Asianet Suvarna News Asianet Suvarna News

ಇಂದು ರಾತ್ರಿಯಿಂದ ಗದಗ ಜಿಲ್ಲೆ ಲಾಕ್‌ಡೌನ್‌!

ಜು. 17ರ ರಾತ್ರಿ 8ರಿಂದ ಜು. 27ರ ವರೆಗೆ ನಿಷೇಧಾಜ್ಞೆ ಹೊರಡಿಸಿದ ಜಿಲ್ಲಾಧಿಕಾರಿ ಸುಂದರೇಶ ಬಾಬು| ಸಾರ್ವಜನಿಕರು ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ|

DC M Sundaresh Babu Talks Over Gadag District Lockdown
Author
Bengaluru, First Published Jul 17, 2020, 2:52 PM IST

ಗದಗ(ಜು.17): ಜಿಲ್ಲೆಯಾದ್ಯಂತ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜು. 17ರ ರಾತ್ರಿ 8 ಗಂಟೆಯಿಂದ ಜು. 27ರ ಬೆಳಗ್ಗೆ 5 ಗಂಟೆಯ ವರೆಗೆ ಕೆಲವೊಂದು ವಿನಾಯಿತಿ ನೀಡಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.

ಪ್ರತಿಬಂಧಕ ಚಟುವಟಿಕೆ:

ಜಿಲ್ಲೆಯಾದ್ಯಂತ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಾತ್ರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ ಮತ್ತು ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಅನುಮತಿಸಲಾಗಿದೆ. 65 ವರ್ಷದ ಮೇಲ್ಪಟ್ಟಹಿರಿಯ ನಾಗರಿಕರನ್ನು, 10 ವರ್ಷದೊಳಗಿನ ಮಕ್ಕಳನ್ನು, ಯಾವುದೇ ರೋಗವನ್ನು ಹೊಂದಿರುವ ರೋಗಗ್ರಸ್ತ ವ್ಯಕ್ತಿಗಳನ್ನು ಹಾಗೂ ಗರ್ಭಿಣಿಯರನ್ನು ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣಗಳಲ್ಲದ ಹೊರತು ಕಡ್ಡಾಯವಾಗಿ ಅವರ ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಯಾವುದೇ ಬೃಹತ್‌ ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಸಂತೆ, ಜಾತ್ರೆ, ಧಾರ್ಮಿಕ, ಸಾಮಾಜಿಕ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿರುತ್ತದೆ.

ನಿಯಂತ್ರಣಕ್ಕೆ ಬಾರದ ಕೊರೋನಾ: ಗದಗ ಜಿಲ್ಲೆಗೂ ಬೇಕು ಲಾಕ್‌ಡೌನ್‌

ಈ ಆದೇಶದ ದಿನಾಂಕದ ಮೊದಲು ನಿಶ್ಚಯಿಸಿದ ಹಾಗೂ ಸಂಬಂಧಪಟ್ಟಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡ ವಿವಾಹ ಕಾರ್ಯಕ್ರಮಗಳಿಗೆ ಈ ಮೊದಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ. ಶವ ಸಂಸ್ಕಾರ ಕಾರ್ಯಕ್ಕೆ ಈ ಮೊದಲು ನಿಗದಿಪಡಿಸಿದಂತೆ ಅನುಮತಿಸಲಾಗಿದೆ. ಎಲ್ಲ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಒಂದು ಮೀಟರ್‌ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳತಕ್ಕದ್ದು ಹಾಗೂ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ, ಖಾಸಗಿ ಎಲ್ಲ ಅಧಿಕಾರಿಗಳು ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು. ಸಾರ್ವಜನಿಕ ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾದರು, ಕೋವಿಡ್‌-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಅನುಸರಿಸುವುದು. ಕಂಟೈನ್ಮೆಂಟ್‌ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆಗಳು ಇರುವುದರಿಂದ ಈ ಆದೇಶ ಅನ್ವಯಿಸುವುದಿಲ್ಲ. ಸರ್ಕಾರದ ಆದೇಶದನ್ವಯ 19-07-2020 ಮತ್ತು 26-07-2020 ರ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಎಂದು ಈ ಕಾರ್ಯಾಲಯದಿಂದ ಹೊರಡಿಸಿದ ಆದೇಶವು ಯಥಾ ಪ್ರಕಾರ ಜಾರಿಯಲ್ಲಿರುತ್ತದೆ.

ವಿನಾಯ್ತಿಗಳು:

ಕೃಷಿ ಸಂಬಂಧಿತ ಚಟುವಟಿಕೆಗೆ ಉದ್ಯೋಗ ಖಾತ್ರಿ ಕೆಲಸಕ್ಕೆ ಯಾವುದೇ ನಿರ್ಬಂಧವಿಲ್ಲ. ಬ್ಯಾಂಕ್‌ಗಳು, ಪೋಸ್ಟ್‌ ಅಫೀಸ್‌ಗಳು, ಬಿಎಸ್‌ಎನ್‌ಎಲ್‌ ಕಚೇರಿಗಳು, ಸರ್ಕಾರಿ ಕಚೇರಿಗಳು ಇನ್ನಿತರ ಅಗತ್ಯ ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಎಲ್ಲ ತರಹದ ಆಹಾರ ಧಾನ್ಯಗಳ ಸಂಸ್ಕರಣೆ ಘಟಕಗಳು ಮತ್ತು ಎಲ್ಲ ತರಹದ

ಕಾರ್ಖಾನೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.

ವ್ಯಕ್ತಿಗಳು ಮತ್ತು ಸರಕುಗಳ ಅಂತರ- ರಾಜ್ಯ ಮತ್ತು ಅಂತರ ಜಿಲ್ಲೆ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗೆ ಪ್ರತ್ಯೇಕ ಅನುಮತಿ, ಅನುಮೋದನೆ, ಇ-ಪರ್ಮಿಟ್‌ ಅಗತ್ಯವಿಲ್ಲ. ಆದಾಗ್ಯೂ, ಇತರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಜನರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಂದಾಯ ಇಲಾಖೆ (ಡಿಎಂ) ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳು, ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಎಲ್ಲ ಸಾರ್ವಜನಿಕ ಉಪಯುಕ್ತತೆಗಳಾದ ನೀರು, ನೈರ್ಮಲ್ಯ, ವಿದ್ಯುತ್‌ ಕಾರ್ಯಗಳು, ಹಾಲು ಪೂರೈಕೆ ಮತ್ತು ಪೆಟ್ರೋಲ್‌, ಡೀಸೆಲ್‌ ಬಂಕ್‌ಗಳು ಮತ್ತು ಇತರೆ ಅಗತ್ಯತೆ ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.

ಸಾರ್ವಜನಿಕರು ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios