ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೀಘ್ರ ಪತನವಾಗಲಿದೆ. ಉರುಳುವ ದಿನಗಳು ದೂರವಿಲ್ಲ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ.
ದಾವಣಗೆರೆ (ಫೆ.15): ಕೃಷಿ-ಕೃಷಿಕನಿಗೆ ಮಾರಕವಾದ ಮೂರೂ ಕೃಷಿ ಕಾಯ್ದೆ ಕೈಬಿಡುವಂತೆ, ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್‌ನಿಂದ ತಾಲೂಕಿನ ಅಣಜಿ ಗ್ರಾಮದಲ್ಲಿ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಅಣಜಿ ಗ್ರಾಮದ ದಿಗಂಬರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ತೈಲ, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಒತ್ತಾಯಿಸಿ ಉಪ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ, ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾದ ಕೇಂದ್ರದ ವಿರುದ್ಧ ಹಲವಾರು ತಿಂಗಳಿನಿಂದಲೂ ದೇಶದ ವಿವಿಧ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಆದರೆ, ರೈತರ ಕೂಗಿಗೆ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಮತ್ತೊಂದು ಕಡೆ ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಜನರ ಗಾಯದ ಮೇಲೆ ಬರೆ ಹಾಕುವ ಕೆಲಸ ಕೇಂದ್ರ ಮಾಡುತ್ತಿದೆ ಎಂದು ಆರೋಪಿಸಿದರು.
ವಿಜಯೇಂದ್ರ ಸಿಎಂ ಮಗ ಎನ್ನುವುದಕ್ಕಿಂತ ಜನರ ನಾಡಿಮಿಡಿತ ಅರಿತ ಉತ್ತಮ ಜನನಾಯಕ: ಸುತ್ತೂರು ಶ್ರೀ
ರೈತರು ಹೋರಾಟ ನಡೆಸಿದ್ದ ಸ್ಥಳಕ್ಕೆ ಹೋಗಿ ಅಹವಾಲು ಆಲಿಸದ ಪ್ರಧಾನಿ ನರೇಂದ್ರ ಮೋದಿಗೆ ನೆರೆಯ ದೇಶಕ್ಕೆ ಅಲ್ಲಿನ ಪ್ರಧಾನಿಯಾಗಿದ್ದವರು ಕರೆಯದಿದ್ದರೂ, ಹೋಗಿ ಊಟ ಮಾಡಿ ಬರುತ್ತಾರೆ. ಆದರೆ, ರೈತರು ಕೂಗುತ್ತಿದ್ದರೂ, ಅನ್ನದಾತನ ಕೂಗು ಮಾತ್ರ ಪ್ರಧಾನಿಗೆ ಕೇಳುತ್ತಲೇ ಇಲ್ಲ. ರೈತ ವಿರೋಧಿ, ಜನ ವಿರೋಧಿ ನೀತಿ, ಕಾಯ್ದೆಗಳನ್ನು ಜಾರಿಗೊಳಿಸಿ, ಅಗತ್ಯ ವಸ್ತುಗಳು, ತೈಲ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತು, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಒಂದು ವೇಳೆ ಸರ್ಕಾರವು ರೈತರು, ಜನರ ಬೇಡಿಕೆಗೆ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರವೇ ಉರುಳುವ ದಿನಗಳೂ ದೂರವಿಲ್ಲ ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಕೆ.ಎಚ್.ಓಬಳಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆದ್ನೆ ರಾಜೇಂದ್ರ, ತಾಪಂ ಸದಸ್ಯ ಚಂದ್ರಪ್ಪ, ಮುಖಂಡರಾದ ಕೊಟ್ರೇಶ ನಾಯ್ಕ, ರಾಜಾನಾಯ್ಕ, ಅಂಜಿನಪ್ಪ, ಮಾಯಕೊಂಡ ರುದ್ರೇಶ, ಕೊಗ್ಗನರು ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಶಂಭುಲಿಂಗಪ್ಪ, ಆಲೂರು ವೀರಭದ್ರಪ್ಪ, ಆನಗೋಡು ಗ್ರಾಪಂ ಮಾಜಿ ಅಧ್ಯಕ್ಷ ರವಿ, ಅಣಜಿ ಗ್ರಾಪಂ ಅದ್ಯಕ್ಷೆ ಜ್ಯೋತಿ ಶಶಿಕುಮಾರ, ಪಿ.ಎನ್.ಶಿವಪ್ರಕಾಶ, ಅಣಜಿ ಹೊನ್ನಪ್ಪ, ಬಸವಲಿಂಗಪ್ಪ, ರಾಮಗೊಂಡನಹಳ್ಳಿ ಶರಣಪ್ಪ, ಮೆಳ್ಳೆಕಟ್ಟೆಹನುಮಂತಪ್ಪ, ಆಲೂರು ಸೋಮಣ್ಣ, ಹುಲಿಕಟ್ಟೆಗ್ರಾಪಂ ಅಧ್ಯಕ್ಷ ಕರಿಯಪ್ಪ, ಬಸವರಾಜ, ಜ್ಞಾನೇಶ, ಮ್ಯಾಸರಹಳ್ಳಿ ಪ್ರಭು, ಗುಮ್ಮನೂರು ಲೋಕೇಶ, ಸಿದ್ದನೂರು ಪ್ರಕಾಶ, ಕಂದನಕೋವಿ ದೇವೇಂದ್ರಪ್ಪ, ಗ್ರಾಪಂ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 15, 2021, 3:42 PM IST