ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ನಟಿ ಮಲೈಕಾ ವಸುಪಾಲ್ ತಿಳಿಸಿದರು.

ದಾವಣಗೆರೆ (ಏ.27): ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ದಾವಣಗೆರೆಯ ಸ್ಯಾಂಡಲ್‌ವುಡ್ ನಟಿ ಮಲೈಕಾ ವಸುಪಾಲ್ ತಿಳಿಸಿದರು. ನಗರದ ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಎಥ್ನಿಕ್ ಡೇ' ಹಾಗೂ 'ಚೈತ್ರ-2026' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ದಾವಣಗೆರೆಯಲ್ಲಿ ತಾಂತ್ರಿಕವಾಗಿ ಬಲಿಷ್ಠವಾದ ಶಿಕ್ಷಣ ಸಂಸ್ಥೆಯಿರಲಿ ಎಂಬ ಉದ್ದೇಶದಿಂದ ನಮ್ಮ ಅಜ್ಜಂದಿರು ಈ ಕಾಲೇಜನ್ನು ಪ್ರಾರಂಭಿಸಿದರು. ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದ ಬೆಳೆಯಬೇಕೆಂಬ ಹಂಬಲದಿಂದ ನನ್ನ ಕುಟುಂಬದ ಹಿನ್ನೆಲೆಯನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಈ ಕಾಲೇಜಿನ ಕಾರ್ಯಕ್ರಮದಲ್ಲಿ ಅದನ್ನು ಹೇಳಲೇಬೇಕಾದ ಅನಿವಾರ್ಯತೆ ಇತ್ತು ಎಂದರು. ನಾನು ಕೂಡ ಎಂಜಿನಿಯರ್ ಆಗಿದ್ದು, ಇದೇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದೇನೆ. ಕಾಲೇಜು ದಿನಗಳು ಕೇವಲ ಪಾಠಕ್ಕೆ ಸೀಮಿತವಾಗದೇ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಾನು ಕೂಡ ಪಾಲ್ಗೊಳ್ಳುತ್ತಿದ್ದೆ ಎಂದರು.

ಯತ್ನಿಕ್ ಡೇ- ಸಾಂಸ್ಕೃತಿಕ ಕಲರವ

ಸಮಾರಂಭದ ಹಿನ್ನೆಲೆ ಕಾಲೇಜಿನ ವಾತಾವರಣ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲರವದಿಂದ ಕಂಗೊಳಿಸುತ್ತಿತ್ತು. ಕಾಲೇಜು ದಿನಗಳು ಅಂದ್ರೇನೇ ಕಲರ್ ಫುಲ್. ಈ ನೆನಪುಗಳು ಸದಾ ಹಚ್ಚ ಹಸಿರು. ಇನ್ನು ಎಥ್ನಿಕ್ ಡೇ ಎಂದರೆ ಕೇಳಬೇಕೇ? ಕಲರ್ ಫುಲ್ ಬಟ್ಟೆ, ಹಾಡು, ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಬಗೆ ಬಗೆಯ ನೆನಪುಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಸೇರಿದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೇಷಭೂಷಣ, ಸಂಪ್ರದಾಯಗಳನ್ನು ಅನಾವರಣಗೊಳಿಸಿದರು.

ಗ್ರಾಮೀಣ ಸೊಗಡು, ಯಕ್ಷಗಾನ, ಸೇರಿದಂತೆ ಹಲವು ಸಾಂಪ್ರಾದಾಯಿಕ ಉಡುಗೆಯಲ್ಲಿ ಯುವಕ-ಯುವತಿಯರು ರಾರಾಜಿಸುತ್ತಿದ್ದರು. ಸೀರೆ, ಸಾಂಪ್ರದಾಯಿಕ ಉಡುಗೆಗಳ ಕಾರಬಾರು ಜೋರಾಗಿತ್ತು. ಗುಜರಾತಿ, ಕೊಡಗು, ಉತ್ತರ ಕರ್ನಾಟಕ ಪೇಟಾ, ಲಂಬಾಣಿ ನೃತ್ಯ, ಯಕ್ಷಗಾನ ಕಣ್ಮನ ಸೆಳೆದವು. ಕಾಲೇಜಿನ ಉಪನ್ಯಾಸಕರು ಬಿಳಿ ಶರ್ಟ್, ಬಿಳಿ ಪಚ್ಚೆ ಕಟ್ಟಿಕೊಂಡು, ತಲೆಯ ಮೇಲೆ ಕೇಸರಿ ಪೇಟ ಧರಿಸಿ ಸಂಭ್ರಮಿಸಿದರು. ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿಯರು ಎಂಜಾಯ್ ಮಾಡಿದರು. ನಿತ್ಯ ಪಾಠದ ಟೆನ್ಷನ್ ಮರೆತು ಕುಣಿದು ಕುಪ್ಪಳಿಸಿದರು.

ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕೇರಳ ಸಂಸ್ಕೃತಿಯನ್ನು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಸಂಸ್ಕೃತಿಗಳಾದ ತಿರುಪತಿ ದೇವಸ್ಥಾನ ಕಲಾಕೃತಿ, ಕುಚಿಪುಡಿ ಡ್ಯಾನ್ಸ್, ಶ್ರೀನಿವಾಸ ಕಲ್ಯಾಣ, ಪೌರಾಣಿಕ ಪಾತ್ರಗಳು, ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಉತ್ತರ ಪ್ರದೇಶ ಅಯೋಧ್ಯೆ ದೇವಸ್ಥಾನ ಕಲಾಕೃತಿ, ರಾಮಾಯಣ ನಾಟಕ, ಇ ಅಂಡ್ ಐ ವಿಭಾಗದ ವಿದ್ಯಾರ್ಥಿಗಳು ಎಲ್ಲಮ್ಮ ದೇವಿ ನಾಟಕ ಪ್ರಸ್ತುತಪಡಿಸಿದರು.