ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಿ, ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ನೀಡಲು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ, ಪೌರಕಾರ್ಮಿಕರ ನೇಮಕಾತಿ, ಪಾರ್ಕ್ ಅಭಿವೃದ್ಧಿ ಮತ್ತು ಇ-ಖಾತಾ ಪ್ರಕ್ರಿಯೆ ಸರಳೀಕರಣಗೊಳಿಸುವಂತೆಯೂ ಅವರು ಸೂಚನೆ ನೀಡಿದರು.
ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಅನುಮೋದನೆ ನೀಡಿ, ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡಲು 50 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸುವುದಾಗಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಗರ ಪಾಲಿಕೆ ಹಾಗೂ ದೂಡಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂಡಾದ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಅನುಮೋದನೆ ನೀಡಿ, ಪ್ರಾಧಿಕಾರದಿಂದ ಕೈಗೆಟುಕುವ ದರದಲ್ಲಿ ಜನರಿಗೆ ನಿವೇಶನ ಹಂಚಿಕೆಗೆ 50 ಎಕರೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಲಾಗುವುದು ಎಂದರು.
ಪ್ರಾಧಿಕಾರದಿಂದ ಬಡಾವಣೆಗಳ ಅಭಿವೃದ್ಧಿ
ಕುಂದುವಾಡ ಸರ್ವೆ ನಂಬರಲ್ಲಿ ಪ್ರಾಧಿಕಾರದಿಂದ ನಿವೇಶನ ರಚಿಸಲು ಸ್ವಾಧೀನ ಮಾಡಿದ್ದ ಜಮೀನು ವಾಪಸ್ ನೀಡುವಂತೆ ರೈತರ ಒತ್ತಾಯವಿದೆ. ಯಾರು ಜಮೀನು ನೀಡಲು ಒಪ್ಪಿ ಬರುತ್ತಾರೋ ಅಂತಹ ರೈತರ ಜಮೀನು ಮಾತ್ರ ಪಡೆಯಬೇಕು. ಇಲ್ಲವಾದರೆ ನೇರ ಖರೀದಿ ಮೂಲಕ ಎಲ್ಲೆಲ್ಲಿ ಜಮೀನು ಸಿಗುತ್ತದೆ ಅಂತಹ ಕಡೆಗಳಲ್ಲಿ ಪ್ರಾಧಿಕಾರದಿಂದ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ನಿವೇಶನಗಳನ್ನಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿಗೆ ಬಾಕಿ ಇರುವ ಪೌರ ಕಾರ್ಮಿಕರ ನೇಮಕಾತಿಯನ್ನು ಕಾಲಮಿತಿಯೊಳಗೆ ಮುಗಿಸಬೇಕು. ಎಸ್‌ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಪೌರಕಾರ್ಮಿಕರ ಆರೋಗ್ಯ, ಅಂತಹವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲುಬಳಸಬೇಕು ಎಂದು ಸೂಚಿಸಿದರು.
ದಾವಣಗೆರೆ, ಹರಿಹರ ನಗರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಹಾಗೂ ಪ್ರಸ್ತುತ ಇರುವ ಪಾರ್ಕ್‍ಗಳಲ್ಲಿ ಸಾರ್ವಜನಿಕರಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ಚೇತನರಿಗೆ ಆಸನ ಸೌಲಭ್ಯ ಮಾಡಬೇಕು, ಬೀದಿದೀಪ, ಶೌಚಾಲಯ, ಕ್ರೀಡಾ ಸಾಮಗ್ರಿಗಳು ಅಲ್ಲಿರಬೇಕು. ಮಕ್ಕಳಿಗೆ ಅಪಾಯಕಾರಿ ಆಗುವಂತಹ ಯಾವುದೇ ಕ್ರೀಡಾ ವಸ್ತುಗಳನ್ನು ಅಳವಡಿಸಬೇಡಿ ಎಂದು ಹೇಳಿದರು.
ಇ-ಖಾತಾ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು. ಇದನ್ನು ಅಭಿಯಾನದ ರೀತಿ ಕೈಗೊಂಡು ಸರಳವಾಗಿ ಜನರಿಗೆ ಇ-ಖಾತಾ ದಾಖಲೆ ಸಿಗುವಂತೆ ನೋಡಿಕೊಳ್ಳಿ ಎಂದು ಸಚಿವ ಯತೀಂದ್ರ ಸೂಚನೆ ನೀಡಿದರು. ಆಗ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಪಾಲಿಕೆ ಸಿಬ್ಬಂದಿ ಇ-ಖಾತಾ ನೀಡುವ ವಿಷಯದಲ್ಲಿ ವಿಳಂಬ ಮಾಡುತ್ತಿದ್ದರು. ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿದಾಗ ಎಲ್ಲರೂ ಎಚ್ಚರವಹಿಸಿ, ಚುರುಕಾದರು ಎಂದು ಸಚಿವರ ಗಮನಕ್ಕೆ ತಂದರು.
2ನೇ ಹಂತದ ನಗರಗಳಲ್ಲಿ ನಗರೀಕರಣ ವೇಗ
ರಾಜ್ಯದಲ್ಲಿ ದಾವಣಗೆರೆ ಸೇರಿದಂತೆ 2ನೇ ಹಂತದ ನಗರಗಳಲ್ಲಿ ನಗರೀಕರಣ ವೇಗದಲ್ಲಿ ಸಾಗುತ್ತಿದೆ. ಹೈರೈಸ್ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿವೆ. ಜಿ+2 ಹಾಗೂ ಜಿ+3 ಮಾದರಿ ವಸತಿ ಕಟ್ಟಡಗಳ ನಿರ್ಮಾಣ, 21 ಮೀಟರ್ ಎತ್ತರದವರೆಗೆ ಕಟ್ಟಡಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಚಿಂತನೆ ನಡೆಯುಲಿ ಎಂದು ಹೇಳಿದರು.


