ಧಾರವಾಡ(ಡಿ.10): ಗ್ರಾಮ ಪಂಚಾಯತಿ ಚುನಾವಣೆ ಪಕ್ಷ ರಹಿತ ಚುನಾವಣೆ. ಕ್ಷೇತ್ರದ ವ್ಯಾಪ್ತಿ ಚಿಕ್ಕದಿರುವುದರಿಂದ, ಅಭ್ಯರ್ಥಿಗಳ ಪ್ರಚಾರವು ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಕಡಿಮೆ (ಗರಿಷ್ಟ-5 ಜನ) ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದು. ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಫೇಸ್‌ಮಾಸ್ಕ್‌ ಧರಿಸಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆದಷ್ಟುವಿವಿಧ ಮಾಧ್ಯಮಗಳಲ್ಲಿ ಪ್ರಚಾರ ಮಾಡಬಹುದು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಕಡ್ಡಾಯವಾಗಿ ಫೇಸ್‌ಮಾಸ್ಕ್‌, ಹ್ಯಾಂಡ್‌ಗ್ಲೌಸ್‌ ಧರಿಸಿ ಹಂಚಬೇಕು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಉಪಯೋಗಿಸಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ, ಪಾಸಿಟಿವ್‌ ಇರುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ. ಸಭೆ ಅಥವಾ ಸಮಾರಂಭವನ್ನು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ಅಭ್ಯರ್ಥಿಗಳು ನಡೆಸಬಹುದು.

ಚುನಾವಣಾ ಪ್ರಚಾರದ ವೇಳೆ ಎಲ್ಲಾ ಅಭ್ಯರ್ಥಿಗಳು ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಸದಾಚಾರ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯವಾಗಿ ಪಾಲಿಸಬೇಕು. ಪ್ರಚಾರದ ವೇಳೆ ಮತೀಯ ಮತ್ತು ಭಾಷೆಯ ವಿಷಯದಲ್ಲಿ ವೈಮನಸ್ಸು ಮೂಡಿಸುವ, ದ್ವೇಷ ಹಬ್ಬಿಸುವ ಅಥವಾ ಉದ್ವೇಗಕ್ಕೆ ಕಾರಣವಾಗುವ ಅಂಶಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬಾರದು. ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಸೀದಿ, ಚರ್ಚ್‌ ಅಥವಾ ಇನ್ನಿತರೆ ಯಾವುದೇ ಪೂಜಾ, ಪ್ರಾರ್ಥನಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು.

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ವಿನಯ್‌ ಜಾಮೀನು ಅರ್ಜಿ, 14ಕ್ಕೆ ತೀರ್ಪು

ಈ ಅಧಿನಿಯಮದ ಅಡಿಯಲ್ಲಿ ಚುನಾವಣೆಯ ಸಂಬಂಧದಲ್ಲಿ ಯಾವುದೇ ವ್ಯಕ್ತಿಯು ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಭಾರತದ ನಾಗರಿಕರ ವಿಭಿನ್ನ ವರ್ಗಗಳ ನಡುವೆ ವೈರತ್ವದ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸಿದರೆ ಅಥವಾ ಉತ್ತೇಜಿಸಲು ಪ್ರಯತ್ನಿಸಿದರೆ ಅಪರಾಧ ಸಾಬೀತಾದರೆ ಮೂರು ವರ್ಷ ಜೈಲು ಶಿಕ್ಷೆ ಇರುತ್ತದೆ.

ಡಿ. 22 ರಿಂದ 27 ರವರೆಗೆ ಸಂತೆ ನಿಷೇಧ

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಾಗೂ ಎರಡನೇ ಹಂತದ ಮತದಾನ ಹಾಗೂ ಮತದಾನ ಪೂರ್ವ ದಿನಗಳಂದು ಡಿಸೆಂಬರ್‌ 22 ರಿಂದ 27 ರವರೆಗೆ ನಡೆಯುವ ವಿವಿಧ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ. ಅಳ್ನಾವರ ತಾಲೂಕಿನ ಹೊನ್ನಾಪುರ, ಕಲಘಟಗಿ ತಾಲೂಕಿನ ಗಂಭ್ಯಾಪೂರ ಹಾಗೂ ಶೀಗಿಗಟ್ಟಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಹಾಗೂ ಡಿ.27 ರಂದು ಹುಬ್ಬಳ್ಳಿ ತಾಲೂಕಿನ ವರೂರು, ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಹಾಗೂ ನಲವಡಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ಜರುಗಿಸುವ ಸಾಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.