ಭದ್ರಾ ಡ್ಯಾಂನಿಂದ ನಾಲೆಗಳಿಗೆ ಏಕಾಏಕಿ ನೀರು ಹರಿಸುವುದನ್ನು ವಿರೋಧಿಸಿ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಐಸಿಸಿ ಸಭೆ ನಡೆಸದೆ ನೀರು ಬಿಟ್ಟಿರುವುದನ್ನು ಖಂಡಿಸಿ ದಾವಣಗೆರೆ ಭಾಗದ ರೈತರು ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟಿಸಿದ್ದಾರೆ.

ದಾವಣಗೆರೆ (ನ.18): ಭದ್ರಾ ಡ್ಯಾಂನಿಂದ ಬಲ ಮತ್ತು ಎಡ ದಂಡೆ ನಾಲೆಗಳಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲೇ ನಾಲೆಗೆ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೊನ್ನಾಳಿ ಕಾಂಗ್ರೆಸ್ ಶಾಸಕ ಡಿ.ಜಿ.ಶಾಂತನಗೌಡ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ಪತ್ರ ಪ್ರದರ್ಶಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಸಿಸಿ ಸಭೆಯನ್ನು ತಕ್ಷಣ ಕರೆದು, ಅಲ್ಲಿಯೇ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ, ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡುವೆ. ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲೇ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುವೆ. ನನ್ನ ಮನವಿಗೆ ಸ್ಪಂದಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ರಾಜೀನಾಮೆ ಪತ್ರ ಪ್ರದರ್ಶಿಸಿದರು.

ಇದು ನವೆಂಬರ್ ತಿಂಗಳು. ಬೇಸಿಗೆ ಬರಲು ಇನ್ನೂ ಮೂರ್ನಾಲ್ಕು ತಿಂಗಳಿದೆ. ಆದರೂ, ಬೇಸಿಗೆ ಹಂಗಾಮಿನ ಹೆಸರಿನಲ್ಲಿ ನ.15ರಂದು ಮಧ್ಯರಾತ್ರಿಯಿಂದ ಭದ್ರಾ ಬಲ ಮತ್ತು ಎಡ ದಂಡೆ ನಾಲೆಗಳಿಗೆ 10 ದಿನಗಳ ಕಾಲ 1 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಐಸಿಸಿ ಸಭೆ ನಡೆಸದೆ ನೀರು ಬಿಡಲು ಜಲ ಸಂಪನ್ಮೂಲ ಸಚಿವರು ಹೊರಡಿಸಿದ ಆದೇಶ ಅವೈಜ್ಞಾನಿಕ ಎಂದು ಅವರು ಆಕ್ಷೇಪಿಸಿದರು.

ಈ ಮಧ್ಯೆ, ಶಾಸಕ ಡಿ.ಜಿ.ಶಾಂತನಗೌಡ ಅವರನ್ನು ಭೇಟಿ ಮಾಡಿದ ಸಚಿವ ಕೆ.ಎಸ್‌.ಬಸವಂತಪ್ಪ ಅವರು, ರಾಜೀನಾಮೆ ಘೋಷಣೆ ನಿರ್ಧಾರವನ್ನು ವಾಪಸ್ ಪಡೆಯುವಂತೆ ಮನವೊಲಿಕೆ ಯತ್ನ ನಡೆಸಿದರು.

ಸಚಿವರ ಮನೆ ಮುತ್ತಿಗೆಗೆ ರೈತರ ಯತ್ನ:

ಇದೇ ವೇಳೆ, ಭದ್ರಾ ಡ್ಯಾಂನಿಂದ ಎಡ ಮತ್ತು ಬಲ ದಂಡೆ ನಾಲೆಗಳಿಗೆ 10 ದಿನ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ರೈತರು ದಾವಣಗೆರೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ರೈತರ ಆಕ್ರೋಶವೇಕೆ?:

ಭದ್ರಾ ಜಲಾಶಯದಿಂದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಭದ್ರಾವತಿ (ಮೇಲ್ಭಾಗ) ಮತ್ತು ದಾವಣಗೆರೆ (ಕೊನೆಯ ಭಾಗ) ರೈತರ ನಡುವೆ ಭಿನ್ನಾಭಿಪ್ರಾಯ ಮತ್ತು ನೀರಿನ ಹಂಚಿಕೆಯ ಅಸಮಾನತೆಯ ಆತಂಕವಿದೆ.

ಈಗ ರಾಜ್ಯ ಸರ್ಕಾರವು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯದೆ, ಕೇವಲ 10 ದಿನಗಳ ಕಾಲ 1 ಟಿಎಂಸಿ ನೀರು ಹರಿಸಲು ಆದೇಶಿಸಿದ್ದಕ್ಕೆ ದಾವಣಗೆರೆ ಭಾಗದ ರೈತರು ಆಕ್ರೋಶಗೊಂಡಿದ್ದಾರೆ. ನಾಲೆಯ ಆರಂಭದಿಂದ ಕೊನೆಯ ಭಾಗದವರೆಗೆ ನೀರು ತಲುಪಲು ಕನಿಷ್ಠ 15 ದಿನಗಳಾದರೂ ಬೇಕಾಗುತ್ತದೆ. ಕೇವಲ 10 ದಿನ ನೀರು ಬಿಟ್ಟರೆ ಅದು ಭದ್ರಾವತಿ ಸುತ್ತಮುತ್ತಲಿನ 15 ಕಿ.ಮೀ ವ್ಯಾಪ್ತಿಗೆ ಮಾತ್ರ ಸೀಮಿತವಾಗುತ್ತದೆ ಎಂಬುದು ದಾವಣಗೆರೆ ಭಾಗದ ರೈತರ ಆಕ್ರೋಶ.

ಅಲ್ಲದೆ, ಈಗ ತರಾತುರಿಯಲ್ಲಿ ನೀರು ಹರಿಸಿದರೆ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ, ಮುಂದಿನ ಬೇಸಿಗೆಯ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆಯಾಗುತ್ತದೆ ಎಂಬುದು ರೈತರ ಆತಂಕ.