ಗದಗ(ಜೂ.04): ಜಿಲ್ಲೆಯಲ್ಲಿ 35 ಕೋವಿಡ್‌-19 ಪಾಸಿಟಿವ್‌ ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಜೂನ್‌ 30 ರ ಮಧ್ಯರಾತ್ರಿಯ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹೀರೇಮಠ ಆದೇಶ ಹೊರಡಿಸಿದ್ದಾರೆ.

ಕೋವಿಡ್‌-19 ಹರಡುವಿಕೆಯನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಂಟೈನ್ಮೆಂಟ್‌ ಪ್ರದೇಶಗಳನ್ನು ಹೊರತುಪಡಿಸಿ ಪಾಲಿಸುವಂತೆ ಸೂಚಿಸಿರುತ್ತಾರೆ. ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಜನರ ಮತ್ತು ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ.

ಗದಗ: ಚರಂಡಿ ಪಕ್ಕದಲ್ಲಿ ನವಜಾತ ಶಿಶು ಶವ ಪತ್ತೆ

ಅಗತ್ಯ ವೈದ್ಯಕೀಯ ತುರ್ತು ಸೇವೆ ಹಾಗೂ ಸರಕು ಮತ್ತು ಸೇವೆಗಳ ಸ್ಥಿತಿಗಳನ್ನು ಹೊರತುಪಡಿಸಿ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಎಲ್ಲಾ ಚಟುವಟಿಕೆ ಮತ್ತು ವ್ಯಕ್ತಿಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸಿನಿಮಾ ಹಾಲ್‌, ಜಿಮ್‌, ಈಜುಕೊಳ, ಮನರಂಜನಾ ಉದ್ಯಾನವನ, ಚಿತ್ರಮಂದಿರ, ಬಾರ್‌ ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು ತೆರೆಯಬಾರದು. ಅಲ್ಲದೇ, ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ಇತರೆ ಗುಂಪು ಗೂಡುವಿಕೆ ಸಭೆಗಳನ್ನು ಮುಂದಿನ ಆದೇಶದ ವರೆಗೆ ನಿಷೇಧಿಸಲಾಗಿದೆ.

ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು(ಮಾಸ್ಕ್‌) ಧರಿಸಬೇಕು. ಮಾಸ್ಕ್‌ ಧರಿಸುವುದನ್ನು ಉಲ್ಲಂಘಿಘಿಸುವವರಿಗೆ ನಗರ ಪ್ರದೇಶದಲ್ಲಿ . 200 ಗ್ರಾಮೀಣ ಪ್ರದೇಶದಲ್ಲಿ . 100 ಪ್ರತಿ ಬಾರಿ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಗೆ ನಿಷೇಧಿಸಿದ್ದು, ಎಲ್ಲೆಂದರಲ್ಲಿ ಉಗಿಯುವುದನ್ನು ನಿರ್ಬಂಧಿಸಿದೆ. ಮದುವೆ ಸಮಾರಂಭದಲ್ಲಿ 50 ಜನರು ಮೀರದಂತೆ, ಶವ ಸಂಸ್ಕಾರಕ್ಕೆ 20ಕ್ಕೂ ಹೆಚ್ಚು ಜನರ ಕೂಡುವಿಕೆಯನ್ನು ನಿಷೇಧಿಸಲಾಗಿದೆ.

ಅಂತರ್‌ ರಾಜ್ಯ ಚಾಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಪ್ರಯಾಣಕ್ಕೆ ಪ್ರತ್ಯೇಕ ಅನುಮತಿ ಅಗತ್ಯವಿರುವುದಿಲ್ಲ. ಆದರೆ, ಸಂಚರಿಸ ಬಯಸುವ ರಾಜ್ಯದ ಪರವಾನಿಗೆ ಅಥವಾ ಬೇರೆ ರಾಜ್ಯದಿಂದ ಬರುವುದಾದಲ್ಲಿ ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಮಾಹಿತಿ ದಾಖಿಸುವುದು ಕಡ್ಡಾಯವಾಗಿದೆ. ಕೋವಿಡ್‌ -19 ನಿರ್ವಹಣೆಯ ಲಾಕ್‌ಡೌನ್‌ ಕ್ರಮಗಳನ್ನು ಹಾಗೂ ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಘಿಸುವ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಲಾಕ್‌ಡೌನ್‌ ಕಂಟೈನ್ಮೆಂಟ್‌ ಝೋನ್‌ಗಳಿಗೆ ಸೀಮಿತ:

ಲಾಕ್‌ಡೌನ್‌ ಜೂನ್‌ 30ರ ವರೆಗೆ ಧಾರಕ ವಲಯ (ಕಂಟೈನ್ಮೆಂಟ್‌ ಝೋನ್‌) ಗಳಲ್ಲಿ ಜಾರಿಯಲ್ಲಿರುತ್ತದೆ. ಧಾರಕ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗುವುದು, ವೈದ್ಯಕೀಯ ತುರ್ತು ಸ್ಥಿತಿಗಳನ್ನು ಹೊರತುಪಡಿಸಿ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ವಲಯಗಳಲ್ಲಿ ಅಥವಾ ಹೊರಗೆ ಜನರ ಚಲನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣವಿರುತ್ತದೆ. ಧಾರಕ ವಲಯಗಳಲ್ಲಿ ಅಗತ್ಯವಿರುವಂತೆ ತೀವ್ರವಾದ ಸಂಪರ್ಕ ಪತ್ತೆ ಹಚ್ಚುವಿಕೆ, ಮನೆ- ಮನೆಗೆ ಕಣ್ಗಾವಲು ಮತ್ತು ಇತರ ಕ್ಲಿನಿಕಲ್‌ ಹಸ್ತಕ್ಷೇಪ ಇರುತ್ತದೆ.

ಮೇಲಿನ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕು, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಆರೋಗ್ಯ ಸೇತು ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ವ್ಯಕ್ತಿಗಳು ಮತ್ತು ಸಮುದಾಯವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

ಮೇಲ್ಕಂಡ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ತಹಸೀಲ್ದಾರರು ಹಾಗೂ ಸಂಬಂಧಿತ ಇಲಾಖೆ, ಸಂಸ್ಥೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.