ಹುಬ್ಬಳ್ಳಿ(ಜ.29): ಹುಬ್ಬಳ್ಳಿಯಲ್ಲಿ ಫೆ .14ರಂದು ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದಾವೋಸ್‌ನಿಂದ ಸುಮಾರು 40ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಇಲ್ಲಿನ ದೇಸಾಯಿ ಸರ್ಕಲ್‌ನಲ್ಲಿ ರೈಲ್ವೆ ಕೆಳಸೇತುವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಾವೋಸ್‌ನಲ್ಲಿ ನಾನು ಮತ್ತು ಮುಖ್ಯಮಂತ್ರಿ ಸೇರಿದಂತೆ ಹಲವರು 40ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿದ್ದೆವು. ಅಲ್ಲಿನವರಿಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶದ ಕುರಿತು ಮಾಹಿತಿ ನೀಡಿ ಆಹ್ವಾನ ನೀಡಿದ್ದೆವು. ಇಲ್ಲಿನ ಮೂಲಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ. 40ಕ್ಕೂ ಕೈಗಾರಿಕೋದ್ಯಮಿಗಳು ಭಾಗವಹಿಸಲು ಒಪ್ಪಿರುವುದಾಗಿ ತಿಳಿಸಿದರು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದಾವೋಸ್‌ನಲ್ಲಿ ನಡೆದ ಸಮಾವೇಶದಲ್ಲಿ ಕರ್ನಾಟಕದಿಂದ 16 ವರ್ಷಗಳ ಬಳಿಕ ಭಾಗವಹಿಸಿದ್ದೆವು. ಹಿಂದೆ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದರ ನಂತರ ಕರ್ನಾಟಕದಿಂದ ಯಾರೂ ಭಾಗವಹಿಸಿರಲಿಲ್ಲ. ಇದೀಗ ನಾವು ಭಾಗವಹಿಸಿದ್ದೆವು ಎಂದು ತಿಳಿಸಿದರು.