ಬೆಳಗಾವಿ(ಜು.29): ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿ​ಳಿ​ಸಿ​ದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಿದ ಬಳಿಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ದೃಢೀಕರಿಸಬೇಕು ಎಂದರು.

ನದಿಗೆ ಒಂದು ಲಕ್ಷ ಕ್ಯುಸೆಕ್‌ ಹರಿವು ಬಂದರೆ, ನೀರು ನುಗ್ಗುವಂತಹ ತೋಟದ ಮನೆಗಳು ಮತ್ತು ಗ್ರಾಮಗಳ ಪಟ್ಟಿ ತಯಾರಿಸಬೇಕು. ಕೃಷ್ಣೆಯಲ್ಲಿ ಎರಡು ಲಕ್ಷ ಕ್ಯುಸೆಕ್‌ ಮೀರಿದರೆ ಮಾಂಜರಿ, ಯಡೂರು, ಹಿಂಗಳಿ, ಚಂದೂರ, ಚಂದೂರ ಟೇಕ್‌ ಸೇರಿದಂತೆ ಏಳು ಗ್ರಾಮಗಳು ಮುಳುಗಡೆ ಆಗುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಮಹಾರಾಷ್ಟ್ರದ ಜಲಾಶಯಗಳು ಶೇ. 90 ಭರ್ತಿಯಾದಾಗ ಹಂತ ಹಂತವಾಗಿ ನೀರು ಬಿಡುಗಡೆ ಮಾಡಿದರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದಾದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮುಂಚಿತವಾಗಿ ಚರ್ಚಿಸಿ ಪರಿಸ್ಥಿತಿ ನಿರ್ವಹಣೆಗೆ ಪ್ರಯತ್ನಿಸಲಾಗುವುದು. ಖಾನಾಪುರ ಭಾಗದಲ್ಲಿ ಜಾಸ್ತಿ ಮಳೆಯಾದಾಗ ತಕ್ಷಣ ನವೀಲುತೀರ್ಥ ಜಲಾಶಯದ ನೀರಿನ ಪ್ರಮಾಣ ನಿರ್ವಹಣೆ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.

ಹುಕ್ಕೇರಿ: ತವರುಮನೆಗೆ ಹೋದ ಹೆಂಡ್ತಿ, ಇಬ್ಬರು ಮಕ್ಕ​ಳಿಗೆ ವಿಷ ಉಣಿಸಿ ತಂದೆ ಆತ್ಮ​ಹತ್ಯೆ

ಪರಿಹಾರ ಕೇಂದ್ರ ಸಿದ್ಧತೆಗೆ ಸೂಚನೆ:

ಪ್ರವಾಹ ಸಂದರ್ಭದಲ್ಲಿ ಈ ಬಾರಿ ಪರಿಹಾರ ಕೇಂದ್ರ ಆರಂಭಿಸುವಾಗ ಸಮುದಾಯ ಭವನದ ಬದಲು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲಿ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಪರಿಹಾರ ಕೇಂದ್ರಗಳಿಗೆ ನೋಡಲ್‌ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆಗೆ ಪಟ್ಟಿಸಿದ್ಧಪಡಿಸಬೇಕು. ಪರಿಹಾರ ಕೇಂದ್ರಗಳಿಗೆ ಆಹಾರ ಪದಾರ್ಥ ಒದಗಿಸುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಪಟ್ಟಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಬೋಟ್‌ಗಳು ಸುಸಜ್ಜಿತವಾಗಿರುವ ಬಗ್ಗೆ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಇನ್ನು ಹೆಚ್ಚಿಗೆ ಅಗತ್ಯವಿರುವ ಬೋಟ್‌ಗಳನ್ನು ಖರೀದಿಸಲು ಅಥವಾ ತುರ್ತು ಸಂದರ್ಭದಲ್ಲಿ ಪಡೆಯಲು ಸಂಬಂಧಿಸಿದ ಸಂಸ್ಥೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಸಿದ್ಧವಾಗಿಟ್ಟುಕೊಳ್ಳಿ. ಜಾನುವಾರು ಕೇಂದ್ರಗಳ ಸ್ಥಾಪನೆಗೆ ಪಟ್ಟಿಸಿದ್ಧಪಡಿಸಬೇಕು ಮತ್ತು ಕೂಡಲೇ ಅವುಗಳಿಗೆ ಮೇವು ಪೂರೈಸಲು ಅನುಕೂಲವಾಗುವಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಹಾರ ಕೇಂದ್ರಗಳ ಪಕ್ಕದಲ್ಲೇ ಜಾನುವಾರು ಕೇಂದ್ರಗಳನ್ನು ಆರಂಭಿಸಲು, ಅಗತ್ಯವಿರುವ ಔಷಧ ಪೂರೈಸಲು ಕ್ರಮಕೈಗೊಳ್ಳಬೇಕು ಎಂದರು.

ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ಕಳೆದ ಬಾರಿ ಪ್ರವಾಹ ಬಂದಾಗ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಕೂಡ ಮುಂಚಿತವಾಗಿ ಯೋಜನೆ ರೂಪಿಸಬೇಕು ಎಂದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಕೊಯ್ನಾ ಮತ್ತು ವಾರಣಾ ಜಲಾಶಯದಿಂದ ನೀರು ಬಿಡುಗಡೆ ಬಗ್ಗೆ ನಿರಂತರ ಮಾಹಿತಿ ವಿನಿಮಯದ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ಅನುದಾನ ಬಿಡುಗಡೆಯಾದರೆ ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಕೋವಿಡ್‌ ವರದಿ ವಿಳಂಬಕ್ಕೆ ನೋಟಿಸ್‌ ನೀಡಿ:

ಕೋವಿಡ್‌​-19ಗೆ ಸಂಬಂಧಿಸಿದಂತೆ ಗಂಟಲುದ್ರವ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳಿಸುವುದು ಕೆಲವು ಕಡೆ ತಡವಾಗುತ್ತಿರುವುದರಿಂದ ವರದಿ ಕೂಡ ವಿಳಂಬವಾಗುತ್ತಿದೆ. ಆದ್ದರಿಂದ ಸಂಗ್ರಹಿತ ಮಾದರಿಯನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲು ವಿಳಂಬ ಮಾಡುವ ತಾಲೂಕು ಆರೋಗ್ಯಾಧಿಕಾರಿಗಳಿಗೆ ನೋಟಿಸ್‌ ನೀಡಬೇಕು. ಕೋವಿಡ್‌-​19 ನಿಯಂತ್ರಣಕ್ಕೆ ಈಗಾಗಲೇ ತಾಲೂಕು ಮಟ್ಟದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದೆ. ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಕಗಣಲಿ ಮಾತನಾಡಿ, ಜಲಾಶಯಗಳಿಂದ ನೀರು ನಿಡುಗಡೆಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಸಮಿತಿ ರಚನೆ ಬಳಿಕ ನೀರು ಬಿಡುಗಡೆ ನಿರ್ವಹಣೆಗೆ ಅನುಕೂಲವಾಗಲಿದೆ. ಆದ್ದರಿಂದ ಸಮಿತಿ ರಚನೆಯ ಅಗತ್ಯವಿದೆ ಎಂದರು. ನೀರಾವರಿ ಇಲಾಖೆಯ ಎಂಜಿನಿಯರ್‌ ಸಿ.ಡಿ. ಪಾಟೀಲ ಮಾತನಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ವಿ. ಮುನ್ಯಾಳ, ನೀರಾವರಿ ಇಲಾಖೆಯ ಎಂಜಿನಿಯರ್‌ ಆರ್‌.ಬಿ. ಧಾಮಣ್ಣವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ನೀರಾವರಿ, ಪೊಲೀಸ್‌ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.