ದಾವಣಗೆರೆಯಲ್ಲಿ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಮೂಲದ ಯುವಕನೊಂದಿಗೆ ಪತ್ನಿ ಸಂಬಂಧ ಹೊಂದಿದ್ದಳು ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ.
ದಾವಣಗೆರೆ (ಫೆ.16): ಇಬ್ಬರೂ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದು, ಪರಸ್ಪರ ಪ್ರೀತಿಸಿ ಮನೆಯರವನ್ನು ಒಪ್ಪಿಸಿ ಮದುವೆ ಮಾಡಿಕೊಂಡ ಜೋಡಿ ಇವರದು. ಇವರ ಸಂಸಾರಕ್ಕೆ ಇಬ್ಬರು ಮಕ್ಕಳು ಕೂಡ ಸಾಕ್ಷಿಯಾಗಿದ್ದಾರೆ. ಆದರೆ, ಇತ್ತೀಚೆಗೆ ಹೆಂಡತಿ ಮೈಸೂರು ಮೂಲದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಬಿಟ್ಟಿಲ್ಲ. ಇದರಿಂದ ಮನನೊಂದ ಗಂಡ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಹೌದು, ಬೇರೊಬ್ಬನ ಜೊತೆಗೆ ಪತ್ನಿಯ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಮನನೊಂದ ಗಂಡ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಕೆಚ್ಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಪತಿ ಬಸವರಾಜ್ (37) ಆಗಿದ್ದಾನೆ. ಬಸವರಾಜ್ ಕಳೆದ 6 ವರ್ಷಗಳ ಹಿಂದೆ ಉಮಾ ಎನ್ನುವ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದನು. ಇವರ ಸಂಸಾರ ನಾಲ್ಕೈದು ವರ್ಷಗಳಿಂದ ಚೆನ್ನಾಗಿಯೇ ಇತ್ತು. ಬಡತನ ಕುಟುಂಬದ ನಡುವೆಯೂ ಇಬ್ಬರು ಮಕ್ಕಳನ್ನು ಮಾಡಿಕೊಂಡು ಸುಖ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು.
ಆದರೆ, ಇತ್ತೀಚೆಗೆ ಬಸವರಾಜನ ಪತ್ನಿ ಉಮಾ ಮೈಸೂರು ಮೂಲದ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಇದರಿಂದ ಕೋಪಗೊಂಡ ಗಂಡ ಹೆಂಡತಿಗೆ ಮನೆಯಲ್ಲಿ ತಿದ್ದಿ ಬುದ್ಧಿ ಹೇಳಿದ್ದಾನೆ. ಆರಂಭದಲ್ಲಿ ಪ್ರೀತಿಯಿಂದ, ನಂತರ ಬೈದು ಹೊಡೆದು ಬುದ್ಧಿ ಹೇಳಿದರೂ ಪತ್ನಿ ಮಾತ್ರ ಅನೈತಿಕ ಸಂಬಂಧ ಬಿಟ್ಟಿಲ್ಲ. ನಾನು ಪ್ರೀತಿಸಿ ಮದುವೆಯಾದ ಹೆಂಡತಿ ನನಗೆ ಬೇಕೇ ಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದರೂ ಸಿಗಲಿಲ್ಲ ಎಂದು ಮನನೊಂದು ನೇಣಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಡೆತ್‌ನೋಟಿನಲ್ಲಿ ಉಲ್ಲೇಖ ಮಾಡಿದ್ದಾನೆ.
ಇದನ್ನೂ ಓದಿ: ಮಹಿಳಾ ಅಧಿಕಾರಿಯನ್ನು ನಿಂದಿಸಿದ ಶಾಸಕರ ಪುತ್ರನಿಗೆ ಹಾಲಿನ ಅಭಿಷೇಕ!
ಮುಂದುವರೆದು, ನನ್ನ ಸಾವಿಗೆ ಕಾರಣವಾದ ಹೆಂಡತಿ ಮತ್ತು ಆಕೆಯ ಪ್ರೀಯಕರನಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಎರಡು ಮಕ್ಕಳನ್ನ ನನ್ನ ತಾಯಿ ಹಾಗೂ ಇಬ್ಬರು ಸಹೋದರು ಸಾಕಿ ಸಲಹಬೇಕು. ನನ್ನ ಹೆಸರಿನಲ್ಲಿ ದಾವಣಗೆರೆಯಲ್ಲಿ ಒಂದು ಸೈಟ್ ಇದೆ. ಜೊತೆಗೆ ಬ್ಯಾಂಕ್, ಎಲ್ ಐಸಿಯಲ್ಲಿ ಹಣವಿದೆ. ಇದರಲ್ಲಿ ಒಂದು ಬಿಡಿಗಾಸು ಕೂಡ ಪತ್ನಿಗೆ ನೀಡದಂತೆ ವಿನಂತಿಸಿ ಪತ್ರ ಬರೆದಿಟ್ಟಿದ್ದಾನೆ. ಇನ್ನು ಬಸವರಾಜ್ ಸಾವಿನ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಾವಿಗೆ ಕಾರಣವಾಗಿದ್ದಾರೆನ್ನಲಾದ ಆತನ ಪತ್ನಿ ಉಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಜಗಳೂರು ಪೊಲೀಸರು ಉಮಾಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
