಲ್ಲಿ ಬೆಂಗಳೂರಿನಿಂದ ಗಂಗಾವತಿಗೆ ಬಂದಿದ್ದ ಹುಲಿಗೆಮ್ಮ ವಿಳಾಸವೇ ಪತ್ತೆಯಾಗಿರಲಿಲ್ಲ. ಆದರೆ, ಒಎಪಿ ಯೋಜನೆಯಲ್ಲಿ ಹುಲಿಗೆಮ್ಮ ಎನ್ನುವವರೆಲ್ಲರ ವಿಳಾಸ ಜಾಲಾಡಿ, ಈಕೆಯನ್ನು ಪತ್ತೆ ಮಾಡಲಾಗಿದೆ.
ಆಗಿದ್ದೇನು?
ಕಂಪ್ಲಿಯ ಕೊರೋನಾ ಪಾಸಿಟಿವ್ ವ್ಯಕ್ತಿ ಬೆಂಗಳೂರಿನಿಂದ ಗಂಗಾವತಿಗೆ ಬಸ್ಸಿನಲ್ಲಿ ಬಂದಿದ್ದ. ಈತ ಪ್ರಯಾಣಿದ ಬಸ್ಸಿನಲ್ಲಿ ಚಾಲಕ ಸೇರಿದಂತೆ 27 ಜನರಿದ್ದರು. 26 ಜನ ಪತ್ತೆಯಾಗಿದ್ದರೂ ಇದರಲ್ಲಿ ಹುಲಿಗೆಮ್ಮ ಪತ್ತೆಯಾಗಿರಲಿಲ್ಲ.
ಈಕೆ ಪ್ರಯಾಣ ಬೆಳೆಸುವಾಗ ನೀಡಿದ ಮೊಬೈಲ್ ನಂಬರ್ ಮತ್ತು ಪಾಸಿಟಿವ್ ವ್ಯಕ್ತಿ ನೀಡಿದ ಮೊಬೈಲ್ ನಂಬರು ಎರಡು ಒಂದೇ ಆಗಿತ್ತು. ಪ್ರಯಾಣ ಪ್ರಾರಂಭಕ್ಕೂ ಮುನ್ನ ಮೊಬೈಲ್ ನಂಬರ್ ಕೇಳಿದ್ದಾರೆ. ಈಕೆಯ ಬಳಿ ಮೊಬೈಲ್ ನಂಬರ್ ಇರಲಿಲ್ಲ. ಹೀಗಾಗಿ, ಪಕ್ಕದ ವ್ಯಕ್ತಿಯ ಮೊಬೈಲ್ ನಂಬರ್ ನೀಡಿದ್ದ. ಈಗ ಆತನೇ ಪಾಸಿಟಿವ್ ವ್ಯಕ್ತಿಯಾಗಿದ್ದಾರೆ. ಹೀಗಾಗಿ, ಹುಲಿಗೆಮ್ಮ ಹುಡುಕಾಟಕ್ಕೆ ಜಿಲ್ಲಾಡಳಿತ ಭಾರಿ ಪ್ರಯತ್ನ ನಡೆಸಿ ಪತ್ತೆ ಮಾಡಿದೆ.
ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ
ಹುಲಿಗೆಮ್ಮ ಹೆಸರಿನ ಅನೇಕರು ಇರುವುದರಿಂದ ದೊಡ್ಡ ತಲೆನೋವಾಗಿತ್ತು. ಕೊನೆಗೆ ಒಎಪಿ (ಒಲ್ಡ್ ಏಜ್ ಪೆನ್ಶನ್) ಪಡೆಯುತ್ತಿರುವವರ ಯಾದಿಯಲ್ಲಿ ಹುಲಿಗೆಮ್ಮ ಅವರ ಹೆಸರು ಇರುವ ವಿಳಾಸ ಪತ್ತೆ ಮಾಡಿದರು. ಆಗ ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಯಾಣ ಬೆಳಸಿದ ಈಕೆಯನ್ನು ಪತ್ತೆ ಮಾಡಿ ಈಗ ಕ್ವಾರಂಟೈನ್ ಮಾಡಲಾಗಿದೆ.
36 ಜನರ ಕ್ವಾರಂಟೈನ್
ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಪ್ರಾಥಮಿಕ ಸಂಪರ್ಕ ಇರುವ ಸುಮಾರು 36 ಜನರನ್ನು ಗುರುತಿಸಿ, ಕ್ವಾರಂಟೈನ್ ಮಾಡಲಾಗಿದೆ. ಇವರ ಸ್ವಾಬ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಇದರಿಂದ ಈಗ ಗಂಗಾವತಿಯಲ್ಲಿ ಭಾರಿ ಆತಂಕ ಎದುರಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಅನೇಕರಿದ್ದಾರೆ.
94 ಸೆಕಂಡರಿ ಕಾಂಟ್ಯಾಕ್ಟ್:
ಇದೇ ಪ್ರಕರಣದಲ್ಲಿ ಸೆಕೆಂಡರಿ ಕಾಂಟೆಕ್ಟ್ ಬಂದವರನ್ನು ಪತ್ತೆ ಮಾಡಲಾಗಿದ್ದು, 94 ಜನರಾಗಿದ್ದಾರೆ. ಇವರನ್ನು ನಿಯಮಾನುಸಾರ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಈಗ 36 ಜನರ ಸ್ವಾಬ್ ವರದಿ ಪಾಸಿಟಿವ್ ಬಂದರೆ ಇವರೆಲ್ಲರೂ ಪ್ರಾಥಮಿಕ ಸಂಪರ್ಕದವರಾಗುತ್ತಾರೆ. ಅಥವಾ ನೆಗಟಿವ್ ಬಂದರೇ ಇಡೀ ಪ್ರಕರ ನಿರಾಳತೆಯನ್ನು ನೀಡುತ್ತದೆ.
ಪ್ರಾಥಮಿಕ ಮತ್ತು ಸೆಕಂಡರಿ ಕಾಂಟೆಕ್ಟ್‌ಗೆ ಬಂದವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸ್ವಾಬ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕೊಪ್ಪಳ ಡಿಸಿ ಪಿ. ಸುನೀಲ್‌ಕುಮಾರ ಅವರು ಹೇಳಿದ್ದಾರೆ.